Sunday, November 5, 2017

ಜಮಖಂಡಿಯ ಗುರುವಾರ

ನನ್ನ ಹುಟ್ಟೂರು ಜಮಖಂಡಿ. ದೊಡ್ಡ ನಗರವಲ್ಲ ಆದರೂ, ಓನು ಸುವ್ಯವಸ್ಥಿತ ಪಟ್ಟಣ. ಈಗ ಅದು  ಕಾಲಕ್ಕನುಗುಣವಾಗಿ ತುಂಬಾ ಬದಲಾಗಿದೆ. ಮೂವತ್ತು ವರ್ಷದ ಹಿಂದೆ ಬಾಲ್ಯದಲ್ಲಿ ನಾ ಕಳೆದ ಸಮಯವನ್ನು ಮರೆಸುವಷ್ಟು ಬದಲಾಗಿದೆ. ಆದರೆ ಭೌತಿಕವಾಗಿ ಬದಲಾಗಿದ್ದನ್ನು ಬದಿಗೆ ಇಟ್ಟರೇ, ನನ್ನ ಮನದಲ್ಲಿ ಅಚ್ಚು ಮುಡಿಸಿದ ಕೆಲವು ಸವಿ ನೆನಪುಗಳು ಇನ್ನೂ ಹಾಗೆಯೇ ಬದಲಾಗದೇ ಇವೆ. ನನ್ನ ಮನಕ್ಕೆ ತಂಪುಯೆರೆಯುತ್ತವೆ. ಅದೊಂದು ಪಟ್ಟಣ ಆದ್ದರಿಂದ ಅಲ್ಲಿ ಪ್ರತಿ ಗುರುವಾರ  ಸಂತೆ ಜೋರಾಗಿಯೇ ಸೇರುತ್ತಿತ್ತು ಮತ್ತು ಅದು ಅಷ್ಟೇ ವ್ಯವಸ್ಥಿತವಾಗಿಯೇ ಇರುತ್ತಿತ್ತು. ಎಲ್ಲೆಂದರಲ್ಲಿ ಎಲ್ಲರೂ ಕೂತು ಎಲ್ಲವನ್ನು ಮಾರುವ ಪದ್ಧತಿಯೇ ಇರಲಿಲ್ಲ, ನಿರ್ದಿಷ್ಟ ಜಾಗದಲ್ಲಿ ನಿರ್ದಿಷ್ಟ ಪದಾರ್ಥಗಳನ್ನು ಮಾರುವವರು ಕೂರುತ್ತಿದ್ದರು. ಆ ಜಾಗಗಳೆಲ್ಲಾ ಹೆಚ್ಚು ಕಡಿಮೆ ಅದೇ ಹೆಸರಿನ ಪೇಟೆಯೆಂದು ಕರೆಯಲ್ಪಡುತ್ತಿದ್ದವು. ದಿನಾಲೂ ಬೆಳಗಿನ ಸಮಯದಲ್ಲಿ ೬:೩೦ ಘಂಟೆ ಅನ್ನುವಷ್ಟರಲ್ಲಿ ಪಕ್ಕದ ಹಳ್ಳಿಯ  ಮೊಸರು ಮಾರುವವರು ಬಂದು, ಒಂದು ಕಡೆ ಕುಳಿತಿರುತ್ತಿದ್ದರು. ಗುರುವಾರ ಮಾತ್ರ ಮಧ್ಯಾನ್ಹ ಆಗುವಷ್ಟರಲ್ಲೇ ಇನ್ನೊಂದು ಕಡೆ ತುಪ್ಪದ ಸಂತೆ ಸೇರುತ್ತಿತು. ಬೆಲ್ಲದ ಸಂತೆ ಒಂದು ಜಾಗದಲ್ಲಾದರೆ, ಕಾಯಿಪಲ್ಲೆ ಸಂತೆ ಯು ಊರಿನ ಮಧ್ಯದ ಜಾಗವನ್ನು ಆವರಿಸುತ್ತಿತು. ಒಂದು ಬದಿ ಜೋಳದ ಪ್ಯಾಟಿ, ಇನ್ನೊಂದು ಬೀದಿ ಅಕ್ಕಿ ಪ್ಯಾಟಿ, ಹಗ್ಗ ಬುಟ್ಟಿ ಮಾರುವವರು ಮತ್ತೊಂದು ಬೇರೆ ಕಡೆ ಹೀಗೆಯೇ ಎಲ್ಲವೂ ತುಂಬಾ ವ್ಯವಸ್ಥಿತವಾಗಿತ್ತು. 

