Thursday, November 17, 2022

ಕರುಣಾಮಯಿ

ಸಾಗರವು ಕರುಣಾಮಯಿ ತಂದೆಯಂತೆ. ತನ್ನೊಡಲಲ್ಲಿ ನೀರನ್ನಷ್ಟೇ ಅಲ್ಲದೇ ಅಪಾರ ಜೀವ ಜಂತುಗಳಿಗೂ ಜನ್ಮಕೊಟ್ಟು ಸಲಹುತ್ತಾನೆ.  ಆದರೆ ಅಲ್ಲಿ ಒಳಗಿರುವ ನೀರು ಮಾತ್ರ, ಸಾಗರನ  ಬಿಟ್ಟು ಸೂರ್ಯನ ಶಾಖದಿಂದ ಮೇಲೆ ಹಾರುವದು. ಅದನ್ನು ನೋಡಿ, ಆತಂಕಪಟ್ಟು ಪ್ರಯತ್ನಪೂರ್ವಕವಾಗಿ ಸಾಗರವು  ಅಲೆ ಅಲೆಯಾಗಿ ಮೇಲೆದ್ದು, ಮರಳಿ ಬಾ ಎಂದು ಕೈದೋರಿ ಕರೆಯುತ್ತದೆ. ಈ ನೀರಿಗೆ ತಂದೆಯ ಕರೆ, ಭೂತಾಯಿಯ ಮಮತೆಯ ಮೊರೆ, ಗುರುತ್ವದ ಸೆಳೆತ ಎಲ್ಲವೂ ಹಗುರವಾಗಿ ಕಾಣುತ್ತದೆ. ವಿಪರ್ಯಾಸವೆಂದರೆ ನೀರಿನ ಮೇಲೆ ದೂರದ ಸೂರ್ಯ ಮತ್ತು ನಿಲ್ಲದೇ  ಚಲಿಸುವ ಅಲೆಮಾರಿ  ಪವನರ(ಗಾಳಿಯ) ಪ್ರಭಾವವೇ ಅಂತಹುದು. ನೀರು ಮೇಲೆ ಮೇಲೆ ಹೋಗಿ ತೇಲಾಡುವ ಮೇಘವಾಗುವುದು. ಸುತ್ತಿ ಸುಳಿದು, ಮೈಭಾರವಾಗಿ ಮತ್ತೆ ಭೂಮಿಗೆ ವರ್ಷಧಾರೆಯಾಗಿ ಸುರಿವುದು. ಸುರಿವ ನೀರನ್ನು ಭೂಮಿಯು ತವರಿಗೆ ಬಂದ ಮಗಳಂತೆಸಂತೋಷದಿಂದ ಸ್ವಾಗತಿಸುವಳು. ನೀರು ನದಿಯಾಗಿ ಮತ್ತೆ ವೈಯಾರದಿಂದ ನಲಿಯುತ್ತ ಭೂಮಿಯೆಲ್ಲ ಸುತ್ತಾಡಿ ಕೊನೆಗೆ  ಸಾಗರನೆಡೆಗೆ ಬರುವುದು. ಸಾಗರ ಬಂದವರಿಗೆಲ್ಲ ಬಾ ಎನ್ನುವ ಜಾಯಮಾನದವ, ಇನ್ನು ಹೆತ್ತ ಮಗಳಂತೆ ತನ್ನಿಂದ ದೂರಾದ ನೀರಿಗೆ ಬೇಡ ಅಂದಾನೆಯೇ? ಅವನು ಕೂಡ ಎದೆಯುಬ್ಬಿ, ನದಿಯಾಗಿ ಬಂದ ನೀರನ್ನು ಮರಳಿ ಅಪ್ಪುವನು. ಕರುಣಾಮಯಿ ಸಾಗರ. ನೀರೇ ಈ ನಿನ್ನ ನಿರಂತರ ಪಯಣ ಅನುಪಮ. 

Monday, October 17, 2022

आशा

एक चिंगारी थी धारण में 

जिसको थोड़ी सी हवा लगी 

तो मशाल बन के निकली हाथों मे 


तब तम थी और हवा धीमी थी 

आँखों को सिर्फ रोशनी दिखती थी 

और कदमों को राहे खुल जाती थी 


अब जाने कहां से आँधी निकली है 

मशाल ख़ुद डगमगा के रो रही है 

ना जाने कब आग लगे सफ़र को  


अब तो या यहां दिन निकले 

और मशाल के साथ,

मुझ को भी सुरज निगले 


या उम्मीद की बरसात हो जाये 

सारे मैल को फिसला दे धुलने को 

उसी बीज़ को भिगोये उगने को 


फिर निकालूँगा थाट से

उसी अमित रोशनी को जगाते 

एक नयी राह पे कदम उठाते ।

Thursday, September 1, 2022

ಕಟ್ಟೆ

ನದಿಗಳು ಪೃಥ್ವಿಯ ಜೀವನಾಡಿಗಳು.ಇಂತಹ ಜೀವನಾಡಿಯ ಮೇಲೆ ಮಾನವನ ನಿಯಂತ್ರಣ ಎಷ್ಟು ಸರಿ? ಆಧುನಿಕತೆ, ಆರ್ಥಿಕತೆ ಬಗ್ಗೆ ನಾವು ಎಷ್ಟೇ ಲಾಭ ತೋರಿಸಿದರೂ ಪ್ರಕೃತಿಯ ಹಾನಿಯನ್ನು ಕಡೆಗಣಿಸಬಾರದು. ಆಣೆಕಟ್ಟು ಮತ್ತು ಕಾಲುವೆಗಳ ಆರ್ಥಿಕ ಮತ್ತು ಸಾಮಾಜಿಕ ಲಾಭ-ನಷ್ಟ ವಿಷಯಗಳ ಚರ್ಚೆ ಆಚೆಗಿಟ್ಟು ಕೇವಲ ನಿಸರ್ಗದ ಮೇಲೆ ಅವುಗಳಿಂದ ಆಗುವ ಪರಿಣಾಮಗಳನ್ನು ಗಮನಿಸುವ ಕಾಲ ಈಗ ಬಂದಿದೆ.

