Saturday, December 19, 2015

ಕೃಷಿ ಅಭ್ಯಾಸದ ನನ್ನ ಪ್ರಥಮ ಹೆಜ್ಜೆ

ಇತ್ತೀಚಿಗೆ ನನಗೆ ಕೃಷಿಯಲ್ಲಿ ತುಂಬಾ ಆಸಕ್ತಿ ಬರತಾಯಿದೆ, ಅದು ಬಹುಶಃ ಸಾವಯವ ಕೃಷಿಯ ಬಗ್ಗೆ ಗೊತ್ತಾದ ಮೇಲೆ ಇನ್ನೂ ಹೆಚ್ಚಾಗಿದೆ. ಕೃಷಿಯ ನನ್ನ ಅಭ್ಯಾಸದ ಮೊದಲ ಹೆಜ್ಜೆಯನ್ನ ಇಲ್ಲಿ ಅಕ್ಷರಗಳಲ್ಲಿ ಮೂಡಿಸಲು ಪ್ರಯತ್ನಿಸಿದ್ದೇನೆ.

ನನಗೆ ಎಲ್ಲಾದರೂ, ಏನಾದರೂ ಸಾವಯವದ ಬಗ್ಗೆ ಒಂಚೂರು ಓದೋಕ್ಕೆ ಅಂತ ಸಿಕ್ಕರೆ ಬಿಡದೇ ಒದತಾಯಿದ್ದೆನೆ. ಹಾಗೆಯೇ ಓದುತ್ತಿರುವಾಗ ನಾರಾಯಣ ರೆಡ್ಡಿ, ಕಣೆರಿ ಮಠ, ಸುಭಾಷ ಪಾಳೆಕಾರ, ಗದಗಿನ ಅಯ್ಯಪ್ಪನವರು, ಹುನಗುಂದದ ಮಲ್ಲಣ್ಣ ನಾಗರಾಳರು, ತಪೋವನದ ಆನ್ ಮತ್ತು ಬ್ರುಸ್ ಅವರ ಬಗ್ಗೆ ಗೊತ್ತಾಯಿತು. ಇದಕ್ಕಿಂತಲೂ ಮುಂಚೆ ದಿನಪತ್ರಿಕೆಯಲ್ಲಿ ಬರುವ ಶ್ರೀ ಪಡ್ರೆಯವರ ನೀರಿನ ನಿರ್ವಹಣೆಯ ಲೇಖನಗಳನ್ನ ಅಲ್ಪ ಸ್ವಪ್ಲ ಓದಿದ್ದೆ. ಕ್ಯಾಪ್ಟನ್ ಗೋಪಿನಾಥರ ಅತ್ಮಚರಿತ್ರೆಯಲ್ಲಿಯ ಅವರ ಕೃಷಿ ಪ್ರಯೋಗಗಳ ಬಗ್ಗೆ ಓದಿದ್ದೆ. ಹಾಗೆಯೇ ರಾಜೀವ್ ದೀಕ್ಷಿತ್ರು ಜಮಖಂಡಿಗೆ ಬಂದಾಗ ಅವರ ಭಾಷಣ ಕೂಡ ಕೇಳಿದ್ದೆ, ಇದೆಲ್ಲದರ ಪರಿಣಾಮವಾಗಿ ಸಾವಯವ ಅಥವಾ ಸಾಂಪ್ರದಾಯಿಕ ಪದ್ಧತಿಯ ಕಡೆಗೆ ಹೆಚ್ಚು ಹೆಚ್ಚು ವಾಲುತ್ತಲಿದ್ದೆ. ಸಾವಯವ ಪದ್ಧತಿಗೆ ಮರಳಿರುವ ರೈತರ ಸಂಪರ್ಕ ಬೆಳೆಸಲು ಅವರ ದೂರವಾಣಿ ಸಂಖ್ಯೆಗಳನ್ನು ಹುಡುಕಿ ಬರೆದಿಟ್ಟುಕೊಳ್ಳುತಾ ಹೋದೆ. ಹೀಗೆಯೇ ಒಂದು ಸಾರಿ ಈ ಎಲ್ಲಾ ವಿಷಯಗಳುತಲೆಗೆ ತುಂಬಾ ವಿಪರೀತವಾಗಿ ಏರಿದಾಗ, ಆ ಕೂಡಿಟ್ಟ ನಂಬರಗಳಿಗೆ ರಿಂಗಣಿಸಿದೆ, ಒಂದಿಬ್ಬರ ಸಂಖ್ಯೆ ಚಾಲನೆಯಲ್ಲಿರಲಿಲ್ಲ, ಇನ್ನೊಂದಿಬ್ಬರು ಕರೆ ಸ್ವೀಕರಿಸಲಿಲ್ಲ, ಮಗದೊಂದಿಬ್ಬರು ಮಾತಾಡೋಕ್ಕೆ ನನಗೆ ಬೇರೆ ಸಮಯ ಕೊಟ್ಟರು, ಆದರೆ ಇಬ್ಬರು ಮಾತ್ರ ನಾನು ಕರೆಮಾಡಿದಾಗ ಸರಿಯಾಗಿ ಮಾತನಾಡಿ ನನ್ನ ಪ್ರಶ್ನೆಗಳಿಗೆ ಸಮರ್ಪಕವಾಗಿ ಪ್ರತಿಕ್ರಿಯಿಸಿದರು. ಅಂತಹ ಸಂಖ್ಯೆಗಳನ್ನ ಭವಿಷ್ಯದ ದೃಷ್ಟಿಯಿಂದ ಕಂಪ್ಯೂಟರ್ ನಲ್ಲಿ ಒಂದುಕಡೆ ಸುಲಭವಾಗಿ ಸಿಗುವಂತೆ ಭದ್ರವಾಗಿ ಬರೆದಿಟ್ಟೆ.

