Friday, October 4, 2019

ಚೆಲುವು ಬಾಗಿತು

ಸೂರ್ಯಕಾಂತಿ ಹೂವು ಚೆಲುವಾಗಿ ಅರಳಿ ನಿಂತಿದ್ದಳು. ಎಲ್ಲರ ಕಣ್ಮನ ಸೆಳೆಯುತ್ತಿದ್ದಳು. ತನ್ನ ಅಂದಕ್ಕೆ ತಾನೇ ಬೀಗುತ್ತಾ ದಿನಾಲೂ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ತಲೆಯೆತ್ತಿ ಮೆರೆಯುತ್ತಿದ್ದಳು. ತಲೆಯಲ್ಲಿ ಏನೂ ಇಲ್ಲದಿದ್ದರೂ ಅಂದವೊಂದೇ ನನ್ನ ಆಸ್ತಿ, ಅಷ್ಟೇ ಸಾಕು ಮಿಕ್ಕಿದ್ದೆಲ್ಲ ಮಿಥ್ಯ, ಎಲ್ಲರೂ ನನ್ನ ನೋಡಿ ನಾಚಬೇಕು ಎಂದು ನುಲಿಯುತ್ತಿದ್ದಳು. ವೈಯಾರದ ಅವಳ ನಡುವಳಿಕೆ ದಿನೇ ದಿನೇ  ಹೆಚ್ಚುತ್ತಲೇ ಇತ್ತು. ಎಲ್ಲರನ್ನೂ ಮೋಹಿಸುತ್ತಿದ್ದಳು. ಬೆಳಿತಾ ಬೆಳಿತಾ ಅವಳು ಎತ್ತರ ಎತ್ತರವಾಗುತ್ತಾ ಹೋದಳು. ಅವಳು ಸದಾ ಸೂರ್ಯ ದೇವನನ್ನು ಏಕಚಿತ್ತದಿಂದ ಬಿಟ್ಟ ಕಣ್ಣಿನಿಂದ ನೋಡುತ್ತಲೇ ಇರುವುದನ್ನು ಕಂಡ ಜನ, ವಿಸ್ಮಯಗೊಂಡಿದ್ದರು. 'ಬೇರೆ ಹೂವುಗಳಲ್ಲಿ ಇಲ್ಲದ ಛಲ, ಇವಳಲ್ಲಿ ಹೇಗಿದೆ' ಎಂದು ಬೆರಗಾಗಿದ್ದರು. ಇವಳು ನೆಟ್ಟ ನೋಟ ಬಿಡದೇ ಸೂರ್ಯನನ್ನು ನೋಡುವುದನ್ನು ಗಮನಿಸಿದವರು, ಇವಳು ಸೂರ್ಯನನ್ನೇ ಹಿಂಬಾಲಿಸುತ್ತಿದ್ದಾಳೆ ಎಂದು ಊಹಿಸಿದ್ದರು. ಅವಳೋ ಸೂರ್ಯನ್ನೇನು ನೋಡುತ್ತೀರಿ, ನನ್ನ ನೋಡಿ ಎಂದು ಕೊಚ್ಚಿಕೊಲ್ಲುತ್ತಿದ್ದಳು. ಆದರೆ ಸೂರ್ಯ ದಿನಾಲೂ ಮೇಲಿನಿಂದ ಇವಳನ್ನು ನೋಡಿ ನಿರಾತಂಕದಿಂದ ಸುಮ್ಮನೆ ಮುಗುಳ್ನಗುತ್ತಿದ್ದ. ಅವನಿಗೆ ತನ್ನ ಶಕ್ತಿ ಪರಾಕ್ರಮದ ಅರಿವಿದ್ದರೂ ಜಂಭವಿರಲಿಲ್ಲ. ಯಾಕೆಂದರೆ  ಅವನ ಹಿರಿತನಕ್ಕೆ ಅವನಿಗೆ ಜ್ಞಾನ ಕೂಡ ಹಿರಿದಾಗಿತ್ತು. ತನ್ನ ಇತಿಮಿತಿಗಳನ್ನು ಅವನು ಅರಿತಿದ್ದ.  ಅವನಿಗೆ ಮಹತ್ತಾದ ಮೇಘರಾಜನ ಆಟಗಳು ಗೊತ್ತಿದ್ದವು. ನನ್ನ ಕಿರಣಗಳನ್ನು ಅಡ್ಡಗಟ್ಟಿ ನನ್ನನ್ನೇ ಮಂಕುಕವಿಯುವಂತೆ ಮೇಘ ಮಾಡುತ್ತಾನೆ ಅಂತ ತಿಳಿದಿದ್ದ. ಇನ್ನು ಚಂದ್ರ, ತನ್ನಿಂದಾನೇ ಬೆಳಕು ಪಡೆದು ತನಗೆಯೇ ತಿರುಗಿ ಗ್ರಹಣ ಹಿಡಿಸಿ ವಸುಂಧರೆಯ ನೋಡದಂತೆ ಮಾಡುತ್ತಾನೆ ಎಂದು ಅರಿತಿದ್ದ. ಜಗಕ್ಕೆ ಶಕ್ತಿ ಕೊಡುವ ನನಗೆಯೇ ಕೆಲವರು ಅಡ್ಡಗಾಲು ಹಾಕುವಾಗ ನಾನು ನನ್ನ ಮಿತಿಯಲ್ಲಿ ಇರಬೇಕು ಎಂದು ಕಲಿತಿದ್ದ. ವಿನಮ್ರದಿಂದ ಸದಾ ತನ್ನ ಕೆಲಸ ತಾನು ಮಾಡುತ್ತಿದ್ದ.