ಹಿನ್ನೆಲೆ 

ಸಾವಿರಾರು ವರ್ಷಗಳಿಂದ ಮನುಷ್ಯ ಪರಿಸರದ ಜೊತೆ ಅನೇಕ ಪ್ರಯೋಗ, ಪ್ರಮಾದಗಳನ್ನು ಮಾಡಿಕೊಂಡು ಬಂದಿದ್ದಾನೆ. ಪ್ರಕೃತಿಯ ವ್ಯವಸ್ಥೆಯನ್ನೇ ತಿರುಚಲು ಪ್ರಯತ್ನಿಸಿದ್ದಾನೆ. ಕೃಷಿಗಾಗಿ ಅರಣ್ಯನಾಶ, ಅಭಿವೃದ್ಧಿ ಹೆಸರಿನಲ್ಲಿ ಕೈಗಾರೀಕರಣ, ಅದರಿಂದ ವಾತಾವರಣಕ್ಕೆ ವಿಷಾನಿಲ ಬಿಡುಗಡೆ, ನೀರು ಕಲುಷಿತಗೊಳಿಸುವುದು, ನೀರಿನ ಹರಿವು ನಿಯಂತ್ರಿಸುವುದು, ಇನ್ನೂ ಹತ್ತು ಹಲವು, ಲೆಕ್ಕವೇಯಿಲ್ಲ. ಇವುಗಳಲ್ಲಿ ನೀರಿನ ಹರಿವು ನಿಯಂತ್ರಣವೆಂದರೆ ಒಡ್ಡು, ಬದು, ಆಣೆಕಟ್ಟು ಕಟ್ಟುವುದು. ಮೇಲ್ನೋಟಕ್ಕೆ ಆಣೆಕಟ್ಟು ಬಹು ಉಪಯೋಗಿ ಎಂದು ಕಂಡರೂ, ಅದರ ಅಸ್ತಿತ್ವದ ಹಿಂದೆ ಪ್ರಕೃತಿಯ ಜೊತೆ ಹಲವು   ಸಮಸ್ಯೆಗಳಿವೆ. ಈ ವಿಚಾರವಾಗಿ ಆಣೆಕಟ್ಟಿನ ಲಾಭ ನಷ್ಟಗಳ ಲೆಕ್ಕಾಚಾರದ ಚರ್ಚೆ ಈಗ ಹೊಸದೇನಲ್ಲ. 

ಆಣೆಕಟ್ಟು ಆಧುನಿಕ ಜಗತ್ತಿನ ಕೊಡುಗೆಯೇನು ಅಲ್ಲ. ಜಾಗತಿಕ ಇತಿಹಾಸದ ಪುಟಗಳನ್ನು ನಾವು ಹುಡುಕಿದರೆ ಮೆಸೊಪಟ್ಯಾಮಿಯಾ ನಾಗರಿಕತೆಯಲ್ಲಿಯೇ ಮೊದಲ ಬಾರಿಗೆ ಹರಿಯುವ ನದಿಗೆ ಮಾನವನು ಕಟ್ಟೆ ಕಟ್ಟಿ, ನೀರಿನ ಹರಿವನ್ನು ನಿಯಂತ್ರಿಸಿದ ಎಂದು ತಿಳಿಯುತ್ತದೆ. ಇದು ಅಂದಾಜು ಕ್ರಿಸ್ತ ಪೂರ್ವ ೪ ನೇಯ ಶತಮಾನದ ಸುತ್ತ ಮುತ್ತ ಜೋರ್ಡಾನ್ ರಾಷ್ಟ್ರದಲ್ಲಿ ನಡೆದ ನಿರ್ಮಾಣ. ಅತೀ ಪುರಾತನ ಆಣೆಕಟ್ಟು ಅಥವಾ ಅಣೆಕಟ್ಟಿನ ಕುರುಹುಗಳು ಸಿಗುವುದು ಅಲ್ಲಿಯೇ, ಅದುವೇ  ಜಾವಾ ಅಣೆಕಟ್ಟು. ಆಗ ಆಣೆಕಟ್ಟಿನ ಉದ್ದೇಶವು ಕೇವಲ ಪ್ರವಾಹ ಪರಿಸ್ಥಿತಿಯ ನಿಯಂತ್ರಣ ಆಗಿತ್ತು. ಆದರೆ ಸಮಯ ಉರುಳಿದಂತೆ ಮನುಷ್ಯನ ಜ್ಞಾನ ವೃದ್ಧಿಸಿದಂತೆ, ಅವನ ಅವಶ್ಯಕತೆಗಳು ಬದಲಾದವು. ಅವನ ಬಯಕೆಗಳು ಹೆಚ್ಚಾದವು. ಆ ಅವಶ್ಯಕತೆ, ಬಯಕೆಗಳಿಗೋಸ್ಕರ ಕಾರ್ಯಸಾಧನೆ, ಕಾರ್ಯಸಿದ್ಧಿಗಳು ಬದಲಾಗುತ್ತಾ ಹೋದವು. ಕಾಲಾಂತರದಲ್ಲಿ ಬಂದ ವಿಜ್ಞಾನಿಗಳು ಹರಿಯುವ ನೀರಿನಲ್ಲಿ ಚಲನ ಶಕ್ತಿ ಇರುತ್ತದೆ, ಅದನ್ನು ನಾವು ಯಾಂತ್ರಿಕ ಬಲದ ರೂಪಕ್ಕೆ ಪರಿವರ್ತಿಸಬಹುದು ಎಂದು ಕಂಡು ಹಿಡಿದರು. ಈ ಯಾಂತ್ರಿಕ ಬಲವನ್ನು ವಿವಿದೊದ್ದೇಶಕ್ಕೆ ಬಳಸಬಹುದು, ಇದು ಮನುಕುಲವನ್ನು ಉದ್ಧಾರ ಮಾಡುತ್ತದೆ, ಎಂಬ ಯೋಚನೆ ಹೆಚ್ಚಾಯಿತು. ಇಂತಹ ಸಂಶೋಧನೆಗಳೇ ಚಿಕ್ಕ ಕಟ್ಟೆಗಳಿಂದ ಆಚೆ ಬಂದು ಬೃಹತ್ ಗಾತ್ರದ ಅಣೆಕಟ್ಟೆಗಳ ನಿರ್ಮಾಣಕ್ಕೆ ಪ್ರೇರಣೆ ಕೊಟ್ಟವು. ಆಗ ಆಣೆಕಟ್ಟಿನ ಎರಡೂ ಮಗ್ಗುಲುಗಳು ಅಂದರೆ ಆರ್ಥಿಕ ಲಾಭದ ಜೊತೆ ನೈಸರ್ಗಿಕ ನಷ್ಟದ ಬಗ್ಗೆ ಎಷ್ಟರಮಟ್ಟಿಗೆ ಯೋಚಿಸಿದರೋ ತಿಳಿಯದು, ಆದರೆ ಬೃಹತ್ ಆಣೆಕಟ್ಟುಗಳನ್ನು ಎಲ್ಲ ದೇಶಗಳು ನಿರ್ಮಿಸಲು ಪ್ರಾರಂಭಿಸಿದವು. ಅಷ್ಟೇ ಅಲ್ಲ ನೀರಿನ ಪ್ರಾಕೃತಿಕ ಅಸಮತೋಲನ ಸಮಸ್ಯೆ ನೀಗಿಸಲು ಹಲವು ತರಹದ ನೀರಾವರಿ ಯೋಜನೆಗಳೂ ಬಂದವು.

