Saturday, December 9, 2017

ಮೆಜೆಸ್ಟಿಕ್ ನಲ್ಲಿ ಐಹೊಳೆಯ ಬಾವಿ


ಹೆಂಡತಿಯದು ಒಂದು ವಿಚಿತ್ರ ಸ್ವಭಾವ. ಅಥವಾ ಇದೇ ಮಾತನ್ನು ಸಲೀಸಾಗಿ ಸಾಮಾನ್ಯಕರಿಸಿ (generalise) ಹೇಳಲುಬಹುದು ಹೆಣ್ಣಿನ ಮನಸ್ಸನ್ನು ಅರಿಯುವುದು ತುಂಬಾ ಕಷ್ಟ. ಅವಳ ಹಠ, ಮೊಂಡುತನದ ಮುಂದೆ ಗಂಡನ ಅಥವಾ ಯಾವುದೇ  ಗಂಡಸಿನ  ಆಟ ನಡೆಯೋದಿಲ್ಲ. ಅವತ್ತು ಶನಿವಾರವಾದ್ದರಿಂದ ಮಕ್ಕಳನ್ನು ಆಚೆ ಕರೆದುಕೊಂಡು ಹೋಗಿ ಸುತ್ತಾಡಿಕೊಂಡು ಬರೋಣ ಅಂತ ಯೋಚಿಸಿ ಅದನ್ನ ಅವಳ ಮುಂದೆ ಪ್ರಸ್ತಾಪಿಸಬೇಕು ಅಂದುಕೊಂಡೆ. ಆದರೆ ಇವಳು ಅದ್ಯಾವ ಮನಸ್ಥಿತಿಯಲ್ಲಿದ್ದಳೋ ಗೊತ್ತಿಲ್ಲ ಮುಖವನ್ನು ಬಲೂನಿನಂತೆ ಊದಿಸಿಕೊಂಡು, ಅದಕ್ಕೆ ಹಣೆಯ ಗಂಟನ್ನು ಬಿಗಿಯಾಗಿ ಹಾಕಿಸಿಕೊಂಡು ಕುಳಿತ್ತಿದ್ದಳು. ನನ್ನ ಪೂರ್ವ ಅನುಭದವ ಆಧಾರದ ಮೇಲೆ ಅವಳಿಗೆ  ಈಗ ಕೇಳಿದರೆ ಏನು ಉತ್ತರ ಬಂದೀತೆಂದು ಅಂದಾಜು ಮಾಡಿದ್ದೆ, "ನಾನು ಬರಲ್ಲ!" ಅನ್ನುತ್ತಾಳೆ ಅಂತ ನಾನೇ ಊಹಿಸಿದೆ. ಹಾಗಾಗಿ ಅವಳಿಗೆ ಕೇಳುವ ಗೋಜಿಗೆ ಹೋಗದೇ ಮಕ್ಕಳಿಬ್ಬರನ್ನು ನಾನೇ ತಯಾರು ಮಾಡಿ ನನ್ನ ದ್ವಿಚಕ್ರ ವಾಹನದ ಮೇಲೆ ಯಥಾಪ್ರಕಾರವಾಗಿ ಒಬ್ಬನನ್ನು ಮುಂದೆ, ಇನ್ನೊಬ್ಬನನ್ನು ನನ್ನ ಹಿಂದೆ ಕುಳ್ಳಿರಿಸಿಕೊಂಡು ಶಿರಸ್ತ್ರಾಣ ಸಿಕ್ಕಿಸಿ ಹೊರಟೇಬಿಟ್ಟೆ. ಮೊದಲನೇಯವನಿಗೆ ನಾಲ್ಕು ವರ್ಷ ಎರಡನೇಯವನಿಗೆ ಎರಡು ವರ್ಷ. ಮನೆಯಿಂದ ಆಚೆ ಬಂದಾಗ  ನಾನೊಬ್ಬನೇ ಈ ಇಬ್ಬರು ಚಿಕ್ಕವರನ್ನು ಗಮನದಲ್ಲಿಟ್ಟು ಹತೋಟಿ ಮಾಡುವದು ಸ್ವಲ್ಪ ಕಷ್ಟ ಆದರೂ ಕೂಡ ಒಂದೊಂದು ಸಾರಿ ಇಂತಹ ಕೆಲಸಕ್ಕೆ ಕೈಹಾಕುತ್ತೇನೆ. ಅನಿವಾರ್ಯದಿಂದ.