ನಾವು ನಮ್ಮ ಶಾಲೆಯಿಂದ ಮನೆಗೆ ಹೋಗಬೇಕಾದರೆ, ದಾರಿಯಲ್ಲಿ ಸಂತೆಯ ಪಕ್ಕದಲ್ಲೇ ಸಾಗುತ್ತಿದ್ದೆವು. ಶಾಲೆಯ ಹತ್ತಿರವೇ ತುಪ್ಪದ ಸಂತೆ, ಸುತ್ತ-ಮುತ್ತ ಇರುವ ಹೊಳೆಸಾಲಿನ ಹಳ್ಳಿಯ ಜನ ಬೆಣ್ಣೆಯನ್ನು ಹಾಗೆಯೇ ತಂದು ಮೂರು ಕಲ್ಲಿನ ತಾತ್ಕಾಲಿಕ ಓಲೆ ನಿರ್ಮಿಸಿ, ನಮ್ಮೂರಿನಲ್ಲೇ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಮಾರುತ್ತಿದ್ದರು. ಅದು ಒಂದು ದೃಷ್ಟಿಯಿಂದ ಗುಣಮಟ್ಟ ಪ್ರದರ್ಶನ ಕೂಡ ಹೌದು. ಅಲ್ಲಿರುವ ಸುತ್ತ-ಮುತ್ತಣ ಜಾಗವೆಲ್ಲ ತುಪ್ಪದ ಸುಗಂಧದಿಂದ ಘಮ್ಮೇನ್ನುತ್ತಿತ್ತು. ಒಂದೆರಡು ಘಳಿಗೆ ಅಲ್ಲಿ ನಿಂತು ಆ ಅಸ್ವಾದವನ್ನು ಸವಿದು ತುಪ್ಪವನ್ನು ತಿಂದಷ್ಟೇ ಸಂತೋಷದಿಂದ ನಾವು  ಮುಂದೆ ಹೊಗುತ್ತಿದೆವು. ಅಲ್ಲಿಂದ  ಸ್ವಲ್ಪ ಮುಂದೆ ಹೋದರೆ ಒಂದು ಕಡೆ ಬೆಲ್ಲದ ಸಂತೆ ಇನ್ನೊಂದು ಕಡೆ ಮೆಣಸಿನಕಾಯಿ ಮತ್ತು ಮಸಾಲೆಯ ಸಂತೆ ಸೇರುತ್ತಿತ್ತು. ಮೆಣಸಿನಕಾಯಿ ಮಾರುವ ಕಡೆ ಹೋಗಲಾದೀತೇ? ನಾಲ್ಕು ಹೆಜ್ಜೆ ಹೋಗುವಷ್ಟರಲ್ಲೇ ಸೀನುತ್ತ ಮೂಗು ಸೋರಿಸಿಕೊಂಡು  ಸಾಕಾಗಿ ಹೋಗುತ್ತಿತ್ತು.  ನಾವು ಮಾತ್ರ ಆ ಕಡೆ ಹೋಗದೆ ಬೆಲ್ಲ ಸೇರುವ ಜಾಗದಿಂದಲೇ ಹೋಗುತ್ತಿದ್ದೆವು. ನಮ್ಮೂರ ಸುತ್ತಲು ಕೃಷ್ಣಾ ನದಿಯ ನೀರಾವರಿ ಪ್ರದೇಶವಾದ್ದರಿಂದ ಕಬ್ಬು ಬೆಳೆದಿದ್ದವರು ತಮ್ಮ ಹೊಲದಲ್ಲಿ ತಾವೇ ಸ್ವತಃ ಘಾಣದಲ್ಲಿ ತಯಾರಿರುತ್ತಿದ್ದರು. ಈಗಿನ ಹಾಗೆ ಆಗ ಎಲ್ಲರೂ ಸಕ್ಕರೆ ಕಾರ್ಖಾನೆಗೆ ಕಬ್ಬು ಕಳಿಸುತ್ತಿರಲಿಲ್ಲ. ಆ ರೈತರು  ಒಳ್ಳೆಯ ಬೆಲ್ಲ ಮಾರಲು ಜಮಖಂಡಿಗೆ ಬರುತ್ತಿದ್ದರು. ಬೆಲ್ಲ ಕಂಡರೆ ಮಕ್ಕಳು ಸುಮ್ಮನಿರಲಿಕ್ಕೆ ಆಗುತ್ತದೆಯೇ?  