ನಮ್ಮ ಪೂರ್ವಜರು ಮಾಡಿದ್ದೆಲ್ಲ ಒಳ್ಳೆಯದೇ ಎಂದು ಸುಖಾ ಸುಮ್ಮನೆ  ಒಪ್ಪಿ ಅಪ್ಪಿಕೊಂಡರೆ, ಅದು ಅಪ್ಪ ನೆಟ್ಟ ಆಲದ ಮರಕ್ಕೆ ನಾವು ನೇಣು ಬಿಗಿದಂತೆ. ಕಾಲ ಕಳೆದಂತೆ ಪೂರ್ವಜರ ಕೆಲಸಗಳ ಜೊತೆ ನಮ್ಮ ಈಗಿನ ಪರಿಸ್ಥಿತಿಯನ್ನು ಅವಲೋಕಿಸಿ ನಾವು ಜಾಣ ಹೆಜ್ಜೆ ಇಡಬೇಕು.     

ಬಹಳ ಕಾಲದವರೆಗೆ ಅಂದರೆ ಇತ್ತೀಚಿನ ಕೆಲವು ವರ್ಷಗಳವರೆಗೂ ಆಣೆಕಟ್ಟುಗಳನ್ನು ಮಾನವನ ಜಾಣ್ಮೆ, ಹಿರಿಮೆ, ದಕ್ಷತೆಯ ಸಂಕೇತಗಳೆಂದೇ ಬಿಂಬಿಸಲಾಗಿತ್ತು. ಆದರೆ ಅನೇಕ ಕಾರಣಗಳಿಂದ ಪರಿಸರದ ಮೇಲೆ ಆಗುವ ಕೆಲವು ಪ್ರತಿಕೂಲ ಪರಿಣಾಮಗಳನ್ನು ಕಂಡ ಮೇಲೆ ಪರಿಸರ ಪ್ರೇಮಿಗಳು ಅಣೆಕಟ್ಟಿನ ಮತ್ತೊಂದು ಮಗ್ಗುಲಿನ ಬಗ್ಗೆ ಯೋಚಿಸತೊಡಗಿದರು. ಅವರು ಪರಿಸರದ ಬಗ್ಗೆ ಕಾಳಜಿ ತೋರಿಸುತ್ತಾ, ಒಂದು ಬೇರೆಯ ವಿಚಾರವನ್ನೇ ಮಂಡಿಸ ತೊಡಗಿದರು. 

೧೮೮೨ರಲ್ಲೇ ಅಮೆರಿಕಾದಲ್ಲಿ ಮೊದಲ ಜಲವಿದ್ಯುತ್ ಶಕ್ತಿಯ ಸ್ಥಾವರ ನಿರ್ಮಿಸಲಾಯಿತು. ಜಲವಿದ್ಯುತ್ ಶಕ್ತಿ ಉತ್ಪಾದನೆ ಒಂದು ನವೀಕರಿಸಬಹುದಾದ ಸಂಪನ್ಮೂಲದ ಬಳಕೆ ಎಂದು ಕೆಲವು ಜನ ವಾದಿಸುತ್ತಾರೆ. ಆದರೆ ಇಂತಹ ಯೋಜನೆಗಳಿಂದ ಆಗುವ  ಲಾಭಕ್ಕಿಂತ ಅದರಿಂದ ಸುತ್ತಲಿನ ಪರಿಸರದ ಮೇಲೆ ಆಗುವ ಅಡ್ಡ ಪರಿಣಾಮಗಳೇ ಹೆಚ್ಚು. ಈ ವಿಷಯದ ಕುರಿತು ಈಗ ಕೆಲವು ಜನರು ವಿಚಾರ, ಚರ್ಚೆ ಮಾಡುತ್ತಿದ್ದಾರೆ.