ನನಗೆ ನಾರಾಯಣ ರೆಡ್ಡಿಯವರನ್ನ ಭೆಟ್ಟಿಯಾಗೊಕ್ಕೆ ಸಲಹೆ ಕೊಟ್ಟವರು ಬನಹಟ್ಟಿಯ ಶ್ರೀಯುತ ಶಂಕರ ಬಣಕಾಲ ಅವರು. ಅಷ್ಟೇ ಅಲ್ಲದೆ ಫೋನನಲ್ಲಿ ಮಾತಾಡಿದ ಅರ್ಧ ಘಂಟೆಯಲ್ಲೇ ಶಂಕರ ಅವರು ಎಷ್ಟೊಂದು ವಿಚಾರಗಳನ್ನ ತಿಳಿಸಿಕೊಟ್ಟರೆಂದರೆ ನನಗೆ ಅವರನ್ನೇ ನಾನು ನನ್ನ ಮಾರ್ಗದರ್ಶಿಯಾಗಿ(ಮೆಂಟರ್) ಸ್ವೀಕರಿಸಬೇಕು ಅಂತ ನಿರ್ಧರಿಸಿದೆ. ನಾನು ಬೆಂಗಳೂರಿನಲ್ಲೇ ಇದ್ದರೂ ಕೂಡ ಇಲ್ಲೇ ಹತ್ತಿರದಲ್ಲಿರುವ ದೊಡ್ಡಬಳ್ಳಾಪುರದ ನಾರಾಯಣ ರೆಡ್ಡಿಯವರ ಸಂಪರ್ಕ ಸಂಖ್ಯೆ ಸಿಕ್ಕ ಮೇಲೆ ಅವರನ್ನ ಅವರ ತೋಟದಲ್ಲೇ  ಭೆಟ್ಟಿಯಾಗೋದಕ್ಕೆ ಒಂದು ವರ್ಷದವರೆಗೂ ಆಗಿರಲಿಲ್ಲ. ಆದರೆ ಇದರ ಮಧ್ಯದಲ್ಲೇ ಅವರು ಒಂದು ಸಲ ನನ್ನ ರೈಲು ಪ್ರಯಾಣದಲ್ಲಿ ನನ್ನ ಸಹ ಪ್ರಯಾಣಿಕರಾಗಿ ನನಗೆ ಆಕಸ್ಮಿಕವಾಗಿ  ಸಿಕ್ಕರು. ಆಗ ಕೂಡ ಒಂದು ಘಂಟೆ ಮಾತುಕತೆಯಲ್ಲಿ ಅವರು ನನಗೆ ಕೃಷಿಯ ಬಗ್ಗೆ ತುಂಬಾ ಮಾಹಿತಿಕೊಟ್ಟು ಕೃಷಿಯ ಮೇಲೆ ನನ್ನ ವಿಶ್ವಾಸವನ್ನು ಇನ್ನೂ ಹೆಚ್ಚಿಸಿದರು. ಇದೆಲ್ಲ ಆದ ಮೇಲೆ ನಾನು ಒಂದು ದಿನ ಅವರಿಗೆ ಫೋನಾಯಿಸಿ ಒಂದು ವಾರಾಂತ್ಯ ಅವರಲ್ಲಿಗೆ ಬರುವದಾಗಿ ತಿಳಿಸಿ, ಅವರ ಉಪಸ್ಥಿತಿಯನ್ನು ಖಚಿತಪಡಿಸಿಕೊಂಡೆ. ಅದರಂತೆ ಮರಳೆನಹಳ್ಳಿಗೆ ಹೋಗಿ ಭೆಟ್ಟಿಯಾಗಿ ಮಾತುಕತೆ ಮುಗಿಸಿಕೊಂಡು ಬಂದೆ. 

ರೆಡ್ಡಿಯವರಿಗೆ ಕೃಷಿಯಲ್ಲಿ ಎಷ್ಟು ಆತ್ಮ ವಿಶ್ವಾಸಯಿದೆ ಎಂದು ಹೇಳುವದಕ್ಕೆ ಈ ಒಂದು ಮಾತು ಮಾತ್ರ ಸಾಕು. ನಾನು ನನ್ನ ಜಮೀನಿನಲ್ಲಿ ನೀರಿನ ಕೊರತೆಯ ಬಗ್ಗೆ ನಿರಾಸೆಯಾಗಿದೆ ಅಂತ ವಿಷಾದ ವ್ಯಕ್ತಪಡಿಸಿದಾಗ ಅವರ ಉತ್ತರ ಹೀಗಿತ್ತು "ನನ್ನನ್ನ ರಾಜಸ್ಥಾನದ ಥಾರ್ ಮರಭೂಮಿಯಲ್ಲಿ ಬಿಡಿ ನಾನು ಅಲ್ಲೂ ಕೃಷಿ ಮಾಡಿ ತೋರಿಸುತ್ತೇನೆ" ಎಂದು. ಈ ಪರಿಯ ವಿಶ್ವಾಸ ನಾನು ಹರೆಯದ ಯಾವ  ಹುಡುಗರಲ್ಲಿಯೂ ನೋಡಿಲ್ಲ,  ನನ್ನ ಸುತ್ತಮುತ್ತ ಇರುವ ಯಾವ ಪರಿಣಿತ ರೈತರಲ್ಲಿಯೂ ಕಂಡಿಲ್ಲ. ಎಲ್ಲ ಸಾಮರ್ಥ್ಯವಿದ್ದರೂ ಬರಿ ಮಳೆ ಮತ್ತು ಬರದ ಹೆಸರು ಹೇಳಿ, ನಷ್ಟವಾಯಿತು ಅಂತ ದುಃಖಿಸುತ್ತ ಕೈಚೆಲ್ಲುವ ಯುವ ರೈತರ ಮುಂದೆ ೮೦ರ ಇಳಿವಯಸ್ಸಿನ ರೆಡ್ಡಿಯವರ ಧೈರ್ಯ, ಆತ್ಮಸ್ಥೈರ್ಯ ಎಂಥದ್ದು ಎಂದು ನೋಡಿ ಅಚ್ಚರಿ ಪಡಬೇಕು. ಅವರು ಪ್ರತಿ ತಿಂಗಳು ಮೂರು ದಿನಗಳ ಕೃಷಿಯ ತರಬೇತಿ ಕೊಡುತ್ತಾರೆ. ಇದು ತಿಂಗಳಿನ ಯಾವುದಾದರೊಂದು ಶುಕ್ರವಾರದಿಂದ ಭಾನುವಾರವರೆಗೂ ಇರುತ್ತದೆ.  

ರೆಡ್ಡಿಯವರು ಕೂಡ ಮೊದಲು ರಾಸಾಯನಿಕ ಗೊಬ್ಬರ ಪದ್ಧತಿಯಲ್ಲಿ ಕೃಷಿ ಮಾಡಿ, ನಂತರ ಸಾವಯವದ ಮಹತ್ವ ಅರಿತು ಅದನ್ನ ಅನುಸರಿಸಿಕೊಂಡವರು. ಹೀಗಾಗಿ ಅವರಿಗೆ ಎರಡರದೂ ಜ್ಞಾನವಿದೆ.  

