Tuesday, June 12, 2012

ಪುರಾಣ

ಪುರಾಣ ಅಥವಾ ಪೌರಾಣಿಕ ಕಥೆಗಳು ಜನಪದ ಕಥೆಗಳ ಹಾಗೆ. ಅವುಗಳನ್ನು ಮೂಲತ: ವ್ಯಾಸ, ವಾಲ್ಮೀಕಿ ಮುಂತಾದ ಮಹರ್ಷಿಗಳು ಬರೆದರು ಅಂತ ಹೇಳುವರು, ಆದರೆ ಅವರು ಅವುಗಳನ್ನು ಸತ್ಯ ಸಂಗತಿಗಳನ್ನು ಆಧರಿಸಿ ಬರೆದರೋ ಅಥವಾ ಕಲ್ಪಿಸಿಕೊಂಡು ಬರೆದರೋ ಕಂಡವರಾರು?  ಹೇಗೆ ಜನಪದ ರಚನೆಗಳಿಗೆ ಆಧಾರವಿಲ್ಲವೋ ಹಾಗೆಯೇ ಪುರಾಣಗಳಿಗೆ ದಾಖಲೆಗಳಿಲ್ಲ, ದಾಖಲೆಗಳು ಬೇಕಾಗಿಯೂ ಇಲ್ಲ. ಹಾಗೆ ದಾಖಲೆ, ಪುರಾವೆ ಹುಡುಕಲಿಕ್ಕೆ ಪುರಾಣವು ಚರಿತ್ರೆಯಲ್ಲ. ಚರಿತ್ರೆ ಮತ್ತು ಪುರಾಣಗಳಿಗೆ ಇರುವ ವ್ಯತ್ಯಾಸವೇ ಅದು. ಅದಕ್ಕೆ ನಮ್ಮ ಹಿರಿಯರು ಅವನ್ನು ಪುರಾಣಯೆಂದಿರುವದು. ಪುರಾಣದ ಸತ್ಯಾಸತ್ಯತೆ ಚರ್ಚಿಸುವದೂ ತರವಲ್ಲ. ರಾಮ ಕೃಷ್ಣ ನಿಜವಾಗಿಯೂ ಇದ್ದರೆ? ರಾಮಾಯಣ, ಮಹಾಭಾರತ ನಿಜವಾಗಿಯೂ ಘಟಿಸಿತೆ? ರಾಮ ಸೇತು, ದ್ವಾರಕಾ ನಗರಿ ಅಸ್ತಿತ್ವ ನಿಜವೇ? ಎಂದೆಲ್ಲಾ  ಪ್ರಶ್ನಿಸುವದು ಸರಿಯಲ್ಲ. ರಾಮನ ನೀತಿ ಪಾಲನೆ, ಕೃಷ್ಣನ ಧರ್ಮ ಬೋಧನೆ, ಹರಿಶ್ಚಂದ್ರನ ಸತ್ಯ ನಿಷ್ಠಯಲ್ಲಿ ನಮಗೆ ವಿಶ್ವಾಸವಿರಬೇಕು.

ರಾಮ-ಲಕ್ಷ್ಮಣ, ಕೃಷ್ಣ-ಅರ್ಜುನ, ವಿಶ್ವಾಮಿತ್ರ-ಮೇನಕೆ ಇಮರೆಲ್ಲ ನಿಜವಾಗಿಯೂ ನಮ್ಮ ನೆಲದ ಮೇಲೆ ನಡೆದಾಡಿದರೆ? ಅವರ ಪವಾಡಗಳು, ಮಹಿಮೆಗಳು ನಿಜವೇ? ಕನಕನಿಗೊಸ್ಕರ ಶ್ರೀ ಕೃಷ್ಣ ಪರಮಾತ್ಮ ನಿಜವಾಗಿಯೂ ದರ್ಶನ ಕೊಟ್ಟನೆ? ಜ್ಞಾನದೇವ ಗೋಡೆಯನ್ನು ಹೇಗೆ ಚಲಿಸುವಂತೆ ಮಾಡಿದ? ಎನ್ನುವ ಚರ್ಚೆ ಅನವಶ್ಯ.