ಆಣೆಕಟ್ಟು ನಿರ್ಮಿಸಿದರೆ ಅಣೆಕಟ್ಟಿನ ಕೆಳಮಟ್ಟದಲ್ಲಿ ನೀರಿನ ಹರಿವು ಕಡಿಮೆಯಾಗಿ, ಆ ಪ್ರದೇಶದಲ್ಲಿ ಇರುವ  ಜೀವ ವೈವಿಧ್ಯತೆಗೆ ಧಕ್ಕೆಯಾಗುವುದು ಎಂಬ ವಾದ ಶುರುವಾಯಿತು. ಆಣೆಕಟ್ಟು ನಿರ್ಮಾಣ ಒಂದು ರೀತಿಯಿಂದ ನದಿಯ ವಿಘಟನೆಯ ಕೆಲಸ. ಈ ವಿಘಟನೆ ನದಿಯ ಪಾತ್ರದಲ್ಲಿರುವ ಪರಿಸರ ವ್ಯವಸ್ಥೆಯ ಅಂಗಗಳಾದ ಜನವಸತಿ ಅಲ್ಲದೇ ಪ್ರಾಣಿಸಂಕುಲಕ್ಕೂ ಆತಂಕಕಾರಿ. ಸರಳವಾಗಿ ಹರಿಯುವ ನದಿಗಳು ಸಾವಿರಾರು, ಲಕ್ಷಾಂತರ ಜನರಿಗೆ ಆಹಾರ ಒದಗಿಸುವುದಲ್ಲದೇ ಇನ್ನೂ ಹತ್ತಾರು ಉಪಯೋಗಗಳನ್ನು ಮಾಡಿಕೊಡುತ್ತಿತ್ತು. ಆದರೆ ಆಣೆಕಟ್ಟಿನಿಂದ ಅದೆಲ್ಲ ಏರುಪೇರಾಯಿತು. ಆಣೆಕಟ್ಟಿನ ಹಿನ್ನಿರಿನ ಪಾತ್ರದಲ್ಲಿ  ನದಿಯ ಎಡ ಮತ್ತು ಬಲಗಡೆ ಭಾಗಗಳಲ್ಲಿ ಕಾಲುವೆಗಳನ್ನು ನಿರ್ಮಿಸಿದರು. ಇದರಿಂದ ನೀರಾವರಿ ಪ್ರದೇಶ ಹೆಚ್ಚುಗೊಳಿಸಿದೆವು ಎಂಬುದು ವಾದ. ಈ ರೀತಿ ಮಾಡುವದರಿಂದ ಒಣ ಪ್ರದೇಶಗಳಲ್ಲಿ ಕೂಡ ನದಿಯ ಹರಿದಂತೆ ಅಲ್ಲವೇ? ಕಾಲುವೆ ಕೂಡ ಭಾಗಶಃ ನದಿಯ ಕೆಲಸವನ್ನೇ ಮಾಡುತ್ತವೆ ಅಲ್ಲವೇ? ಎಂದು ಕೇಳುವವರ ಒಂದು ಗುಂಪು ಇದೆ. ಆದರೆ ಮೂಲ ನದಿ ಹರಿಯುವ ದಿಕ್ಕನ್ನು ಬದಲಿಸಿ, ಅನೈಸರ್ಗಿಕವಾಗಿ ನೀರಿನ ಹರಿವನ್ನು ಬೇರೆಯದೇ ದಿಕ್ಕಿಗೆ ಹರಿಸಿದರೇ ಅದು ಮತ್ತೊಂದು ಸಮಸ್ಯೆಯನ್ನು ಬಿಡಿಸಿಡುತ್ತವೆ. ಇದರಿಂದ ರೈತರಿಗೆ ಬಲು ಲಾಭವಿದೆ ಎಂದು ತುಂಬಾ ಜನ ಅಂದುಕೊಂಡಿದ್ದಾರೆ. ಕಾಲುವೆಗಳ ಲಾಭ ಬಹುಶಃ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಅದರ ಅಡ್ಡ ಪರಿಣಾಮಗಳು ಗೌಣವಾಗಿವೆ.        