ನಾನು ಹೋಗಿದ್ದು ಒಂದು ದೊಡ್ಡ ಮತ್ತು ಹಳೆಯ ದೇವಸ್ಥಾನ, ಹಳೆಯ ಅನ್ನುವದಕ್ಕಿಂತ ಪ್ರಾಚೀನ ಅನ್ನಬಹುದೇನೋ. ಯಾಕೆಂದರೆ ಅದರ ಕಟ್ಟಡವೆಲ್ಲ ಕಲ್ಲಿನಿಂದ ಕಟ್ಟಿದ್ದು, ಸುತ್ತಲೂ ಪ್ರದಕ್ಷಿಣೆಗೋಸ್ಕರ ದೊಡ್ಡ  ಪ್ರಾಕಾರವಿತ್ತು. ಅದರ ಮುಂಬಾಗಿಲಿನಲ್ಲಿ ನಿಂತರೇ ಬೆಂಗಳೂರಿನ ಮೆಜೆಸ್ಟಿಕ್ ಭಾಗದಲ್ಲಿರುವ ಸಿಟಿ ಸೆಂಟರ್ ನ ಪ್ರದೇಶದ ಹಾಗೆ ಕಾಣುತ್ತಿತ್ತು. ಸಿಟಿ ಸೆಂಟರ್ ಒಂದು ವೇಳೆ ದೇವಸ್ಥಾನವಾಗಿದ್ದರೆ ಆ ಪರಿಸರ ಹೇಗಿರುತ್ತಿತ್ತೋ ಗೊತ್ತಿಲ್ಲ.

ಮಕ್ಕಳಿಬ್ಬರನ್ನು ಕರೆದುಕೊಂಡು ದೇವಸ್ತಾನಕ್ಕೆ ಹೋಗಿ, ದೇವರ ದರ್ಶನ ಪಡೆದು ಆಚೆಯಿರುವ  ಮುಖ್ಯದ್ವಾರದ ಹತ್ತಿರ ಬಂದು ಹೊಸ್ತಿಲು ದಾಟುತ್ತಿದ್ದೆ. ಅಷ್ಟರಲ್ಲಿ ರಂಗು ರಂಗಿನ ಬಟ್ಟೆ ಧರಿಸಿದ ಏಳೆಂಟು ಜನ ಇರುವ ಒಂದು ಮಾರವಾಡಿ ಪರಿವಾರ ದೇವಸ್ಥಾನ ಪ್ರವೇಶಿಸುತ್ತಿತು. ಅದರಲ್ಲಿರುವ ಒಬ್ಬ ಮದ್ಯವಯಸ್ಕಳೂ ಅಲ್ಲದ ಎಳೆಯ ಹರೆಯದವಳೂ ಅನಿಸದ ಆದರೆ ಮದುವೆಯಾದ, ಅಂದಾಜು ಮೂವತೈದು ನಾಲವತ್ತರ ಆಸುಪಾಸಿನ ಮಹಿಳೆ,  ಹಳದಿ ಬಣ್ಣದ ಸೀರೆಯುಟ್ಟು, ಮಾಮೂಲಿನಂತೆ ತಲೆಯ ಮೇಲೆ ಸೆರಗನ್ನುಹೊತ್ತು ಬಂದಳು. ಹೆಣ್ಣುಮಕ್ಕಳ ವಯಸ್ಸು ಕಂಡು ಹಿಡಿಯುವುದೇ ಕಷ್ಟ ಅಂತಹದರಲ್ಲಿ ಈ ಮಾರವಾಡಿ ಮಹಿಳೆಯರ ವಯಸ್ಸು ಅಂದಾಜಿಸುವುದು ಇನ್ನು