Saturday, January 13, 2018

ಸಾಫ್ಟವೇರ್ರೂ.... ಕನ್ನಡ ಪುಸ್ತಕಾನೂ...

ನಾನು ನಮ್ಮ ಊರಿಗೆ ಹೋಗಬೇಕಾದರೆ ಹೆಚ್ಚಾಗಿ ರೈಲಿನಲ್ಲೇ  ಪ್ರಯಾಣ ಮಾಡುವದು. ಅದರಿಂದ ನನಗೆ ಹಲವು ಲಾಭಗಳಿವೆ. ಕಡಿಮೆ ಖರ್ಚು, ಒಳ್ಳೆಯ ಗಾಳಿ ಬೆಳಕಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕಡಿಮೆ ಆಯಾಸ, ಮಲಗಲು ಅನುಕೂಲ, ಮನೆಯಿಂದ ತಂದ ಊಟವನ್ನು ಕುಳಿತುಕೊಂಡು ಆರಾಮಾಗಿ ಉಣ್ಣಬಹುದು ಮತ್ತು ಸರ್ಕಾರಿ ಸಂಸ್ಥೆಯಾದ್ದರಿಂದ ಯಾವಾಗಲೂ ಪ್ರಯಾಣದ ದರ ಒಂದೇ ಥರ. ಇದ್ದೆಲ್ಲಕ್ಕಿಂತ ಮುಖ್ಯವಾಗಿ ನಾನು ರೈಲು ಪ್ರಯಾಣ ಯಾಕೆ ಹೆಚ್ಚಾಗಿ ಇಷ್ಟಪದುವುದೆಂದರೆ, ಅದರಲ್ಲಿ ಕುಳಿತು ಆರಾಮವಾಗಿ ಯಾವುದಾದರು ಒಂದು ಕನ್ನಡ ಕಾದಂಬರಿಯನ್ನು ಓದುವ ಅವಕಾಶಕ್ಕಾಗಿ. ನಾನು ಓದಿದ ಅಷ್ಟು ಇಷ್ಟು ಪುಸ್ತಕಗಳು ಪ್ರಯಾಣ ಮಾಡುವಾಗಲೇ ಹೊರತು ಮನೆಯಲ್ಲಿ ಅಥವಾ ಇನ್ನೆಲ್ಲೋ ಏಕಾಂತದಲ್ಲಿ  ಹಾಯಾಗಿ ಕುಳಿತು ಓದಿದ್ದಲ್ಲ.  ಹೀಗೆ ಒಂದು ಸಾರಿ ನಾನು ಒಬ್ಬನೇ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದೆ. ಏಕಾಂಗಿ ಅಂದರೆ ಮನೆಯವರು ಯಾರು ಇಲ್ಲ ಅಂತ ಅಷ್ಟೇ ಅರ್ಥ ಆದರೆ ಅಂಥ ಸಮಯದಲ್ಲಿ ನಾನು ನನ್ನ ಜೊತೆಗಾರರಾಗಿ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತೇನೆ.  ಆಗ ಕಾರಂತರ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಎತ್ತಿಕೊಂಡು ಹೋಗಿದ್ದೆ. ನನ್ನ ಪಕ್ಕ ಕುಳಿತ ಒಬ್ಬ ಸಹ ಪ್ರಯಾಣಿಕರು ನನ್ನ ಜೊತೆ ಮಾತಿಗೆ ಇಳಿದರು. ಮುಂದಿನ ನಿಲ್ದಾಣ ಯಾವುದು? ಎಷ್ಟು ಸಮಯದ ಪ್ರಯಾಣವಿದು? ಅಂತೆಲ್ಲ ಮಾತಾಡಿದ ಮೇಲೆ ಅವರು ನಾನು ಕೈಯಲ್ಲಿ ಹಿಡಿದಿರುವ ಪುಸ್ತಕದ ಕಡೆಗೆ ಮಾತು ಹೊರಳಿಸಿದರು. "ಯಾವ ಪುಸ್ತಕ?" ಅಂದರು. ನಾನು ಅದರ ಮುಖಪುಟ ತೋರಿಸಿ, ಕಾರಂತರ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಅಂದೆ. ಅವರಿಗೆ ಕನಿಷ್ಠ ಕಾರಂತರ ಪರಿಚಯವಂತೂ ಇರಲೆಬೇಕು ಅಂದು ಕೊಂಡು ಸ್ವಲ್ಪ ಕಾರಂತರ ಬಗ್ಗೆ ಚರ್ಚಿಸೋಣ ಎಂದು ನಾನು ಯೋಚಿಸಿದ್ದೆ. ಯಾಕೆಂದರೆ ಇಂತಹ ಕೆಲವು ಚರ್ಚೆಗಳಲ್ಲೇ ಮುಂದೆ ಖರಿದಿಸುವ ಪುಸ್ತಕದ ಬಗ್ಗೆ ಅಥವಾ ಸಾಹಿತಿಯ ಬಗ್ಗೆ ಗೊತ್ತಾಗುವುದು.  ಆದರೆ ಆ ವ್ಯಕ್ತಿ ಕಾರಂತರು ಅಥವಾ ಸಾಹಿತ್ಯದ ಬಗ್ಗೆ ಏನನ್ನೂ ಕೇಳದೇ ನನ್ನ ಬಗ್ಗೆಯೇ ಕೇಳಿದರು 
"ಏನ ಕೆಲಸ ಮಾಡ್ತಿರಾ? ಟೀಚರ್ರಾ ನೀವು?" 
"ಅಲ್ಲಾ ಸಾಫ್ಟವೇರ್ ಇಂಜಿನಿಯರ್"
"ಮತ್ತೆ ಕನ್ನಡ ಪುಸ್ತಕ ಒದತಾಯಿದ್ದಿರಾ?"
ಆ ಕ್ಷಣ ನನಗೆ ಕೋಪ ಮತ್ತು ನಗು ಎರಡೂ ಬಂತು. ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುವವರು ಸಾಹಿತ್ಯದ ಪುಸ್ತಕಗಳನ್ನು ಓದುವುದಿಲ್ಲ ಅಂತ ಅವರ ಅಭಿಪ್ರಾಯವಾಗಿತ್ತು. ಅವರ ಮೇಲೆ ಕೋಪ ತೋರಿಸಿ ಏನು ಉಪಯೋಗ ಅಂದುಕೊಂಡು ಬರಿ ನಗು ಮಾತ್ರ ತೋರಿಸಿ "ಯಾಕೆ ಓದಬಾರದಾ?" ಅಂತ ಕೇಳಿದೆ.
ಅವರಿಗೆ ಸ್ವಲ್ಪ ತಬ್ಬಿಬ್ಬಾಯಿತು "ಅಲ್ಲಾ ಸಾಫ್ಟವೇರ್ ಅಂದ್ರಲ್ಲಾ ಅದಕ್ಕೇ .... " ಅಂತ ರಾಗ ಎಳೆದರು. ನಾನವರಿಗೆ ವಿವರಣೆ ಕೊಡುವ ಅವಶ್ಯಕತೆಯಿಲ್ಲ ಅನಿಸಿತು. ಆಮೇಲೆ ಅವರೂ ಮೌನಿಯಾದರು, ನಾನು ಕೂಡ ಪುಸ್ತಕದಲ್ಲಿ ಮತ್ತೆ ತಲೆ ತಗ್ಗಿಸಿದೆ.