ಕಾಲುವೆಗಳ ಪರಿಣಾಮ
  • ಮಾನವನ ಹಸ್ತಕ್ಷೆಪವಿಲ್ಲದೇ ಇದ್ದರೇ ನೈಸರ್ಗಿಕವಾಗಿ ಹರಿಯುತ್ತಿದ್ದ ನೀರು ತನ್ನದೇ ಆದ ನೆಲ-ಜಲದ ಸಮತೋಲನ ಸಂಬಂಧ ಹೊಂದಿರುತ್ತದೆ. ಇದನ್ನು ಒಂದು ರೀತಿಯ ನೀರಿನ ಸ್ವಾಭಾವಿಕ ಸರಿಯಾದ ಹಂಚಿಕೆ ಅನ್ನಬಹುದು. ಆಣೆಕಟ್ಟು ಮತ್ತು ಕಾಲುವೆಗಳ ನಿರ್ಮಾಣದಿಂದ ನೀರಿನ ಪ್ರಾಕೃತಿಕ ಹಂಚಿಕೆ ಏರುಪೇರಾಗಿ ಕಾಲುವೆಯಿದ್ದ ಪ್ರದೇಶದಲ್ಲಿ ಅಧಿಕ ನೀರು ಮತ್ತು ನದಿಯ ತಳಮಟ್ಟದಲ್ಲಿ ನೀರಿನ ಅಭಾವವನ್ನು ಸೃಷ್ಟಿಸುತ್ತದೆ. ಇದರಿಂದ ಭೂಮಿಯ ಅಂರ್ತಜಲದ ಹರಿವು ಅದಲು ಬದಲಾಗಿ,  ಭೂಮೆಲ್ಪದರದಲ್ಲಿ ಲವಣಾಂಶ/ಕ್ಷಾರದ ಅಂಶ ಸರಿದೂಗದೆ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಈ ಪರಿಣಾಮ ಕಾಣಲು ಬಹಳ ವರ್ಷಗಳವರೆಗೆ ಕಾಯುವ ಅವಶ್ಯಕತೆಯೇನಿಲ್ಲ. ಬಲು ಬೇಗನೆ ಇದರ ನಷ್ಟಗಳು ಗೋಚರವಾಗುತ್ತವೆ. ಇಂತಹ ಪಕ್ಷದಲ್ಲಿ ಭೂಮಿಯು ಫಲವತ್ತತೆಯನ್ನು ಕಳೆದುಕೊಂಡರೆ, ಇಳುವರಿಯಿಲ್ಲದೆ ಕೃಷಿಗೆ ಪೆಟ್ಟು ಬೀಳಬಹುದು. ಇದು ಪ್ರತಿ ರೈತನ ವೈಯಕ್ತಿಕ ಜಮೀನಿಗೆ ಸಂಬಂಧಿಸಿದ ನಷ್ಟ. ಸರಳವಾಗಿ ಹೇಳಬೇಕೆಂದರೆ  ಕಾಲುವೆಗಳಿಂದ ಅವುಗಳ ಆಸುಪಾಸಿನ ಭೂಮಿಯು ಜವುಗುಗಟ್ಟಿ, ಅಪ್ರಯೋಜಕವಾಗಬಹುದು. ಇದು ರೈತರಿಗೆ ಇನ್ನೊಂದು ರೀತಿಯ ಆರ್ಥಿಕ ನಷ್ಟ ತಂದುಕೊಡಬಹುದು.
  • ನೀರು ಸದಾ ಹರಿಯುತ್ತ ಇರಬೇಕು, ಅದು ನೀರಿನ ಗುಣ. ಹರಿವ ನೀರು ತನ್ನಷ್ಟಕ್ಕೆ ತಾನೇ ಶುದ್ಧಿಕರಿಸಿಕೊಂಡು ಹರಿಯುತ್ತದೆ. ಆದರೆ ಆಣೆಕಟ್ಟು ಮತ್ತು ಕಾಲುವೆಗಳಲ್ಲಿ ನೀರನ್ನು ತಡೆಹಿಡಿದರೇ, ಅಲ್ಲಿ ನೀರಿನಿಂದ ಕ್ರಿಮಿ, ಜಲಕೀಟ, ಸೊಳ್ಳೆಗಳ ಬಾಧೆ ಅಧಿಕವಾಗುತ್ತದೆ. ಇದು ಸುತ್ತಮುತ್ತಲಿನ ಜಾಗಗಳಲ್ಲಿ ಹಲವು ಬಗೆಯ ರೋಗಗಳ ಬೆಳವಣಿಗೆಗೆ ತಳಹದಿಯಾಗಬಹುದು.
  • ಅಣೆಕಟ್ಟೆಯ ಹಿಂದಿನ ಮತ್ತು ಕಾಲುವೆಗಳ ಹತ್ತಿರ ಹೇರಳ ನೀರಿನ ಲಭ್ಯತೆಯಿರುವದರಿಂದ ರೈತರು ಅಧಿಕ ಲಾಭದ ಬೆಳೆ ಮತ್ತು ಹೆಚ್ಚು ಇಳುವರಿಯ ಆಸೆಗೆ ಬಲಿಯಾಗುತ್ತಾರೆ. ಇದು ಸ್ಥಳೀಯ ಬೆಳೆಗಳನ್ನು ನಿರ್ಲಕ್ಷಿಸುವ ಮೊದಲ ಹೆಜ್ಜೆ.  ಇಂತಹ ಬೆಳೆಗಳಿಂದ ಮತ್ತೊಂದು ಪ್ರಾಕೃತಿಕ ಆಹಾರದ ಅಸಮತೊಲನ ತಲೆದೋರಬಹುದು. ಆದಾಗಲೇ ನಾವು ನೋಡುತ್ತಿದ್ದಂತೆ ಕಡಿಮೆ ಮಳೆ ಅಥವಾ ಬರಗಾಲದ ಬೆಳೆಗಳಾದ ಸಿರಿಧಾನ್ಯಗಳ ಅಭಾವ. ನಮ್ಮ ಹಿಂದಿನ ಜನಾಂಗ ಎಷ್ಟು ಸಿರಿಧಾನ್ಯಗಳನ್ನು ಬೆಳೆದು ಬಳಸುತ್ತಿದ್ದರು, ಅಷ್ಟು ಪ್ರಮಾಣದಲ್ಲಿ ನಾವು ಈಗ ಬೆಲೆಯುತ್ತಿಲ್ಲ. ಇದು ಮಾನವನ ಆರೋಗ್ಯದ ಮೇಲೆಬೀರುವ ಪರಿಣಾಮ.  ಇದು ಒಂದು ಚಿಕ್ಕ ಉದಾಹರಣೆ.
  • ಕಾಲುವೆಗಳು ಮಾನವ ನಿರ್ಮಿತವಾದ್ದರಿಂದ, ಅಲ್ಲಿ ಮಾನವನ ನಿರ್ವಹಣೆ ಅವಶ್ಯಕ, ಒಂದು ವೇಳೆ ಕಾಲುವೆಗಳ ನಿರ್ವಹಣೆ ಸರಿಯಾಗಿ ಆಗದಿದ್ದರೆ, ಅವುಗಳಲ್ಲಿ ಕೆಸರು/ಹೂಳು ತುಂಬಿಕೊಳ್ಳುವ ಸಾಧ್ಯತೆ ಹೆಚ್ಚು. ಇದು ಕಾಲುವೆಗಳ ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಆಗ ಅಂದುಕೊಂಡಷ್ಟು ನೀರಿನ ಹಂಚಿಕೆ ಆಗದೇಯಿರಬಹುದು.
  • ರೈತರು ಹಲವು ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬಂದ  ಸಾಗುವಳಿಯಿದ್ದ ಭೂಭಾಗವನ್ನು ಕಾಲುವೆಗಳು ಕಬಳಿಸುತ್ತವೆ. ಇದನ್ನು ತಾತ್ಕಾಲಿಕ ಸಮಸ್ಯೆಯೆಂದು ಕದೆಗಾಣಿಸಲಿಕ್ಕೆ ಆಗಲ್ಲ.
  • ಆಣೆಕಟ್ಟಿನಲ್ಲಿ ಸಾಕಷ್ಟು ನೀರಿನ ಒಳಹರಿವು ಇದ್ದಾಗ ಮಾತ್ರ ಕಾಲುವೆಗಳಲ್ಲಿ ನೀರು ಬಿಡಲಾಗುವುದು, ಇದು ಮಳೆ ಆಧಾರಿತ. ಆದ್ದರಿಂದ ಇದು ಅನಿಶ್ಚಿತತೆಗೆ ಎಡೆ ಮಾಡಿಕೊಡುತ್ತದೆ. ಮಳೆ ಚೆನ್ನಾಗಿ ಆದರೆ ಕಾಲುವೆಗಳಲ್ಲಿ ನೀರು. ರೈತರು ಯಾವಾಗಲೂ ಕಾಲುವೆ ಮೇಲೆ ಅವಲಂಭಿಸಿ ಇರಲಾಗದು. ಹಾಗಾದರೆ ಎಲ್ಲ ಕಡೆಗೂ ಮಳೆ ಹೆಚ್ಚು ಆಗಲು ಏನು ಮಾಡಬೇಕು? ಕಾಡು ಬೆಳೆಸಬೇಕು, ಅದು ಬೇರೆಯ ಚರ್ಚೆ.
ಕಾಲುವೆಗಳ ನಿರ್ಮಾಣದಿಂದ ತಾತ್ಕಾಲಿಕ ಲಾಭ ಕಂಡರೂ, ದೀರ್ಘಕಾಲದಲ್ಲಿ ಅವುಗಳ ನಷ್ಟಗಳೇ ಹೆಚ್ಚು.