ಕಷ್ಟ. ಅವಳು ನನ್ನ ದೊಡ್ಡ ಮಗನನ್ನು ನೋಡಿ ಒಂದು ಮಮತೆಯ ಮುಗುಳ್ನನಗೆಯನ್ನು ಕೊಟ್ಟು ಮುಂದೆ ಹೋದಳು. ಈ ಮಾರವಾಡಿಗಳು ಎಷ್ಟೇ ಶ್ರೀಮಂತರಾದರೂ, ಅಧುನಿಕ ಜಗತ್ತಿನಲ್ಲಿ ಇದ್ದರೂ ಕೂಡ ಕೆಲವು ಸಂಪ್ರದಾಯಗಳನ್ನು ಇನ್ನೂ ಬಿಟ್ಟಿಲ್ಲ. ಅದರಲ್ಲಿ ಸದಾ ತಲೆಯ ಮೇಲಿನ ಸೆರಗುಯಿಟ್ಟುಕೊಳ್ಳುವ ಪದ್ಧತಿಯೂ ಒಂದು. ಈ ಪರಿವಾರದವರು ನಮ್ಮನ್ನು ದಾಟುವಷ್ಟರಲ್ಲಿ ನಾನು ದೇವಸ್ಥಾನದ ಹೊಸ್ತಿಲನ್ನು ದಾಟಿದ್ದೆ. ಇರುವ ಎರಡು ಮೂರು ಮೆಟ್ಟಿಲುಗಳನ್ನು ಇಳಿದು ಕೆಳಗೆ ಬರುವಷ್ಟರಲ್ಲಿ, ಮೆಜೆಸ್ಟಿಕ್ಕಿನ ಗದ್ದಲ ನನ್ನನ್ನು ಆವರಿಸಿತು. ಅಲ್ಲಿರುವ ರಸ್ತೆ ಬದಿಯ ಚಿಕ್ಕಪುಟ್ಟ ವಸ್ತುಗಳನ್ನು ಮಾರುವವರ ತಮಾಷೆ, ಗಲಾಟೆ ಎಂದಿನಂತೆ ಸಾಗಿತ್ತು. ಅದರಲ್ಲಿ ಒಂದು ಕಡೆಯಿಂದ ಒಬ್ಬರು ಒಂದೆರಡು ಟೋಪಿ ಬಿಸಾ ಕಿದರು. ಒಂದು ಟೋಪಿ ನನ್ನ ಎರಡೂ ಕಾಲುಗಳ ಮಧ್ಯ ಬಂದು ಸಿಕ್ಕಿಕೊಂಡಿತು. ಟೋಪಿ ಹಾರಿ ಬಂದ ಕಡೆಗೆ ದೃಷ್ಟಿ ಹಾಯಿಸಿದರೆ ಅಲ್ಲಿ ಇಬ್ಬರು ಮೂವರು ಮಂಗಳಮುಖಿಯರು ಕುಚೇಷ್ಟೆಯಿಂದ ನನ್ನ ಕಡೆಗೆ ನೋಡಿ ನಗುತ್ತಿದ್ದರು. ನಾನು ಟೋಪಿಯನ್ನು, ಅವುಗಳ ಮಾಲಿಕನ ಕೆಡೆಗೆ ಹಾರಿಸಿ ಎಸೆದು ಮತ್ತೆ ನನ್ನ ಲೋಕಕ್ಕೆ ಮರಳಿ ಬಂದೆ. ನನ್ನ ಅಕ್ಕ-ಪಕ್ಕ ನೋಡಿದೆ, ಮಕ್ಕಳಿಬ್ಬರೂ ಎಲ್ಲಿ? ಹಿಂದೆಯೂ ಇಲ್ಲ.

ನನ್ನ ಎದೆ ಧಸಕ್ ಎಂದಿತು. ಮಕ್ಕಳು ನನಗಿಂತ ಸ್ವಲ್ಪ ಹಿಂದೆ ಆಟವಾಡುತ್ತಾ ಬರುತ್ತಿದ್ದರು, ದೇವಸ್ಥಾನದಲ್ಲಿ ಅವರು ನನ್ನ ಹಿಂದೆ ಮುಂದೆಯೇ ಓಡಾಡುತ್ತಿದ್ದರು. ಆದರೆ ನಾನು ಮುಖ್ಯದ್ವಾರದ ಮೂರು ಮೆಟ್ಟಿಲು ಇಳಿದು ಬರುವಷ್ಟರಲ್ಲಿ ಅವರು ಮಾಯವಾಗಿದ್ದರು. ತಲೆ ಕೆಟ್ಟುಹೋಯಿತು, ಆ ಮೆಜೆಸ್ಟಿಕ್ ನಂತಹ ಗಲಾಟೆಯಲ್ಲಿ ಮಕ್ಕಳನ್ನು ಕಳೆದುಕೊಂಡ ನಾನು ಏಕಾಂಗಿಯಾಗಿ ಭಯದಲ್ಲಿ  ತತ್ತರಿಸಿದೆ. ಮಕ್ಕಳು ದೇವಸ್ಥಾನದ ಆಚೆ ಹೋಗಿಲ್ಲ ಅವರು ನನಗಿಂತ ಎರಡು ಹೆಜ್ಜೆ ಹಿಂದೆ ಇದ್ದರು ಅಂತ ನನಗೆ ನೆನಪಾಯಿತು. ಅವರು ಇನ್ನೂ ಒಳಗಡೆಯೇ ಇರಬಹುದು ಎಂದುಕೊಂಡು ನಾನು ದೇವಸ್ಥಾನ ಆವರಣ ಮತ್ತೆ ಪ್ರವೇಶಿಸಿದೆ. ಅಲ್ಲಿ ಎಡಭಾಗದಲ್ಲಿ ಒಂದು ಉಪದೇವಸ್ಥಾನವಿತ್ತು, ಮುಖ್ಯ ದೇವಸ್ಥಾನಕ್ಕಿಂತ ಚಿಕ್ಕದಾದರೂ ಅದರಲ್ಲಿಯೂ ಕೂಡ ಐವತ್ತು ಅರವತ್ತು ಜನ ಕೂರುವಷ್ಟು ದೊಡ್ಡ ಜಾಗವಿತ್ತು. ಅಲ್ಲಿ ಮಕ್ಕಳನ್ನು ಹುಡುಕಿದೆ ಅವರಲ್ಲಿರಲಿಲ್ಲ. ಆ ಮಾರವಾಡಿ ಪರಿವಾರ ಅಷ್ಟರಲ್ಲಿ ಅಲ್ಲಿ ಒಂದು ಕಡೆ ಕುಳಿತ್ತಿದ್ದರು.  ಆ ಹಳದಿ ಬಣ್ಣದ ಸೀರೆಯುಟ್ಟ ಮಹಿಳೆ ನನ್ನ ಹುಡುಗರನ್ನು ನೋಡಿರಬಹುದು ಎಂದು ಅಂದಾಜಿಸಿ, ನಾನು ಅವಳಲ್ಲಿ ವಿಚಾರಿಸಿದೆ, "ನನ್ನ ಮಕ್ಕಳನ್ನು ನೋಡಿದಿರಾ" ಅಂತ ಕೇಳಿದೆ, ಅವಳು ಅದೇ ಮಂದ ಮುಗುಳ್ನಗೆಯಲ್ಲಿ ಇಲ್ಲ ಅಂತ ತಲೆ ಅಲ್ಲಾಡಿಸಿದಳು. ಆ ಉಪ ದೇವಸ್ಥಾನದಿಂದ ಆಚೆ ಬಂದು ಎಡಕ್ಕೆ ತಿರುಗಿ ಮುಖ್ಯ ಪ್ರಾಂಗಣದಲ್ಲಿ ಹುಡುಕಾಡಲು ಪ್ರಾರಂಭಿಸಿದೆ. ಅವರಿಬ್ಬರ ಹೆಸರನ್ನು ಒಂದಾದ ಮೇಲೆ ಒಂದರಂತೆ ಕೂಗುತ್ತಾ ಹೋದೆ. ಮುಖ್ಯ ದೇವಸ್ಥಾನದ ಬಲಗಡೆಯ ಪ್ರದಕ್ಷಿಣಾ ಪಥದಲ್ಲಿ ಸಾಗಿ ಮುಂದೆ ಬಂದಿದ್ದೆ. ನಾನು ಮುಂದೆ ಹೋದಂತೆ ಅಲ್ಲಿ ಜನರ ಓಡಾಟ ಕಡಿಮೆಯಾಗಿತ್ತು. ಆದರೂ ಮಕ್ಕಳ ಹೆಸರನ್ನು ಕೂಗುವುದನ್ನು ನಾನು ನಿಲ್ಲಿಸಲಿಲ್ಲ. ಎಲ್ಲಿಯೂ ಮಕ್ಕಳು ಕಾಣುತ್ತಿಲ್ಲ. ನನ್ನ ದಿಗಿಲು ಇಮ್ಮಡಿಗೊಂಡಿತು. ಇಮ್ಮಡಿ ಏನು? ಅದು ಎಣಿಸಲಸಾಧ್ಯ ಆಗುವಷ್ಟು ಗುಣಿಸಿತು. ನನ್ನ ಹುಡುಕಾಟ ಹುಚ್ಚರ ಓಡಾಟದಂತೆ ಪರಿವರ್ತನೆಯಾಯಿತು. ನನ್ನ ನೋಡಿದ ಯಾರಿಗೇ ಆದರೂ ನನ್ನ ಪರಿಸ್ಥಿತಿ ಚೆನ್ನಾಗಿ ಅರ್ಥವಾಗುತ್ತಿತ್ತು. ಈಗ ನಾನು ಬಲಕ್ಕೆ ತಿರುಗಿ ದೇವಸ್ಥಾನದ ಹಿಂದಿನ ಭಾಗಕ್ಕೆ ಬಂದಿದ್ದೆ. ಅದು ಅಲ್ಲಲ್ಲಿ ಜಾಲಿಗಿಡಗಳು ಬೆಳೆದು ಇನ್ನಷ್ಟು ಭಾಯಾನಕವಾಗಿತ್ತ್ತು. ಅಲ್ಲಿ ಒಂದು ಕೆಂಪು ಕಲ್ಲಿನ ಮನೆಯು ದೇವಸ್ಥಾನದ ಬೆನ್ನಿಗೆ ಬೆನ್ನು ತಾಗಿಸಿದ್ದಂತೆ ಇತ್ತು. ಆದರೆ ಈ ಮನೆ ಹಿಂದೆ ದೇವಸ್ಥಾನವಿದೆ ಮತ್ತು ಅದರ ಆಚೆ ಮೆಜಿಸ್ಟಿಕ್ ನ ಗದ್ದಲವಿದೆ ಅನ್ನುವ ಯಾವುದೇ ಸುಳಿವು ಅಲ್ಲಿರಲಿಲ್ಲ. ಒಂದು ದೂರದ ಹಳ್ಳಿಯ ವಾತಾವರಣದಂತ್ತಿತ್ತು. ಅದು ಹೇಗೆ ಸಾಧ್ಯ?  ಆ ಮನೆಯ ಮುಂದಿನ ಕಟ್ಟೆಯ ಮೇಲೆ ಮೂವರು ಬಿಳಿತಲೆಯ ಹಿರಿಯ ರೈತರು ಧೋತ್ರ ಉಟ್ಟವರು ಹಾಯಾಗಿ ಹರಟುತ್ತಾ ಕುಳಿತ್ತಿದ್ದರು. ಅದರಲ್ಲಿ ಒಬ್ಬ ಮಧ್ಯದಲ್ಲಿ ಕುಳಿತವ ನಾರಂಜಿಯಿಂದ ತೆಗೆದ ನಾರಿನಿಂದ ಹಗ್ಗ ಹೊಸೆಯುತ್ತಿದ್ದ. ಬಹುಶಃ ಆ ಮನೆಯ ಒಡೆಯ ಅವನೇ ಇರಬೇಕು. ಆ ಜಾಗ ಈ ಮೂವರನ್ನು ಬಿಟ್ಟು ಅಕ್ಷರಶಃ ನಿರ್ಜನವಾಗಿತ್ತು. ಅಲ್ಲಿ ನನ್ನ ಬಲಭಾಗಕ್ಕೆ ಈ ಒಂದು ಮನೆ ಮತ್ತು ಎಡಭಾಗಕ್ಕೆ ಜಾಲಿ ಕಂಟಿಯಿಂದ ಕೂಡಿದ ಪಾಳು ಜಾಗ. ಅಲ್ಲಿ ಹುಡುಕುವಂತಹದ್ದೇನು ಇರಲಿಲ್ಲ ಏಕೆಂದರೆ ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತಿತು. ಆದ್ದರಿಂದ ನಾನು ರಭಸವಾಗಿ ಅವರ ಮುಂದಿನಿಂದ ಓಡುತ್ತಾ ಅವರಿಗೆ ಕೂಗಿ ಕೇಳಿದೆ. "ಈ ಕಡೆ ನೀವೇನಾದರೂ ಇಬ್ಬರು ಮಕ್ಕಳು ಹೋಗುದನ್ನ ನೋಡೀರಿ?" ಓಟ ಮಾತ್ರ ನಿಲ್ಲಲಿಲ್ಲ. ಹಗ್ಗ ಹೊಸೆಯುವ ವ್ಯಕ್ತಿ "ಇಲ್ಲಾ... !" ಅಂದನು. ತಮ್ಮ ಹರಟೆಯಲ್ಲಿ ತಲ್ಲೀನರಾದವರಲ್ಲಿ ಇದು ಅಪೇಕ್ಷಿತ ಉತ್ತರವೇ ಎನಿಸಿತು. ನಾನೊಂದಿಷ್ಟುಮುಂದೆ ಹೋಗುವದರಲ್ಲಿ ಆ ಹಿರಿಯನ ಪಕ್ಕ ಕುಳಿತವ ಏನೋ ಹೇಳಿದನೋ ಅಥವಾ ಇವನಿಗೆಯೇ ನೆನಪಾಯಿತೋ ಗೊತ್ತಿಲ್ಲ  ಅವನು "ಹಾಂ ಇಕಡಿ ಯಾಡ್ದ ಹುಡುಗುರು ಹೋಗ್ಯಾರ" ಎಂದು ರಾಗವಾಗಿ ಕೂಗಿ ಹೇಳಿದ. ನನಗೆ ಸ್ವಲ್ಪ ಬಲ ಬಂದಿತು. ನನ್ನ ಹುಡುಕಾಟ ಸರಿಯಾದ ದಾರಿಯಲ್ಲಿದೆ ಅಂತ ವಿಶ್ವಾಸ ಹುಟ್ಟಿತು. ಓಟದ ರಭಸವನ್ನು ಇನ್ನೂ ಹೆಚ್ಚಿಸಿದೆ. ಆದರೆ ಮಕ್ಕಳೆಲ್ಲಿ?

ಈಗ ನಾನು ಮತ್ತೆ ಬಲಕ್ಕೆ ತಿರುಗಿದೆ, ಅದು ಒಂದು ಬಯಲು ಪ್ರದೇಶ ಅಲ್ಲಿ ಸ್ವಲ್ಪ ನೀರು ನಿಂತಿತ್ತು. ಮುಂದೆ ಹೋದರೆ ಕೆಂಪು ಕಲ್ಲಿನಿಂದ ಕಟ್ಟಿದ ವಿಶಾಲವಾದ ಅಷ್ಟೇ ಪ್ರಾಚೀನದಾದ ಐಹೊಳೆಯಲ್ಲಿಯಂತಹ ಒಂದು ಬಾವಿ. ಬಾವಿಗೆ ಒಳಗೆ ಇಳಿಯಲು ಮೆಟ್ಟಿಲುಗಳಿದ್ದವು. ಆ ಮೆಟ್ಟಿಲುಗಳನ್ನು ಸಮೀಪಿಸುತ್ತಿದಂತೆ ನನಗೆ ಇಬ್ಬರೂ ಮಕ್ಕಳು ಆಟವಾಡುತ್ತಾ ಬಾವಿಯಲ್ಲಿ ಇಳಿಯುವುದು ಕಂಡಿತು. ಅವರು