ಸಾವಯವ ಇಂಗಾಲ ಕೊರತೆ ಮತ್ತು ಸುಲಭ ಪರಿಹಾರಗಳು - 
ರಾಸಾಯನಿಕ ಗೊಬ್ಬರ ನಮ್ಮ ಭಾರತದ ರೈತರಿಗೆ ಬಂದಿದ್ದು ಸುಮಾರು ೧೯೬0 ರ ಸಾಲಿನಲ್ಲಿ. ಅದಕ್ಕಿಂತ ಮುಂಚೆ ನಮ್ಮ ದಕ್ಷಿಣ ಭಾರತದ ಪ್ರಸ್ತಭೂಮಿಯ ೧೦೦ ಕೆಜಿ ಮಣ್ಣಿನಲ್ಲಿ  ಪ್ರತಿಶತ ೩ ರಷ್ಟು ಸಾವಯವ ಇಂಗಾಲ ಇತ್ತು, ಅದಕ್ಕೆ ಕಾರಣ ಆಗಿನ ನಮ್ಮ ರೈತರು ಸಾವಯವ ಪದ್ಧತಿಯನ್ನೇ ನೆಚ್ಚಿಕೊಂಡಿದ್ದರು. ಆದರೆ ಈಗ ಆ ಹ್ಯುಮಸ್ ೦.೩ ರಷ್ಟಕ್ಕೆ ಇಳಿಕೆಯಾಗಿದೆ, ಅದಕ್ಕೆ ಕಾರಣ ೧೯೬೦ ರಲ್ಲಿ ಬಂದ ರಾಸಾಯನಿಕ ಗೊಬ್ಬರ. ಈ ರಾಸಾಯನಿಕ ಗೊಬ್ಬರದ ಹಿಂದೆ ಒಂದು ಬಲಿಷ್ಟವಾದ ದುಷ್ಟಶಕ್ತಿಯಿದೆ, ಅದರಲ್ಲಿ ಸರಕಾರಗಳು, ಅಧಿಕಾರಿಗಳು, ಕಂಪನಿಗಳು, ವಿಜ್ಞಾನಿಗಳು ಎಲ್ಲರೂ ಸೇರಿದ್ದಾರೆ. ಕಂಪನಿಗಳ ಲಂಚದ ಮೋಹದಲ್ಲಿ ಎಲ್ಲರೂ ತಾಳಕ್ಕೆ ತಕ್ಕಂತೆ ಕುಣಿದು ತಮ್ಮ ಕಿಸೆ ತುಂಬಿಕೊಂಡು ಹೋಗುತ್ತಿದ್ದಾರೆ. ಆದರೆ ಈ ಹ್ಯುಮಸ್ ಕಡಿಮೆಯಾಗಲು ಕೇವಲ ರಾಸಾಯನಿಕ ಪದ್ದತಿಯನ್ನ ಮಾತ್ರ ದೂಷಿಸುವದು ಸರಿಯಲ್ಲ, ಸಾವಯವ ಇಂಗಾಲದ ಕೊರತೆಗೆ ಸೂರ್ಯನ ಬಿಸಿಲಿನ ಕಾರಣವೂ ಇದೆ. ಭೂಮಿಯ ಮಣ್ಣು ಹೆಚ್ಚು ಹೆಚ್ಚು ಬಿಸಿಲಿಗೆ ಮೈಚೆಲ್ಲಿಕೊಂಡಲ್ಲಿಯೂ ಕೂಡ ಅದು ಕಡಿಮೆಯಾಗುತ್ತದೆ. ಆದ್ದರಿಂದ ಕೇವಲ ಸಾವಯವ ಪದ್ಧತಿಗೆ ಬದಲಾಯಿಸಿಕೊಂಡರೆ ಸಾಕಾಗುವದಿಲ್ಲ. ಹೆಚ್ಚು ಹೆಚ್ಚು ಮರಗಳನ್ನ ಬೆಳೆಸಬೇಕು. ಮರಗಳನ್ನ ಕೇವಲ ಸರಕಾರದವರೇ ಬೆಳಸಬೇಕು, ಅದೆಲ್ಲ ಸಾರ್ವಜನಿಕ ವಲಯದಲ್ಲಿರುವವರ ಕೆಲಸ ಅನ್ನುವದು ತಪ್ಪು. ಪ್ರಕೃತಿ ಸಂರಕ್ಷಣೆ ಎಲ್ಲರ ಕರ್ತವ್ಯ, ಪ್ರತಿಯೊಬ್ಬನ ಧರ್ಮ. ರೈತರು ಹೊಲದಲ್ಲಿ ಮೂರನೇ ಒಂದು ಭಾಗದಷ್ಟು ಮರಗಿಡ ಬೆಳೆಸಬೇಕು, ನಮ್ಮ ಉತ್ತರ ಕರ್ನಾಟಕದಲ್ಲಿ ಎಲ್ಲ ಗಿಡಮರಗಳನ್ನ ಕಡಿದು ಹಾಕುತ್ತಾರೆ, ಕೇವಲ ಬನ್ನಿಮರವನ್ನು ಮಾತ್ರ ಕಡಿಯೋಲ್ಲ ಯಾಕೆಂದರೆ ಆ ಮರವನ್ನ ಹಸಿರು ಸೀರೆ ಉಡಿಸಿ ದೈವ ಸ್ವರೂಪಿ ಅಂತ ಪೂಜಿಸುತ್ತಾರೆ. ನಮ್ಮ ಹಿರಿಯದು ಎಲ್ಲ್ಲಾ ಮರಗಳನ್ನ ಒಂದೊಂದು ದೇವರು ಅಂತ ಹೇಳಿದ್ದರೆ ಚೆನ್ನಾಗಿತ್ತು ಅಂತ ನಗು ಮೊಗದಿಂದಲೇ ರೆಡ್ಡಿಯವರು ಪಶ್ಚಾತಾಪಪಡುತ್ತಾರೆ. ಆದರೆ ತೋಟದಲ್ಲಿ ಹೆಚ್ಚು ಹೆಚ್ಚು ಮರಗಳನ್ನ ಬೆಳೆಸುವದರಿಂದ ಉಳಿದ ಬೆಳೆಗಳಿಗೆ ತೊಂದರೆಯಾಗುತ್ತದೆ, ಅನ್ನುವದು ಒಂದು ವಿತಂಡವಾದ ಎಂದು ಖಚಿತವಾಗಿ ರೆಡ್ಡಿಯವರು ಮಂಡಿಸುತ್ತಾರೆ. ಹೇಗೆಂದರೆ ಮರಗಳಿಂದ ಒಟ್ಟಾರೆ ನಮಗೆ ಪ್ರತಿಶತ ಲಾಭ ಹೆಚ್ಚೇ ಆಗಿರುತ್ತದೆ.ಬೇಕಾದರೆ ಮರಗಳ ಸುತ್ತಮುತ್ತಯಿರುವ ಕಡಲೆ ಬೆಳೆಗಳನ್ನ ಗಮನಿಸಿ, ಅಲ್ಲಿ ಕೀಟಗಳ ಬಾಧೆ ಕಡಿಮೆಯಿರುತ್ತದೆ. ಮರದ ಆಶ್ರಯದಲ್ಲಿ ಬಂದು ಕುಳಿತುಕೊಳ್ಳುವ ಹಕ್ಕಿಗಳು ಅಲ್ಲಿರುವ ಕೀಟಗಳನ್ನೆಲ್ಲ ತಿಂದು ಬೆಳೆಗೆ ಸಹಕಾರಿಯಾಗಿರುತ್ತವೆ ಎನ್ನುತ್ತಾರೆ. ಇದಲ್ಲದೆ ಯಾವುದೇ ಕಳೆ ನಮ್ಮ ಬೆಳೆಗಿಂತ ಎತ್ತರಕ್ಕೆ ಬೆಳೆದರೆ ಮಾತ್ರ ಅದು ಹಾನಿಕಾರಕ, ಅಲ್ಲಿವರೆಗೂ ಅದರಿಂದ ಬೆಳೆಗೆ ಏನೂ ತೊಂದರೆಯಿಲ್ಲ.  

ಮಲ್ಚಿಂಗ್ -
ಕೃಷಿ ಮಣ್ಣಿಗೆ ಬಿಸಿಲು ಬೀಳಬಾರದು, ಬಿಸಿಲು ಬಿದ್ದಷ್ಟು ಹೆಚ್ಚು ನಷ್ಟ. ಮರದ ಒಣಗಿದ ಎಲೆಗಳು ಮಲ್ಚಿಂಗ್ ಗೆ ಸಹಕಾರಿಯಾಗುತ್ತವೆ. ಮಲ್ಚಿಂಗ್ ಸಲುವಾಗಿ ನಾರಂಜಿ ಎಲೆಗಳನ್ನು ಉಪಯೋಗಿಸಬಹುದು, ನಾರಂಜಿ ಎಲೆಗಳು ಬಹುಕಾಲ ಬಾಳುತ್ತವೆ. ರೆಡ್ಡಿಯವರು ತಮ್ಮ ಹೊಲದಲ್ಲಿ ಬಿದ್ದ ಒಂದು ಹನಿ ನೀರು ಆಚೆ ಬಿಡುವದಿಲ್ಲ, ಅದೇ ರೀತಿ ಒಂದು ಎಲೆ ಆಚೆ ಹಾಕುವದಿಲ್ಲ. ಒಂದೊಂದು ಎಲೆಯನ್ನು ನೋಟಿನ ಹಾಗೆ ನೋಡಿಕೊಂಡು ತಮ್ಮ ಹೊಲದಲ್ಲೇ ಮಲ್ಚಿಂಗ್ ಗೋಸ್ಕರ ಬಿಡುತ್ತಾರೆ. 

ವಿಂಡ್ ಬ್ಲಾಕ್ -
ರೆಡ್ಡಿಯವರು ತಮ್ಮ ಹೊಲದ ಒಂದು ಸೀಮೆಯುದ್ದಕ್ಕೂ ಸಿಲ್ವರ್ ಓಕ್ ಮರಗಳನ್ನ ಬೆಳೆಸಿದ್ದಾರೆ. ಅವು ೧೫ ವರ್ಷದಲ್ಲಿ ಉತ್ತಮ ದಿಮ್ಮೆಯಾಗಿ ತಯಾರಾಗುತ್ತೆ, ಮಧ್ಯದಲ್ಲಿ ಹೆಬ್ಬೆವು ಮರ ಕೂಡ ಇದ್ದಾವೆ. ಶಂಕರ ಬಣಕಾಲರು ಹೇಳುವಂತೆ ಸೀಮೆಯುದ್ದಕ್ಕೂ ಇರುವ ಮರಗಳು ವಿಂಡ್ ಬ್ಲಾಕ್ ಆಗಿ ಕೆಲಸ ಮಾಡುತ್ತವೆ. ಈ ವಿಂಡ್ ಬ್ಲಾಕ್ ನ ಲಾಭವೇನೆಂದರೆ, ಅದರಿಂದ ಕೀಟಗಳ ಹರಡುವಿಕೆ ಕಡಿಮೆಯಾಗುತ್ತದೆ, ಅಂದರೆ ಅಕ್ಕಪಕ್ಕದ ರಾಸಾಯನಿಕ ಹೊಲಗಳಿಂದ ಕೀಟಗಳು ಹಾರಿಬರುದನ್ನು ಒಂದು ಹಂತದಲ್ಲಿ ತಡೆಯಬಹುದು.

ಅಗ್ನಿಹೋತ್ರ-
ನನಗೆ ಹೋಮ ಪ್ಹಾರ್ಮಿಂಗ್ ಅನ್ನುವ ಪದದ ಪರಿಚಯ ಮಾಡಿಕೊಟ್ಟವರೇ ಶಂಕರ ಅವರು. ಈ ಹೋಮ ಪ್ಹಾರ್ಮಿಂಗ್ ನಲ್ಲಿ ಅಗ್ನಿಹೋತ್ರದ ಮಹತ್ವ ತಿಳಿಸುತ್ತಾ ಅವರು ತಪೋವನದ ಮಾಹಿತಿಕೊಟ್ಟರು. ಶಂಕರರವರು  ನಿಯಮಿತವಾಗಿ ಅಗ್ನಿಹೋತ್ರ ಮಾಡುವದರಿಂದ ಅವರ ಹೊಲದಲ್ಲಿ ಬೆಳೆ ಚೆನ್ನಾಗಿ ಬರುವದಷ್ಟೇ ಅಲ್ಲದೆ ಸುತ್ತಮುತ್ತಲಿನ ವಾತಾವರಣದ ಸಕಾರಾತ್ಮಕ ಶಕ್ತಿ ಅದ್ಭುತವಾಗಿ ವೃದ್ಧಿಸಿದೆ. ಅವರ ಹೊಲದಲ್ಲೇ ನೆಲೆಸಿರುವ ಕೆಲಸದ ರೈತನ ಮಕ್ಕಳ ಬುದ್ಧಿಶಕ್ತಿ ಅತ್ಯದ್ಭುತವಾಗಿ ಹೆಚ್ಚಿ ಅವರು ಶಾಲೆಯಲ್ಲಿ ಮೊದಲ ರಾಂಕ್ ಬಂದಿದ್ದಾರೆ. ರೆಡ್ಡಿಯವರು ಕೂಡ ಅಗ್ನಿಹೋತ್ರ ನಡೆಸುತ್ತಿದ್ದು, ಅವರೂ ಕೂಡ ತಮ್ಮ ಮೊಮ್ಮಗನಲ್ಲಿ ಆಗಿರುವ ಒಳ್ಳೆಯ ಬದಲಾವಣೆಗಳ ಬಗ್ಗೆ ವಿವರಿಸುತ್ತಾರೆ. ಅಗ್ನಿಹೋತ್ರದ ಭಸ್ಮದ ಮಹತ್ವ ಇನ್ನೂ ಹಿರಿಯದು. ಆ ಭಸ್ಮದ ಬೆಲೆ ಕೂಡ ತುಂಬಾ ದುಬಾರಿ, ಅದನ್ನ ಖರಿದಿಸಲಿಕ್ಕೆ ತುಂಬಾ ಜನ ಮುಗಿಬಿಳುತ್ತಾರೆ. ಅಗ್ನಿಹೋತ್ರದ ಭಸ್ಮವನ್ನ ಕೃಷಿಯ ಬೆಳೆಗಳಿಗೆ ವೃದ್ಧಕವಾಗಿ ಅಷ್ಟೇ ಅಲ್ಲದೆ ಮನುಷ್ಯರಿಗೂ ಅರೋಗ್ಯ ವರ್ಧಕವಾಗಿ, ಅನಾರೋಗ್ಯ ನಿವಾರಕವಾಗಿ ಬಳಸಬಹುದು.  ರೆಡ್ಡಿಯವರ ಶ್ರೀಮತಿಯವರು ನಿಯಮಿತವಾಗಿ ಅಗ್ನಿಹೋತ್ರದ ಭಸ್ಮವನ್ನು ಸೇವಿಸುತ್ತಾರೆ, ಅದರಿಂದ ಅವರಿಗೆ ಲಾಭವೂ ಆಗಿದೆ.   

ಮರದ ನೆರಳಿನಿಂದ ನೀರು -
ರೆಡ್ಡಿಯವರು ಕೊಳವೆ ಬಾವಿಯ ಸುತ್ತ ನೀರು ಇಂಗುಗುಂಡಿ ನಿರ್ಮಿಸಿ, ಆಲ್ಲೇ ಹತ್ತಿರದಲ್ಲಿ ಇರುವ ಹಳ್ಳದ ಹರಿವ ನೀರನ್ನು ಗುಂಡಿಯ ಕಡೆಗೆ ಸಾಗುವಂತೆ ಮಾಡಿ ಸದಾ ಕೊಳವೆ ಬಾವಿ ಚಾರ್ಜ ಆಗುವ ಹಾಗೆ ಮಾಡಿದ್ದಾರೆ. 
ಹೊಲದ ತುಂಬೆಲ್ಲಾ ಮರಗಳಿರುವದರಿಂದ ಅವುಗಳ ನೆರಳಿನಿಂದ ಭೂಮಿಯೂ ಕೂಡ ತನ್ನ ತೇವಾಂಶ ಕಾಪಾಡಿಕೊಂಡಿರುತ್ತದೆ. ಮರದ ಕೆಳಗೆ ಇರುವ ಕಳೆ ಕೂಡ ತೇವಾಂಶದ ವೃದ್ಧಿಗೆ ಸಹಕರಿಸುತ್ತದೆ. ಇದೆಲ್ಲದರ ಪರಿಣಾಮವಾಗಿ ಸಾಕಷ್ಟು  ತೇವಾಂಶ ಇರುವದರಿಂದ ಏರೇಹುಳುಗಳ ಸಂಖ್ಯೆ  ಕೂಡ ಅವರ ತೋಟದಲ್ಲಿ ಹೆಚ್ಚು, ಅಂದಾಜು ಒಂದು ಚದರ ಅಡಿ ಜಾಗದಲ್ಲಿ ಸರಿಸುಮಾರು ೪೦-೫೦ ಹುಳುಗಳಿದ್ದು ಅವು ದಿನಾಲೂ ೧೦-೧೫ ತೂತುಗಳನ್ನ ನಿರ್ಮಿಸುತ್ತಿರುತ್ತದೆ, ಇದೆ ರೀತಿ ಒಂದು ವರ್ಷಕ್ಕೆ ಲಕ್ಷಾಂತರ ತೂತುಗಳನ್ನ ಮಾಡಿರುತ್ತವೆ, ಇವೂ ಕೂಡ ನೀರು ಇಂಗುವಿಕೆಗೆ ಸಹಕರಿಸುತ್ತವೆ. ಇದೆಲ್ಲ ಒಂದು ವಿಶಿಷ್ಟ ವ್ಯವಸ್ಥೆ, ಬರೀ ಮರಗಳ ಇರುವಿಕೆಯಿಂದ, ನೆರಳು, ತೇವಾಂಶ, ಎರೆಹುಳು, ನೀರು ಇಂಗುವಿಕೆ ಇದೆಲ್ಲಾ ಸಾಧ್ಯ.       

