Thursday, November 17, 2022

ಕರುಣಾಮಯಿ

ಸಾಗರವು ಕರುಣಾಮಯಿ ತಂದೆಯಂತೆ. ತನ್ನೊಡಲಲ್ಲಿ ನೀರನ್ನಷ್ಟೇ ಅಲ್ಲದೇ ಅಪಾರ ಜೀವ ಜಂತುಗಳಿಗೂ ಜನ್ಮಕೊಟ್ಟು ಸಲಹುತ್ತಾನೆ.  ಆದರೆ ಅಲ್ಲಿ ಒಳಗಿರುವ ನೀರು ಮಾತ್ರ, ಸಾಗರನ  ಬಿಟ್ಟು ಸೂರ್ಯನ ಶಾಖದಿಂದ ಮೇಲೆ ಹಾರುವದು. ಅದನ್ನು ನೋಡಿ, ಆತಂಕಪಟ್ಟು ಪ್ರಯತ್ನಪೂರ್ವಕವಾಗಿ ಸಾಗರವು  ಅಲೆ ಅಲೆಯಾಗಿ ಮೇಲೆದ್ದು, ಮರಳಿ ಬಾ ಎಂದು ಕೈದೋರಿ ಕರೆಯುತ್ತದೆ. ಈ ನೀರಿಗೆ ತಂದೆಯ ಕರೆ, ಭೂತಾಯಿಯ ಮಮತೆಯ ಮೊರೆ, ಗುರುತ್ವದ ಸೆಳೆತ ಎಲ್ಲವೂ ಹಗುರವಾಗಿ ಕಾಣುತ್ತದೆ. ವಿಪರ್ಯಾಸವೆಂದರೆ ನೀರಿನ ಮೇಲೆ ದೂರದ ಸೂರ್ಯ ಮತ್ತು ನಿಲ್ಲದೇ  ಚಲಿಸುವ ಅಲೆಮಾರಿ  ಪವನರ(ಗಾಳಿಯ) ಪ್ರಭಾವವೇ ಅಂತಹುದು. ನೀರು ಮೇಲೆ ಮೇಲೆ ಹೋಗಿ ತೇಲಾಡುವ ಮೇಘವಾಗುವುದು. ಸುತ್ತಿ ಸುಳಿದು, ಮೈಭಾರವಾಗಿ ಮತ್ತೆ ಭೂಮಿಗೆ ವರ್ಷಧಾರೆಯಾಗಿ ಸುರಿವುದು. ಸುರಿವ ನೀರನ್ನು ಭೂಮಿಯು ತವರಿಗೆ ಬಂದ ಮಗಳಂತೆಸಂತೋಷದಿಂದ ಸ್ವಾಗತಿಸುವಳು. ನೀರು ನದಿಯಾಗಿ ಮತ್ತೆ ವೈಯಾರದಿಂದ ನಲಿಯುತ್ತ ಭೂಮಿಯೆಲ್ಲ ಸುತ್ತಾಡಿ ಕೊನೆಗೆ  ಸಾಗರನೆಡೆಗೆ ಬರುವುದು. ಸಾಗರ ಬಂದವರಿಗೆಲ್ಲ ಬಾ ಎನ್ನುವ ಜಾಯಮಾನದವ, ಇನ್ನು ಹೆತ್ತ ಮಗಳಂತೆ ತನ್ನಿಂದ ದೂರಾದ ನೀರಿಗೆ ಬೇಡ ಅಂದಾನೆಯೇ? ಅವನು ಕೂಡ ಎದೆಯುಬ್ಬಿ, ನದಿಯಾಗಿ ಬಂದ ನೀರನ್ನು ಮರಳಿ ಅಪ್ಪುವನು. ಕರುಣಾಮಯಿ ಸಾಗರ. ನೀರೇ ಈ ನಿನ್ನ ನಿರಂತರ ಪಯಣ ಅನುಪಮ.