ಚಿಕ್ಕ ಚೆಕ್ ಡ್ಯಾಮ್, ಬದುಗಳು, ನಾಲಬಂದುಗಳಿಂದ ಅಷ್ಟೇನೂ ಹಾನಿಯಾಗದು. ಆದರೆ ದೊಡ್ಡ ಆಣೆಕಟ್ಟುಗಳ ಬಗ್ಗೆ ನೋಡುವುದಾದರೆ, ಅದರ ಅಡ್ಡ ಪರಿಣಾಮಗಳು ಹೆಚ್ಚು ಮತ್ತು ಅವು ಕಾಲುವೆಗಳ ಸಮಸ್ಯೆಗಿಂತ ಸ್ವಲ್ಪ ಭಿನ್ನ. ಆಣೆಕಟ್ಟು ನಿರ್ಮಾಣದಿಂದ ಪ್ರಕೃತಿಯ ಮೇಲೆ  ಹಲವು ಅಡ್ಡ ಅಥವಾ ದುಷ್ಪರಿಣಾಮಗಳು ಇವೆ. 
ಅಣೆಕಟ್ಟಿನ ಹಿಂದಿನ ಭಾಗದಲ್ಲಿ ತಡೆಹಿಡಿದ ನೀರಿನಿಂದ ಅನೇಕೆ ಪ್ರದೇಶಗಳು ನೀರಿಗೆ ಆಪೋಶನವಾಗುತ್ತವೆ. ಈ ಹಿನ್ನೀರಿನಲ್ಲಿ  ಸಸ್ಯಕುಲ ಮುಳುಗಿ ನಾಶವಾಗುವವು. ನೀರಿನಲ್ಲಿರುವ ಬ್ಯಾಕ್ಟೆರಿಯಾಗಳು ಇಂತಹ ಸತ್ತು ಕೊಳೆತ ಸಸ್ಯರಾಶಿಯ ಜೊತೆ ರಾಸಾಯನಿಕ ಕ್ರಿಯೆ ಹೊಂದಿ ಹಸಿರುಮನೆ ಅನಿಲ(Green House Gas)ಗಳಾದ ಇಂಗಾಲದ ಡೈಆಕ್ಸೈಡ್ ಮತ್ತು ಮಿಥೆನ್ ಗಳನ್ನು ತಯಾರಿಸುತ್ತವೆ. ಈ ಅನಿಲಗಳು ಇಂಗಾಲದ ಡೈಆಕ್ಸೈಡ್ ಮತ್ತು ಇತರ ಗುಳ್ಳೆಗಳಾಗಿ ಆಣೆಕಟ್ಟಿನ ತಡೆಹಿಡಿದ ನೀರನ ಮೇಲೆ ಬಂದು ವಾತಾವರಣಕ್ಕೆ ಸೇರಿಕೊಳ್ಳುತ್ತವೆ. ಅಷ್ಟೇ ಅಲ್ಲದೇ ವ್ಯವಸಾಯದ ಜಮೀನಿನಲ್ಲಿ ಬಳಸಿದ ರಾಸಾಯನಿಕ ಗೊಬ್ಬರಗಳಲ್ಲಿರುವ ಸಾರಜನಕ ಅಥವಾ ರಂಜಕ (Nitrogen or Phosporus) ಮಳೆ ನೀರಿನಿಂದ ಹರಿದು ಬಂದು ಆಣೆಕಟ್ಟೆಗೆ ಸೇರಿಕೊಳ್ಳುತ್ತವೆ. ಈ ಅನಿಲಗಳು ಕೂಡ ಮೇಲೆ ಹೇಳಿದ ರೀತಿಯಲ್ಲಿ ಮತ್ತಷ್ಟು ವಿಷಾನಿಲ ವಾತಾವರಣಕ್ಕೆ ಸೇರುವ ಹಾಗೆ ಮಾಡುತ್ತವೆ. ಇದೆಲ್ಲ ಸೇರಿ ಜಾಗತಿಕ ತಾಪಮಾನ (Global Warming) ಏರಿಕೆಗೆ ಕೊಡುಗೆ ನೀಡುತ್ತವೆ. ಇದು ನಿಧಾನವಾಗಿ ಆದರೂ ನಿರಂತರವಾಗಿ ನಡೆಯುವ ಪ್ರಕ್ರಿಯೆ.  