ಅಂದಗಾತಿ ಸೂರ್ಯಕಾಂತಿ ಹೂವು ಇನ್ನೂ ಎಳಸು, ಜಗದ ನಿಯಮ ತಿಳಿದಿಲ್ಲ, ಜ್ಞಾನದ ಬಲ ಗೊತ್ತಿಲ್ಲ. ಅದಕ್ಕೆ ಗುರುವಿನ ರೂಪದಲ್ಲಿ ಯಾರೂ ಬಂದು ಇನ್ನು ಜ್ಞಾನ ಮೊಳೆಯುವಂತೆ ಮಾಡಿರಲಿಲ್ಲ. ಆದರೆ ಎಲ್ಲಾ ವಿಧಿ ಲಿಖಿತವೆಂಬಂತೆ ಭ್ರಮರ ಗುರುವಾಗಿ ಹೂವಿನ ಹತ್ತಿರ ಬಂದ. ಭ್ರಮರನು ನಿರ್ಲಿಪ್ತ ಗುಣದ ಅಲೆಮಾರಿ. ಯಾರು ತನ್ನ ಗಾನ ಕೆಳತ್ತಾರೋ ಇಲ್ಲವೋ ಎಂದು ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೇ ಸದಾ ತನ್ನ ನಾದದಲ್ಲಿ ಗುನುಗುತ್ತ ಅಲೆಯುತ್ತಿದ್ದ. ಯಾರ ಪರಿವೆಯೇ ಇಲ್ಲದೆ ಸದಾ ನಿಶ್ಚಿಂತೆಯಿಂದ ತನ್ನಿಷ್ಟದಂತೆ ಹಾರಾಡುತ್ತಿದ್ದ. ಅವನಿಗೆ ಅಂದವಿಲ್ಲ ಆದರೂ, ಜ್ಞಾನ ಮೊಳೆಸುವಂಥ ಕಲೆಯಿದೆ. ಈಗ ಅವನಿಗೆ ತನ್ನ ಧರ್ಮಾಧಾರಿತ ಕೆಲಸದ ಸಮಯ ಬಂದಿತ್ತು. ಗುರುವಾಗಿ ಹೂವಿನ ತಲೆಯ ಮೇಲೆಯೇ ಕುಳಿತು ಪಾಠ ಹೇಳಿಕೊಡಬೇಕಾಗಿತ್ತು. ಅಂದಕ್ಕೆ ಬೆಲೆ ಅಲ್ಪ ಆದರೆ ಶಕ್ತಿಗೆ, ಯುಕ್ತಿಗೆ ಬಲವುಂಟು, ದೀರ್ಘ ಬಾಳಿಕೆಯುಂಟು ಎಂದು ಜ್ಞಾನದ ಬೀಜ ಸೂರ್ಯಕಾಂತಿಯಲ್ಲಿ ಮೂಡುವಂತೆ ಮಾಡಿದ. ಅದೇ ಸಮಯಕ್ಕೆ ಸೂರ್ಯನೂ ಸೂರ್ಯಕಾಂತಿ ಹೂವಿನಲ್ಲಿರುವ ಬೀಜಗಳನ್ನು ಬಲವಾಗುವಂತೆ ಮಾಡಿದ. ಕೀಟಗಳು ಬಾಧಿಸದಂತೆ ತಡೆದು ಹದವಾದ ವಾತಾವರಣ ನಿರ್ಮಿಸಿದ. ಹೂವು ಕೂಡ ಚಿತ್ತಾರವಾಗಿ ಚೊಕ್ಕಟ್ಟಾಗಿ ಬೀಜಗಳನ್ನು ಜೋಡಿಸಿಕೊಳ್ಳುತ್ತ ಅಂದದ ಕಡೆಗೆ ಕಡಿಮೆ ಗಮನ  ಹರಿಸಿದಳು. ಬೀಜಗಳು ಗಟ್ಟಿಯಾದಂತೆ ಹೂವು ಮಾಗಿತು. ಈಗ ಪ್ರೌಢಳಾಗಿ ಸೂರ್ಯನನ್ನು ದಿಟ್ಟಿಸದೇ ನಮಿಸುವಂತೆ  ತಲೆ ತಗ್ಗಿಸಿದಳು. ಮುಂಚೆ ಪಟ್ಟ ಜಂಭಕ್ಕೆ ತಾನೇ ನಾಚಿ ತಲೆ ಬಗ್ಗಿಸಿದಳು. ರೈತನು ಅವಳು ಬಿಟ್ಞ ಜ್ಞಾನದ ಬೀಜಕ್ಕೆ ನಮಿಸಿ, ಪೂಜಿಸಿ ಬೆಲೆಕೊಟ್ಟ.