ಯಾವುದನ್ನು ಬೆಳೆಯಬೇಕು -
ಮುಂಚೆ ನಮ್ಮ ರೈತರು ಮಾರಾಟದ ಸಲುವಾಗಿಯೇ ಅಂತ ಹೆಚ್ಚಾಗಿ ಏನೂ ಬೆಳೆಯುತ್ತಿರಲಿಲ್ಲ, ಎಲ್ಲವನ್ನೂ ಸ್ವಂತಕ್ಕೆ ಅಂದರೆ ಮನೆಗೆ ಬೇಕಾಗುವದನ್ನೆಲ್ಲಾ ತಾವೇ ಸ್ವತ: ಬೆಳೆಯುತ್ತಿದ್ದರು. ಆದರೆ ಈಗ ಎಲ್ಲರೂ ವಾಣಿಜ್ಯ ಬೆಳೆಗಳ ಕಡೆಗೆ ಹೆಚ್ಚಾಗಿ ಆಕರ್ಷಿಶಿತರಾಗಿದ್ದಾರೆ. ಆ ಬೆಳೆದ ಬೆಳೆಯನ್ನು ಮಾರುವದು, ನಂತರ ಮನೆಗೆ ಬೇಕಾದುದನ್ನು ಪ್ರತ್ತೇಕವಾಗಿ ಖರಿದಿಸುವದು ನಡೆದೆಯಿದೆ. ಆದರೆ ರೈತರು ತಮ್ಮ ಮನೆಗೆ ಬೇಕಾಗುವದನ್ನೆಲ್ಲ ತಾವೇ ಬೆಳೆಯಬೇಕು, ಹಾಗೆಯೇ ಜಮೀನಿಗೆ ಬೇಕಾಗುವ ಗೊಬ್ಬರ, ಕೀಟನಾಶಕಗಳನ್ನೂ ಕೂಡ ತಾವೇ ಸ್ವತ: ತಯಾರಿಸಬೇಕು, ಸಾವಯವ ಗೊಬ್ಬರ, ಪಂಚಗವ್ಯ, ಎರೆಹುಳುಗಳು ಈ ಎಲ್ಲವೂ ಕೂಡ ರೈತರಿಗೆ ಈಗ ಬಳಸಲು ಸಿದ್ಧವಿರುವ ರೀತಿಯಲ್ಲಿ ಸಿಗುತ್ತಿದ್ದರು ಕೂಡ ಖರಿದಿಸಬಾರದು, ತಾವೇ ತಯಾರಿಸಬೇಕು. ಕೃಷಿ ಅಂದರೆ ಕೇವಲ ಬೆಳೆದು, ಮಾರುವದು ಅಷ್ಟೇ ಅಲ್ಲ, ಇದೊಂದು ಸಮಗ್ರ ಕಾರ್ಯ.  

ನಾವು ವಿನಾಶದ ಅಂಚಿನಲ್ಲಿದ್ದೇವೆ, ಇನ್ನೂ ಮುಂದೆ ಹೋದರೆ ಪ್ರಪಾತಕ್ಕೆ ಬಿದ್ದು ಸರ್ವನಾಶವಾಗುವದು ಶತಸಿದ್ಧ, ಅದಕ್ಕೆ ನಾವು ಉಳಿವಿಗಾಗಿ ಹಿಂದಕ್ಕೆ ಹೋಗಬೇಕು, ಮರಳಿ ಮಣ್ಣಿಗೆ, ಸಾವಯವಕ್ಕೆ, ಭಾರತೀಯ ಸಂಪ್ರದಾಯಿಕ ಪದ್ಧತಿಯ ಕಡೆಗೆ ಸಾಗಬೇಕು ಎಂದು ರೆಡ್ಡಿಯವರು ಎಚ್ಚರಿಸುತ್ತಾರೆ.

ಸಾವಯವ ಕೃಷಿ ಪದ್ಧತಿಯನ್ನು ಹೇಗೆ ಪಸರಿಸುವದು? ಅಂತ ನಾನು ಕೇಳಿದ ಪ್ರಶ್ನೆಗೆ ಅವರು "ಪ್ರತಿ ತಾಲ್ಲೂಕಿನಲ್ಲೂ ನನ್ನ ಹಾಗೆ ಒಬ್ಬೊಬ್ಬ ರೈತ ಸಾವಯವ ಪದ್ದತಿ ಮಾಡಿತೋರಿಸಬೇಕು." ಎಂದು ಹೇಳುತ್ತಾರೆ. 