ಜಲಚರಗಳ ಮೇಲೆ ಪರಿಣಾಮ - ಅಣೆಕಟ್ಟುಗಳ ನಿರ್ಮಾಣದಿಂದ ಜಲಚರಗಳ ಮೇಲೆ ಅಧಿಕ ದುಷ್ಪರಿಣಾಮ ಬೀರುತ್ತದೆ. ಹರಿವ ನೀರಿನಲ್ಲಿ ಇರುವ ಪ್ರಾಣಿಗಳ ಗುಣಧರ್ಮ ಆಣೆಕಟ್ಟಿನಿಂದ ಬದಲಾಗುತ್ತದೆ. ನಿಂತ ನೀರಿನಲ್ಲಿ ಅವು ಅಭಿವೃದ್ಧಿಹೊಂದದೆ ಇರಬಹುದು, ಅಷ್ಟೇ ಏಕೆ, ಕೆಲವು ಸಂತತಿಗಳು ನಶಿಸಿ ಕೂಡ ಹೋಗಬಹುದು. ಆಣೆಕಟ್ಟಿನ ಹಿಂಭಾಗ ಸಹಜವಾಗಿ ಹೂಳು ತುಂಬುತ್ತದೆ. ಇದು ಯಾರ ಕಣ್ಣಿಗೂ ಕಾಣದೆಯಿರುವದರಿಂದ ಯಾರೂ ಹೂಳು ಎತ್ತುವ ಕೆಲಸಕ್ಕೆ ಕೈಹಾಕುವುದಿಲ್ಲ. ಅಲ್ಲದೇ ಇದು ಸ್ವಲ್ಪ ಕಷ್ಟದ ಕೆಲಸ.  ಹರಿವ ನೀರಿನಲ್ಲಿ ಸ್ವಚ್ಚಂದವಾಗಿ ಇದ್ದ ಜಲಚರಗಳು ಹೂಳು ತುಂಬಿದ ನೀರಿನಲ್ಲಿ ಸ್ವಚ್ಚಂದವಾಗಿ ವಿಹರಿಸಿ ಜೀವಿಸಲಾರವು. ಇದು ಜೀವವೈವಿಧ್ಯತೆಗೆ ಧಕ್ಕೆ ತರುತ್ತದೆ. ಉದಾಹರಣೆಗೆ ಹರಿವ ನದಿ ನೀರಿನಲ್ಲಿ ವಲಸೆ ಹೋಗುವ ಮೀನುಗಳು, ಸಾಮಾನ್ಯವಾಗಿ ತಾವು ಇರುವ ಜಾಗದಿಂದ ಮತ್ತೊಂದು ಕಡೆ ವಲಸೆ ಹೋಗಿ ಸಂತಾನೋತ್ಪತ್ತಿ ಮಾಡುತ್ತಿರುತ್ತವೆ. ಆದರೆ ತಡೆಹಿಡಿದ ನೀರಿನಿಂದ ಈ ಮೀನುಗಳಿಗೆ ವಲಸೆಹೋಗಲು ಅವಕಾಶಯಿರುವುದಿಲ್ಲ. ಆಗ ಅವುಗಳ ಸಂತಾನ ಅಭಿವೃದ್ಧಿ ಹೊಂದದೆಯಿರಬಹುದು. ಸಂತಾನ ಉತ್ಪತ್ತಿಯಿಲ್ಲದಿದ್ದರೆ ಕಾಲಾಂತರದಲ್ಲಿ ಇಂತಹ ತಳಿಗಳು ನಶಿಸಿಹೋಗಬಹುದು.   