ರಾಮ ತನ್ನ ಸಂಕುಚಿತ ಸ್ವಭಾವದಿಂದ ಸೀತೆಯ ಪಾವಿತ್ರ್ಯತೆಯನ್ನು ಅಗ್ನಿಪರಿಕ್ಷೆಗೆ ಏಕೆ ಗುರಿಪಡಿಸಿದನು ಅನ್ನುದವಕ್ಕಿಂತ ಸೀತೆಯ ಪಾವಿತ್ರ್ಯತೆಯನ್ನು ಅಗ್ನಿ ಕೂಡ ಸುಡಲಿಲ್ಲ ಎನ್ನುವದು ಮುಖ್ಯ ಸಂದೆಶವಾಗಬೇಕು. ಕೃಷ್ಣನು ಹದಿನಾರು ಸಾವಿರ ಹೆಂಗಳೆಯರ ಜೊತೆ ಸರಸ ಸಲ್ಲಾಪವಾಡಿದನು ಅನ್ನುವದಕ್ಕಿಂತ ಅಷ್ಟೂ ಮಹಿಳೆಯರನ್ನು ಸೆರೆಯಿಂದ ಬಂಧ ಮುಕ್ತಗೊಳಿಸಿ ಆಶ್ರಯ ನೀಡಿದ ಎನ್ನುವದನ್ನು ಗಮನಿಸಬೇಕು. ತ್ರಿಶಂಕು ಮಹಾರಾಜನು ಸ್ವರ್ಗವು ಇಲ್ಲದೆ ಭೂಮಿಯೂ ಇಲ್ಲದೆ ಮಧ್ಯದಲ್ಲಿ ಅಬ್ಬೆಪಾರಿಯಾದ ಎಂದು ಅಣುಕಿಸುತ್ತ 'ತ್ರಿಶಂಕು ಸ್ತಿತಿ' ಎಂಬ ವಿಷೆಶಾರ್ಥ ಪದಗಳನ್ನು ಸೃಷ್ಟಿಸುವ ಬದಲಿ, ವಿಶ್ವಾಮಿತ್ರನು  ತಂದೆಗೊಸ್ಕರ ಸ್ವರ್ಗವನ್ನೇ ಸೃಷ್ಟಿಸಿದ ಸಾಹಸವನ್ನು ಅನುಸರಿಸಬೇಕು.

ಹೇಗೆ ನಾವು ತೆನಾಲಿ ರಾಮ ಮತ್ತು ಬೀರಬಲ್ ರ ಕಥೆಗಳನ್ನು ಕೇಳಿ ತಿಳಿದು ಮನರಂಜನೆಗೋಸ್ಕರ ನಂಬಿ ಆನಂದಿಸುತ್ತೆವೋ ಹಾಗೆಯೇ ಪೌರಾಣಿಕ ಕಥೆಗಳನ್ನು ಆಧ್ಯಾತ್ಮಗೋಸ್ಕರ ಅರ್ಥೈಸಿಕೊಂಡು ನಿತ್ಯ ಜೀವನದ ಸನ್ ನಡತೆಗೋಸ್ಕರ ವಿಶ್ವಾಸವಿಟ್ಟು ಅನುಸರಿಸಬೆಕು. ಪುರಾಣ ಕಥೆಗಳನ್ನು ಋಣಾತ್ಮಕ ಭಾವನೆಯಿಂದ ನೋಡುವ ಬದಲಿ ಅದರ ಧನಾತ್ಮಕ ಅಂಶಗಳನ್ನು ಅರಿತು ಅನುಸರಿಸಬೇಕು. ಪುರಾಣಗಳು ನಮ್ಮ ಮನ ಶುಧ್ಧಿಗೋಸ್ಕರ ರಚಿತವಾದ ಕೃತಿಗಳು, ದಿಕ್ಕು ತಪ್ಪಿದ ಮನಸ್ಸಿಗೆ ದಾರಿ ತೋರಿಸವ ದಾರಿದೀಪಗಳು, ಸನ್ಮಾರ್ಗದೆಡೆಗೆ ನಡೆಸೋ ದೀವಟಿಗೆಗಳು, ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸೋ ಜ್ಯೋತಿಗಳು.