ಜವಾರಿ (ನಾಟಿ) ಹಸುಗಳನ್ನು ಸಾಕಬೇಕು ಜೆರ್ಸಿ (ಸೀಮೆ) ಹಸು ಬರಿ ಹಾಲಿನ ಪ್ರಮಾಣ ಹೆಚ್ಚಿಸುವಲ್ಲಿ ಮಾತ್ರ ಉಪಯುಕ್ತ.  ಕ್ಯಾಪ್ಟನ್ ಗೋಪಿನಾಥರು ಹೇಳುವಂತೆ ಸೀಮೆ ಹಸು ಸಾಕಾಣಿಕೆಯಿಂದ ಜಾಸ್ತಿ ಲಾಭಯಿಲ್ಲ, ನಾಟಿ ಹಸುವಿನಿಂದ  ನಷ್ಟವೇನೂ ಇಲ್ಲ. ಹೀಗಾಗಿ ಜವಾರಿ ಹಸು ಸಾಕಾಣಿಕೆಯನ್ನ ಲಾಭದಾಯಕ ಅಂತಾನೆ ಪರಿಗಣಿಸಬಹುದು. ಸೀಮೆ ಹಸು ಸಾಕಾಣಿಕೆಯ ಕಷ್ಟಗಳೆಲ್ಲ ಜವಾರಿ ಹಸುಗಳಲ್ಲಿ ಇಲ್ಲ. 

ನಾನು ಇರುವ ಐಟಿ ಉದ್ಯೋಗ ಬಿಟ್ಟು ಕೃಷಿಕ ಆಗ ಬಯಸುತ್ತೇನೆ ಅಂತ ಹೇಳಿದಾಗೆಲ್ಲ ನನಗೆ "ಬೇಡಪ್ಪ, ನೆರಳಲ್ಲಿ ಕುಳಿತು, ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ಟು ಕೃಷಿಗೆ ಬರಬೇಡ, ಕೃಷಿಯಲ್ಲಿ ಏನೂ ಇಲ್ಲ, ಬರಿ ನಷ್ಟ ಮಾತ್ರ ಇದೆ, ಮಳೆ ಆಗಲ್ಲ, ಬೆಳೆ ಬರಲ್ಲ" ಅಂತ ಹೇಳಿದವರೇ ಜಾಸ್ತಿ. ಆದರೆ ಗಮನಿಸಬೇಕಾದ ಒಂದು ಅಂಶವೆಂದರೆ ಹೀಗೆ ಹೇಳಿದವರಾರು ಸಾವಯವ ಕೃಷಿಕರಲ್ಲ. ಅವರೆಲ್ಲ ರಾಸಾಯನಿಕ ಕೃಷಿ ಪದ್ಧತಿ ಅಳವಡಿಸಿಕೊಂಡವರು, ಇವರಾರೂ ಮಳೆ ಕೊಯ್ಲು, ಸಾವಯವ ಪದ್ಧತಿ, ಮಿಶ್ರ ಬೆಳೆ, ಮರ ಬೆಳೆಸುವದು  ಹೀಗೆ ಯಾವುದನ್ನು ಪ್ರಯತ್ನಿಸಿದವರಲ್ಲ. ಆದರೆ ಇವನ್ನೆಲ್ಲ ಅಷ್ಟೇ ಅಲ್ಲದೆ ಮತ್ತೂ ಇನ್ನಿತರ ವಿಶಿಷ್ಟ ವಿಧಾನಗಳನ್ನು ಅಳವಡಿಸಿಕೊಂಡ ಸಾವಯವ ರೈತರು ಹೀಗೆ ಹೇಳಿಲ್ಲ. ರೆಡ್ಡಿ, ಶಂಕರರವರು, ಜಿಗಳೂರರು  ಹೇಳುವ ಹಾಗೆ ಸಾವಯವ ಕೃಷಿ ತುಂಬಾ ಸುಲಭ, ಎಲ್ಲರೂ ಮಾಡಬೇಕು, ನೀವೂ ಮಾಡಿ, ಆದರೆ ಶ್ರದ್ಧೆಯಿಂದ ಪ್ರಯತ್ನ  ಮಾಡಿ ಅಂತ ಹೇಳ್ತಾರೆ ಅಷ್ಟೇ.  

ರೆಡ್ಡಿಯವರು ಮತ್ತು ಶಂಕರವರ ಜೊತೆ ನಡೆಸಿದ ಸಂಭಾಷಣೆಯನ್ನ ಯಥಾವತ್ತಾಗಿ ಇಲ್ಲಿ ಪ್ರಸ್ತುತ ಪಡಿಸಲು ಪ್ರಯತ್ನಿಸಿದ್ದೇನೆ. ಕೃಷಿಯಲ್ಲಿ ಎಳ್ಳಷ್ಟು ಜ್ಞಾನವಿಲ್ಲದ ನಾನು ಎಲ್ಲಾದರೂ ತಪ್ಪು ಅಂಶಗಳನ್ನ ಬರೆದಿದ್ದರೆ, ದಯಮಾಡಿ ತಿದ್ದಬೇಕಾಗಿ ವಿನಂತಿ. ಅವರ ಜೊತೆ ಚರ್ಚಿಸಿದ್ದು ತುಂಬಾಯಿದೆ ಆದರೆ ಎಲ್ಲವನ್ನು ಇಲ್ಲಿ ಬರೆಯೋಕ್ಕಾಗಿಲ್ಲ, ಅಷ್ಟಿಷ್ಟು ಬರೆದಿದ್ದೇನೆ, ಮತ್ತೆ ಈ ಬರಹವನ್ನು ಉತ್ತಮಗೊಳಿಸಲು ಪ್ರಯತ್ನಿಸುವೆ.

Thursday, July 16, 2015


https://www.facebook.com/video.php?v=883038755065438&pnref=story