ಕೆಲವೊಂದು ಸಲ ನಾವು ದೊಡ್ಡವರ ಹಾಗೆ ಬೆಲ್ಲ ಖರಿದಿಸುವ ಹಾಗೆ ನಟನೆ ಮಾಡಿ ಚೂರು ಬೆಲ್ಲ ಚಿವುಟಿ ತಿಂದರೆ, ಇನ್ನು ಕೆಲವು ಸಲ ವಿನಯವಾಗಿ ಬೆಲ್ಲವನ್ನು ಬೇಡಿಕೊಂಡು ತಿನ್ನುತ್ತಿದ್ದೆವು. ಬೆಲ್ಲ ಮಾರುವವರು ಕೆಲವೊಮ್ಮೆ ಮುಖ ಸಿಂಡರಿಸಿಕೊಂಡರೂ ಕೂಡ ಇಲ್ಲವೆನ್ನದೆ ಮಕ್ಕಳಿಗೆ ಒಂಚೂರು ಬೆಲ್ಲ ಕೊಟ್ಟು ಕಳುಹಿಸುತ್ತಿದ್ದರು. ಉದಾರ ಮನೋಭಾವದ ಪುಣ್ಯಾತ್ಮರು! ಬೆಲ್ಲ ಅಂದರೆ ಸುಮ್ಮನೆ ಖಾಲಿಯಾಗಿ ಇರುತ್ತದೆಯೇ? ಹಾರುವ ಕರ್ಜುಟಗಿ ಹುಳುಗಳಿಂದ ಮುತ್ತಿರುತ್ತಿತ್ತು. ಈ ಹುಳು ಕಚ್ಚಿದರೇ ಬಲು ಕಷ್ಟ,.  ನಮ್ಮನ್ನು ದೂರವಿಡಲು ಈ ಹಳ್ಳಿಯವರು ಆ ಹುಳುಗಳನ್ನು ಬೆಲ್ಲದ ಜೊತೆ ಬೇಕೆಂದಲೇ  ತಮ್ಮ ಊರಿಂದ ಇಲ್ಲಿಗೆ ತಂದಿದ್ದಾರೆನೋ ಅನ್ನುವಂತೆ ನಮಗೆ ಭಾಸವಾಗುತ್ತಿತು. ಆದರೆ ತಿನ್ನಲ್ಲಿಕ್ಕೆ ಬೆಲ್ಲ ಸಿಕ್ಕ ತಕ್ಷಣ ನಾವು ಹುಳುವಿನಿಂದ ಪಾರಾಗಲು ಅಲ್ಲಿಂದ ಬೇಗನೆ ಕಾಲು ಕೀಳುತ್ತಿದ್ದೆವು. ಮುಂದೆ ಹೋದಂತೆ ಕಾಯಿಪಲ್ಲೆ ಸಂತೆ ಒಂದು ಕಡೆ ಸ್ವಲ್ಪ ದೂರದಲ್ಲಿ ಇದ್ದರೇ ಅದರ ವಿರುದ್ಧ ಹಾದಿಯಲ್ಲಿ ಜೋಳದ ಸಂತೆ. ನಮ್ಮ ದಾರಿಯುದ್ದಕ್ಕೂ ಶಿಂದಿ ಕಸಬರಿಗೆ(ಪೊರಕೆ), ಶಿಂದಿ ಬುಟ್ಟಿ, ನೂಲಿನ ಹಗ್ಗ ಮಾರುವವರು, ಚಾಕು ಸಾಣಿ ಹಿಡಿಯುವವರು, ಹೀಗೆ ವಿವಿಧ ಜನರ  ಗದ್ದಲವಿರುತ್ತಿತ್ತು. ಅದನ್ನೆಲ್ಲ ದಾಟಿ ಮುಂದೆ ಬಂದರೆ ನಮ್ಮೂರಿನ ಖೈದಿಗಳ ಕಾರಾಗೃಹವಿತ್ತು. ಅದಕ್ಕೆ ದೊಡ್ಡ ಹಸಿರು ಬಣ್ಣದ ಬಾಗಿಲಿದ್ದು ಅದು ಸದಾ ಮುಚ್ಚಿರುತ್ತಿತು. ಅಲ್ಲಿ ಬಂದರೆ ನಮಗೆ ಒಂದು ಸ್ವಲ್ಪ ಭಯ ಕೂಡ ಆಗುತ್ತಿತ್ತು. ಬಹುಶಃ ನಾವೇನಾದರೂ ತಪ್ಪು ಮಾಡಿದರೆ ಪೊಲೀಸರು ನಮಗೆ ಹಾಗೆಯೇ ತಕ್ಷಣ ಜೈಲಿಗೆ ಹಾಕುತ್ತಾರೆನೋ ಅನ್ನುವ ಭಯದಿಂದ, ಅಲ್ಲಿ ಮಾತ್ರ ತುಂಬಾ ವಿನಯದಿಂದ ಏನೂ ತಂಟೆ ಮಾಡದೇ ಬರುತ್ತಿದ್ದೆವು. ಅದರ ಪಕ್ಕದಲ್ಲೇ ಅಂಚೆ ಕಚೇರಿ, ಸಂತೆಯ ದಿನ ಅಂಚೆ ಕಚೇರಿಯೂ ಕೂಡ ಗಿಜಿಗುಡತ್ತಿತ್ತು. ಅಂಚೆ ಕಚೇರಿಯು ನಾಲ್ಕು ದಾರಿ ಸೇರುವ ಜಾಗಲ್ಲಿ ಒಂದು ಕಡೆಯಿತ್ತು. ಅಲ್ಲಿ ತಂಪಾದ ಪಾನೀಯ ಮಾರುವವರು, ಗೋಲಿ ಸೋಡಾ ಅಂಗಡಿ, ಚಹಾದ ಅಂಗಡಿಗಳಿದ್ದವು. ಅಲ್ಲಿಯದು  ನಮಗೆನೊಂದೂ ರುಚಿಸದು, ಆದರೆ ಅದನ್ನೆಲ್ಲ  ನೋಡಲಿಕ್ಕೆ ಮಾತ್ರ ಒಂಥರಾ ಸಂತೋಷವಾಗುತ್ತಿತ್ತು.  ಇನ್ನು ನಾಲ್ಕು ಹೆಜ್ಜೆ ನಡೆದರೆ ನಮ್ಮ ಮನೆ. ಮನೆಗೆ ಹೋಗವಷ್ಟರಲ್ಲಿ ನಮ್ಮ ತಾತ ಸಂತೆಯಿಂದ ಎರಡೂ ದೊಡ್ಡ ಚೀಲಗಳಲ್ಲಿ ವಾರಕ್ಕೆ ಆಗುವಷ್ಟು ಸಂತೆ ತಂದಿರುತ್ತಿದ್ದರು. ನಮಗೆ ಬೇಕಾದ ಪೇರುಕಾಯಿ(ಸೀಬೆ), ಬಾಳೆಹಣ್ಣು, ಎಳೆಯ ಸೌತೆಕಾಯಿ, ಗಜ್ಜರಿಗಳನ್ನು ನಾವು ಹುಡುಕಿ ತಿನ್ನುತ್ತಿದ್ದೆವು. ಅಷ್ಟರಲ್ಲೇ ಸಾಂಯಕಾಲವಾಗಿದ್ದರೆ, ಸಿದ್ದಪ್ಪ ಅಜ್ಜ ಮನೆಗೆ ಬಂದಿರುತ್ತಿದ್ದ. ಅವನು ಪಕ್ಕದ ಹಳ್ಳಿಯ ರೈತ, ಪ್ರತಿ ಗುರುವಾರ ಸಂತೆಗೆ ಬಂದಾಗ ನಮ್ಮ ಮನಗೆ ತಪ್ಪದೇ  ಬರುತ್ತಿದ್ದ. ಅವನು ಬರುವಾಗ ತಮ್ಮ ಮನೆದೇವರಾದ ವಾರಿಸಿದ್ದಪ್ಪನ ಗುಡಿಗೆ ಹೋಗಿ ಅಲ್ಲಿಂದ ಕಲ್ಲು ಸಕ್ಕರೆ ಪ್ರಸಾದವನ್ನು ತರುತ್ತಿದ್ದ. ನಮ್ಮನ್ನು ಕಂಡರೆ ಅವನು ಕೂಡ ಅಕ್ಕರೆಯಿಂದ ಆ ಕಲ್ಲು ಸಕ್ಕರೆ ಕೊಡುತ್ತಿದ್ದ. ಆ ವಾರಿಸಿದ್ದಪ್ಪನ ಗುಡಿಯನ್ನು ನಾನು ಇಂದಿನ ದಿನದವರೆಗೂ ನೋಡಿಲ್ಲ ಆದರೆ ಅವನ ಪ್ರಸಾದ ತಿಂದಷ್ಟು ಇನ್ನಾವುದೇ ದೇವರ ಪ್ರಸಾದ ತಿಂದಿಲ್ಲ. ಸಿದ್ದಪ್ಪಜ್ಜ ಸೈಕಲ್ಲಿನ ಮೇಲೆ ಸವಾರಿ ಮಾಡಿಕೊಂಡು ನಮ್ಮೂರಿಗೆ ಬರುತ್ತಿದ್ದ. ಅವನ ಸೈಕಲ್ಲು ನಮಗೆ ಬಲು ವಿಚಿತ್ರವಾಗಿ ಕಾಣುತ್ತಿತ್ತು, ನಮ್ಮ ಮನೆಯಲ್ಲಿರುವ ಸೈಕಲ್ಲಿನ ಹಾಗೆ ಅವನ ಸೈಕಲ್ಲಿಗೆ  ಬ್ರೇಕ್ ಮತ್ತು ಸರಿಯಾದ ಪೆಡಲ್ ಗಳು ಇರಲಿಲ್ಲ. ಅದರ ಬಣ್ಣ ಕೂಡ ಮಾಸಿ ಹೋಗಿ ಅದು ಕಪ್ಪಾಗಿತ್ತು. ಬ್ರೇಕ್ ಇಲ್ಲದೇ ಸಿದ್ದಪ್ಪಜ್ಜ ಸೈಕಲ್ಲನ್ನು ಹೇಗೆ ನಿಲ್ಲಿಸುತ್ತಾನೆ ಅಂತ ನಾನು ತುಂಬಾ ತಲೆಕೆರಿಯಿಸಿಕೊಳ್ಳುತ್ತಿದ್ದೆ. ಸಿದ್ದಪ್ಪಜ್ಜ ಸೈಕಲ್ಲಿನ ಚಕ್ರಕ್ಕೆ ತನ್ನ ಕಾಲಿನಿಂದ ಒತ್ತಿ ನಿಲ್ಲಿಸುತ್ತಾನೆ ಅಂತ ಅವನೇ ಒಂದು ಸಾರಿ ಹೇಳಿ ನನ್ನ ಅನುಮಾನ ಪರಿಹರಿಸಿದ್ದ. ಅದು ಆಗ ನಮಗೆ ಕಲ್ಪನೆಗೆ ಮೀರಿದ್ದಾಗಿತ್ತು. 

ನಮ್ಮೂರಿನ ವಾರದ ಸಂತೆ ನೆನೆದರೆ, ಈಗ ಬೆಂಗಳೂರಿನಲ್ಲಿ ನಿತ್ಯ ನಡೆಯುವ ಮಾಲ್ ನಲ್ಲಿಯ ಸಂತೆ ಸಪ್ಪೆ ಅನಿಸುತ್ತದೆ. ಅಲ್ಲಿ ತುಪ್ಪದ ಘಮವಿಲ್ಲ, ಬೆಲ್ಲದ ಸವಿಯಿಲ್ಲ. ನಮ್ಮ ಕರುಳ ಬಳ್ಳಿಯನ್ನು ಎಳೆಯುವ ಆ ಕರುಳ ಹಳ್ಳಿ ಬದಲಾದರೂ ನನ್ನ ಮನದಲ್ಲಿ ಇನ್ನೂ ಹಾಗೆಯೇಯಿದೆ.