ಈ ದುಡಿಯಬೇಕು, ದುಡಿದು ದುಡ್ಡು ತರಬೇಕು, ತಂದ ದುಡ್ಡಲ್ಲಿ ನನ್ನ ಮತ್ತು ಮನೆಯವರ ಹೊಟ್ಟೆ ತುಂಬಿಸಬೇಕು ಅನ್ನುವ ಜವಾಬ್ದಾರಿ ನನ್ನ ಮೇಲೆ ಇರದಿದ್ದರೆ, ನಾನು  ಸದಾ ಕಾಲ ಕನ್ನಡ ಸಾಹಿತ್ಯದ ಸವಿಯನ್ನು ಸವಿಯುತ್ತ ಕಳೆದು ಬಿಡತ್ತಿದ್ದೆ. ಸುಗಮ ಸಂಗೀತದಲ್ಲಿ ಕನ್ನಡ ಭಾವಗೀತೆ ಕೇಳೋದು ಮತ್ತು  ಕನ್ನಡ ಕಾದಂಬರಿಗಳನ್ನು ಓದುವದು. ಇಷ್ಟಾದರೆ ಅದೇ ನನ್ನ ಸ್ವರ್ಗ. ಆದರೇನು ಮಾಡುವುದು? ಬರೀ ಕುಳಿತು ಓದಲಿಕ್ಕೆ ನಮ್ಮ ಹಿರಿಯರು ನನಗೆ ಕುಡಿಕೆ ಹೊನ್ನ ಕೊಟ್ಟು ಹೊಗಿಲ್ಲವಲ್ಲ.  ಜೀವನ ನಡೆಯಬೇಕಲ್ಲಾ!