Monday, November 15, 2010

ಹದಿನಾರರ ಹರೆಯ - Sweet Teenage

ಹದಿನಾರು, ಆಹಾ ಆ ವಯಸ್ಸೇ ಸೊಗಸು. ಹದಿನಾರರ ಅಸು ಪಾಸು ಇದ್ದಾಗಿನ ದಿನಗಳನ್ನು ನೆನೆಸಿಕೊಳ್ಳಿ. S .S .L .C . ಮುಗಿಯಲಿಕ್ಕೆ ಬಂದಿರುವ ಸಮಯ, ಕಾಲೇಜು ಕಟ್ಟೆ ಹತ್ತೋ ಸಮಯ. ಎಂಥಾ ಹುರುಪು, ಎಂಥಾ ಉತ್ಸಾಹ, ಏನೋ ಧೈರ್ಯ, ಏನೋ ಛಲ.ಜಗತ್ತು ಎಂದರೇನು ಎಂದು ಇನ್ನು ಕಲಿಯೋಕೆ ಶುರು ಆಗಿಲ್ಲಾ, ಆಗಲೇ ಲೋಕವೆಲ್ಲಾ ಸುತ್ತಿ ಎಲ್ಲಾ ತಿಳಿದುಕೊಂಡವರಂತೆ ಮಾತುಗಳು. ಮನೆಯಲ್ಲಿ ಹಿರಿಯರ ಮಾತಿಗೆ ಕ್ಯಾರೆ ಅನ್ನೋದಿಲ್ಲ, ತನ್ನದೇ ಅದ ಒಂದು ಹೊಸ ಲೋಕ ಸೃಷ್ಟಿಸುವ ಹುಂಬತನ.

ಮುಖದಲ್ಲಿ ಹೂ ಅರಳಿದ ಹಾಗೆ ನಗು, ತನುವಲ್ಲಿ ಚಿಮ್ಮುವ ಕಾಂತಿ. ನಡೆಯಲ್ಲಿ ಬದಲಾವಣೆ, ನುಡಿಯಲ್ಲಿ ಬದಲಾವಣೆ, ಹರೆಯ ಬಂದರೆ ಹೀಗೇ. ಎಲ್ಲಾ ನನ್ನದು, ನನಗೆ ಬೇಕಾದುದನ್ನೆಲ್ಲಾ  ಪಡೆಯಬೇಕು ಎನ್ನುವ ಹಂಬಲ.  ನಾಳೆಯ ಭಯ ಇಲ್ಲ, ನಿನ್ನೆಯ ಚಿಂತೆ ಇಲ್ಲ.
ಗೆಳೆಯ/ಗೆಳತಿಯರ  ಗುಂಪು ಬೆಳೆಸೊ  ಸಮಯ, ಬೇರೆಯವರಿಗೆ ನಾನು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎನ್ನುವದು ಮುಖ್ಯವಾಗಿ ಬಿಡುವ ಸಮಯ.  ಕನಸು ಕಾಣುವ ಪರ್ವ.

ಸುಮ್ಮನೆ ಒಂದು ಸಾರಿ PU ಕಾಲೇಜು ಕಡೆ ಹೋಗುವ ಹುಡುಗ/ಹುಡುಗಿಯರ ನೋಡಿ, ಅವರ  ಮುಖದಲ್ಲಿ ಇರೋ ನಗು, ಕಳೆ, ಆಕಾಶದಲ್ಲಿ ತೇಲಾಡುವ  ಹಾಗೆ ಹಗುರವಾದ ಮನಸ್ಸು,  ಬೀದಿಯಿರುವುದೇ ತಾವು ನಡೆಯಲು ಮಾತ್ರ, ಅಲ್ಲಿ ನಡೆಯುತ್ತಿರುವುದು ತಾವಷ್ಟೇ ಎಂಬ ರೀತಿಯ ವರ್ತನೆ, ಅವರ ಉಡಾಫೆ, ಅವರ ಕೀಟಲೆಗಳು ಇದನೆಲ್ಲ ನೋಡಿದರೆ  ನಿಮಗೂ ಕೂಡ ಅಸೂಯೆ ಹುಟ್ಟುತ್ತದೆ.

H S ವೆಂಕಟೇಶಮೂರ್ತಿ ಅವರು ಹೇಳುವಂತೆ

"ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು,
ಮಾತು ಮಾತಿಗೆಕೋ  ನಗೆ, ಮರು ಗಳಿಗೆಯೇ ಮೌನ"

ನಗಲಿಕ್ಕೆ ಕಾರಣಬೇಡ, ಮೌನಕ್ಕೂ ಕಾರಣಬೇಡ.

ಹದಿನಾರು ಬಂದರೆ ಅದೊಂತರ ಬೇರೆಯದೇ ಹುಚ್ಚು.

ಹರೆಯ ಕಳೆದು ಹೋದಂತೆ ಆ ದಿನಗಳನ್ನು ನೆನೆಯುತ, ಆ ಹದಿ ಹರೆಯ ಅಷ್ಟು ಚಿಕ್ಕದ್ಯಾಕಿತ್ತು ಅನಿಸುತ್ತದೆ.
ನಮಗೆ ಮತ್ತೆ ಹರೆಯ ಬರುವುದೇ? ಮತ್ತೆ ನಾವು ಆ ನಗೆ ಧರಿಸುವೇವೆ?