ನೀರಿನ ಮಟ್ಟಕ್ಕಿಂತ ಒಂದೆರೆಡು ಮೆಟ್ಟಿಲು ಅಷ್ಟೇ ಮೇಲಿದ್ದರು. ಆದರೆ ನೀರಿನ ಕಡೆಗೆಯೇ ನಡೆದಿದ್ದರು, ನನ್ನ ಆತಂಕ, ಭಯ ಇನ್ನೂ ಹೆಚ್ಚಾಯಿತು. ಅವರು ನೀರಿಗೆ ಇಳಿದರೇ? ಇಳಿದರೇ ಏನು ಬಂತು, ಅವರು ನೀರಿಗೆ ಇಳಿದೇಬಿಟ್ಟರು, ಆದರೆ ಅಲ್ಲಿ ನೀರಿನ ಆಳ ಅಷ್ಟೇನೂ ಇರಲಿಲ್ಲ ಮಕ್ಕಳ ಮೊಳಕಾಲಿಗೆ ಬರುವಷ್ಟು ಇತ್ತು. ಅದು ನನಗೆ ಸ್ವಲ್ಪ ಸಮಾಧಾನ ಕೊಟ್ಟಿತು,  ಸಧ್ಯ ಕಣ್ಣಿಗೆ ಕಂಡರಲ್ಲ ಎನಿಸಿತು. ಆದರೆ ಇವರು ಆಟವಾಡುತ್ತಾ ಮುಂದೆ ಹೋದರೇ, ಆ ಬಾವಿ ಒಂದೆರಡು ಹೆಜ್ಜೆಯ ನಂತರ ಆಳವಾಗಿದ್ದರೇ? ನಾನು ಅವಸರ ಅವಸರದಲ್ಲಿ ಮೆಟ್ಟಿಲು ಇಳಿಯಲು ಧಾವಿಸಿದೆ. ಅದೇಕೋ ಅವರನ್ನು ಕಂಡ ತಕ್ಷಣ  ಹೆಸರು  ಕೂಗುವದನ್ನು ನಿಲ್ಲಿಸಿದ್ದೆ. ಬಹುಶಃ ಓಟದ ದಣಿವಿನಿಂದ ಬಾಯಾರಿ, ನಾಲಿಗೆ ಒಣಗಿತ್ತು.

ಅಷ್ಟರಲ್ಲಿ ಭಯದಿಂದಾಗಿ ಎಚ್ಚರವಾಯಿತು, ಕಣ್ಣು ತೆರೆದೆ. ನೋಡಿದರೆ ನನ್ನ ಮೊದಲ ಮಗ ಕಣ್ಣ ಮುಂದೆಯೇ ನನ್ನ ಕಡೆಗೆ ಮುಖ ಮಾಡಿ ಮಲಗಿದ್ದಾನೆ, ಚಿಕ್ಕವ ತನ್ನ ಅಮ್ಮನ ಹತ್ತಿರ ಮಲಗಿದ್ದವ ಎದ್ದು ತನ್ನಷ್ಟಕ್ಕೆ ತಾನೇ ಮಾತಾಡಿಕೊಂಡು ಆಟವಾಡುತ್ತಿದ್ದಾನೆ. ಸದ್ಯ ಇದು ಮದ್ಯಾನ್ಹ ಮಲಗಿದಾಗಿನ ಕನಸು ಅಂತ ಗೊತ್ತಾಯಿತು. ಆದರೆ ಎದೆ ಮಾತ್ರ ಇನ್ನೂ ಢವ ಢವ ಅಂತ ಬಡಿದುಕೊಳ್ಳುತ್ತಿತ್ತು. ಕಣ್ಮುಂದೆ ಮುಗ್ದತೆಯಿಂದ ಮಲಗಿರುವ ಮಗನ ಮೈಮೇಲೆ ಮೃದುವಾಗಿ ಕೈಹಾಕಿ ಅಪ್ಪಿದೆ. ಅವನ ನಿದ್ರೆಯಲ್ಲಿಯ ಸಮಾಧಾನ ಚಿತ್ತದ ಆ ಮುಖವು, ಕನಸು ಏರಿಸಿದ ಎದೆ ಬಡಿತವನ್ನು ನಿಧಾನವಾಗಿ ಇಳಿಸಲಾರಂಭಿಸಿತು.