Wednesday, May 30, 2018

सर्वेषु भूतेषु दया हि धर्मः|

To show kindness in all living beings is Dharma.

ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.

ಎಲ್ಲ ಕಾಲಕ್ಕೂ ಎಲ್ಲ ಕಡೆಯೂ ದಯಾಮಯಿಯಾಗಿರಲು ನಮಗೆ ಕಷ್ಟವಾಗಬಹುದು, ಆದರೆ, ಸದಾ ಶಾಕಾಹಾರಿಯಾಗಿ ಇರಲು ಪ್ರಯತ್ನಿಸಬಹುದಲ್ಲ. ನನ್ನ ಆಹಾರ ನನ್ನ ಇಚ್ಛೆ ಅಂತ ಮೊಂಡುತನ ತೋರಿಸುವುದರಲ್ಲಿ ಏನು ಜಾಣತನಯಿದೆ?

ಇನ್ನು ಶಾಕಾಹಾರಿಗಳಿಗೆ ಕೆಲವು ಜನ ಪ್ರಶ್ನೆ ಕೇಳುತ್ತಾರೆ, ನೀನು ತಿನ್ನುವ ಅಲೂಗಡ್ಡೆಯ ಚಿಪ್ಸ್, ಐಸ್ಕ್ರೀಮ್, ಚಾಕೊಲೆಟ್, ಕೇಕ್ ಗಳಲ್ಲಿ ಪ್ರಾಣಿಯ ಒಂದಲ್ಲ ಒಂದು ದೇಹದ ಅಂಶವಿದೆ, ನೀನು ಕೂಡ ಶುದ್ಧ ಶಾಕಾಹಾರಿಯಲ್ಲ. ನಿಜ ಈಗಿನ ಕಾಲದಲ್ಲಿ ಕಲಬೆರಕೆ ಅತೀ ಹೆಚ್ಚು. ನಾವು ಹೋಟೆಲ್, ಅಂಗಡಿಗಳಲ್ಲಿ ಖರೀದಿಸುವ ಯಾವುದೇ ಆಹಾರಕ್ಕೆ ರುಚಿ ಬರುವ ಸಲುವಾಗಿಯೋ, ಇಲ್ಲಾ ಮೃದುತ್ವ ಹೆಚ್ಚಾಗಲೋ, ಗಟ್ಟಿಯಾಗಿರಲೋ, ಇಲ್ಲಾ ಹೆಚ್ಚು ಕಾಲ ಬಾಳಿಕೆಬರಲೋ ಅಥವಾ ಗರಿಗರಿಯಾಗಿ ಇರುವಂತೆ ಮಾಡಲೋ ಇನ್ನೂ ಯಾವ್ಯಾವುದೋ ಕಾರಣಕ್ಕೆ ಕೆಲವು ಪದಾರ್ಥಗಳನ್ನು ಸೇರಿಸಿರುತ್ತಾರೆ. ಆ ಪದಾರ್ಥಗಳು ಹೇಗೆ ತಾಯಾರದವು ಅನ್ನುವದನ್ನು ಹುಡುಕುತ್ತ ಹೋಗಲು ನಮಗೆ ಯಾರಿಗೂ ಸಮಯವಿಲ್ಲ. ಎಲ್ಲರೂ ಅಂತರ್ಜಾಲದಲ್ಲಿ ಸಿಗುವ ಮಾಹಿತಿಯನ್ನೇ ಅವಲಂಭಿಸಬೇಕು. ಆದರೂ ಕೆಲವು ಜನ ನಿಖರವಾಗಿ ಹೇಳುತ್ತಾರೆ ಅವುಗಳಲ್ಲಿ ಯಾವುದೋ ರೂಪದಲ್ಲಿ ಪ್ರಾಣಿಯ ದೇಹದ ಒಂದು  ಅಂಶವನ್ನು ಬೆರೆಸಿರುತ್ತಾರೆ ಅಂತ. ಅವರ ಮಾತು ಎಷ್ಟು ಸತ್ಯ ಎಷ್ಟು ಸುಳ್ಳು ಅಂತ ಪರಾಮರ್ಶಿಸಿ ವಾದ ಮಾಡುವದಕ್ಕಿಂತ ಅಂಥಹ ಆಹಾರಗಳನ್ನು ತ್ಯಜಿಸಿಬಿಡುವುದು ಸರಿಯಲ್ಲವೇ. ನಾವು ಕಾಣದ್ದು ಹೇಗೆ ಇದೆ ಅಂತ ನಾವು ಹೇಳಲು ಹೇಗೆ ಸಾಧ್ಯ? ನಮಗೆ ಗೊತ್ತಿರುವ ಅಥವಾ ಮನೆಯಲ್ಲಿ ಮಾಡಿದ ಆಹಾರ ಮಾತ್ರ ಸೇವಿಸಿ ಸಾಧ್ಯವಾದಷ್ಟು ಶಾಕಾಹಾರಿಯಾಗಿ ಇರಬಹುದಲ್ಲ. 

ನಮ್ಮ ಶಾಕಾಹಾರಿತನವನ್ನು ಜಂಭದಿಂದ ತೋರಿಸಿಕೊಳ್ಳುವ ಅಗತ್ಯತೆ ಯಾರಿಗೂ ಬೇಡ. ನಮ್ಮ ಮನಸಾಕ್ಷಿಗೆ ನಾವು ಶಾಕಾಹಾರಿಯಾದರೆ ಸಾಕು. 

ಕೊನೆಯ ಗುಳಿಗೆ -  ಕೆಲವು ಜನ ಈ ಯಪ್ಪ ಶಾಖಾಹಾರವನ್ನು ಪದೇ ಪದೇ  ಶಾಕಾಹಾರ ಅಂತ ತಪ್ಪಾಗಿ ಬರೆದಿದ್ದಾನಲ್ಲ ಅಂತ ಅಂದುಕೊಳ್ಳಬಹುದು. ಆದರೆ ನನಗಸಿನಿದ ಹಾಗೆ ಶಾಕಾಹಾರವೇ ಸರಿಯಾದ ಪದ. ಶಾಕ ಅಂದರೆ ಪಲ್ಲೆ, ತರಕಾರಿ. ಶಾಖ ಅಂದರೆ ಕಾವು. ಶಾಖಾಹಾರ ಪದ  ಅಪಭ್ರಂಶವಾಗಿ ಬಂತೋ ಇಲ್ಲಾ ಶಾಖ ಕೊಟ್ಟು ಬೇಯಿಸಿದ ಶಾಕಾಹಾರ ಶಾಖಾಹಾರವಾಯಿತೋ ಗೊತ್ತಿಲ್ಲ.