ನದಿಪಾತ್ರಗಳ ಮೇಲೆ ಪರಿಣಾಮ - ನದಿಗಳು ಎತ್ತರ ಪ್ರದೇಶದಿಂದ ತಗ್ಗು ಪ್ರದೇಶಗಳಿಗೆ ಹರಿಯುವಾಗ ಫಲವತ್ತಾದ ಮಣ್ಣನ್ನು ಹೊತ್ತುತರುತ್ತವೆ. ಒಂದು ವೇಳೆ ಅವುಗಳಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿದರೆ ಈ ರೀತಿ ಬರುವ ಮಣ್ಣು ತಡೆಹಿಡಿದು ತಗ್ಗು ಪ್ರದೇಶ ತಲುಪದಂತೆ ಮಾಡಿದಂತಾಗುತ್ತದೆ. ಇದು ಮುಂದೆಯಿರುವ ತಗ್ಗು ಪ್ರದೇಶಗಳಿಗೆ ಫಲವತ್ತಾದ ಮಣ್ಣು ಬರದಂತೆ ತಡೆಯುತ್ತದೆ.ಸಾಕಷ್ಟು ಪ್ರಮಾಣದ  ಮಣ್ಣು ಆಣೆಕಟ್ಟಿನಿಂದ ಈಗ ವ್ಯರ್ಥವಾಗಿ ಹೂಳಾಗಿ ಹೋಗುವುದು.  

ಅಷ್ಟೇ ಅಲ್ಲ ನೀರಿನ ಪ್ರಾಕೃತಿಕ ಅಸಮತೋಲನ ಸಮಸ್ಯೆ ನೀಗಿಸಲು ಹಲವು ತರಹದ ನೀರಾವರಿ ಯೋಜನೆಗಳು ಬಂದವು. (ಇದು ಪ್ರಾಕೃತಿಕ ನೀರಿನ ಅಸಮತೊಲನವೋ ಅಥವಾ ಪ್ರಕೃತಿಯ ನಿಯಮವೋ ಬೇರೆಯದೇ ಚರ್ಚೆ.) ತದನಂತರ ಕೈಗಾರಿಕಾ ಕ್ರಾಂತಿಯಲ್ಲಿ, ನೀರಾವರಿ ಅಥವಾ ದೊಡ್ಡ ಆಣೆಕಟ್ಟುಗಳ ಯೋಜನೆಗಳು ಇನ್ನಷ್ಟು ಮುಂಚೂಣಿಗೆ ಬಂದವು.

ಕಟ್ಟೆ ಒಡೆಯುವಿಕೆ

ಮುಂದುವರೆದ ದೇಶಗಳೆಂದು ಯಾವವುಗಳನ್ನು ನಾವು ಕಣ್ಣು ಮುಚ್ಚಿ ಹಿಂಬಾಲಿಸುತ್ತೇವೋ ಆ ದೇಶಗಳು ಈಗ ಆಣೆಕಟ್ಟಿನ ಬಗ್ಗೆ ಏನು ಅಭಿಪ್ರಾಯ ಹೊಂದಿವೆ ಎಂದು ನೋಡೋಣ ಬನ್ನಿ. 

ಎಲ್ಲಾ ಅಣೆಕಟ್ಟುಗಳು ಜಲ ಪರಿಸರವನ್ನು ಹದಗೆಡಿಸುತ್ತವೆ, ಆದರೆ ಆ ಕೆಟ್ಟ ಪರಿಣಾಮಗಳನ್ನು ಜಲ ವಿದ್ಯುತ್ ಸ್ಥಾವರ ನಿರ್ಮಾಣ, ನೀರಾವರಿ ಪ್ರದೇಶ ಹೆಚ್ಚಿಸುವಿಕೆ, ಪ್ರವಾಹ ನಿಯಂತ್ರಣ ಎಂಬ ನಾನಾ ಸೋಗಿನಡಿಯಲ್ಲಿ ಮುಚ್ಚಿಹಾಕಲಾಗುತ್ತದೆ. ಕೆಲವು ದೇಶಗಳು ಪರಿಸರದ ಮೇಲೆ ಆಗುವ ನಿಜವಾದ ಪರಿಣಾಮಗಳನ್ನು ಅರಿತಾಗ ತಾವೇ ಕಟ್ಟಿದ ಅಣೆಕಟ್ಟುಗಳನ್ನು ಸ್ವತಃ ತಾವೇ ಒಡೆಯಲು ಮುಂದಾದರು.

ಎಲ್ವಾ
ಅಮೆರಿಕೆಯ ಎಲ್ವಾ ನದಿಯಲ್ಲಿ  ಆದ ಅಸಮತೋಲನ ಮನಗಂಡು


ಕಾವೇರಿ
ಅಷ್ಟೆಲ್ಲಾ ದೂರ ಏಕೆ? ಇಲ್ಲೇ ನಮ್ಮ ಪಕ್ಕದ ತಮಿಳುನಾಡು ಕೂಡ ಇಂತಹ  ಸಮಸ್ಯೆಯಿಂದ ಹೊರತಾಗಿಲ್ಲ . 
ತಮಿಳು ನಾಡಿನ ತಮಿರಬರನಿ  ನದಿಯಲ್ಲಿ ಲವಣಯುಕ್ತ ನೀರು ಪ್ರವೇಶವಾಗಿದೆ.

~ ಮುಂದುವರೆಯುವುದು (ಇನ್ನೂ ತುಂಬಾ  ಹೇಳಲಿಕ್ಕೆ ಇದೆ, ಮುಂದೆ ಬರೆಯುವೆ)

Friday, October 4, 2019

ಚೆಲುವು ಬಾಗಿತು

ಸೂರ್ಯಕಾಂತಿ ಹೂವು ಚೆಲುವಾಗಿ ಅರಳಿ ನಿಂತಿದ್ದಳು. ಎಲ್ಲರ ಕಣ್ಮನ ಸೆಳೆಯುತ್ತಿದ್ದಳು. ತನ್ನ ಅಂದಕ್ಕೆ ತಾನೇ ಬೀಗುತ್ತಾ ದಿನಾಲೂ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ತಲೆಯೆತ್ತಿ ಮೆರೆಯುತ್ತಿದ್ದಳು. ತಲೆಯಲ್ಲಿ ಏನೂ ಇಲ್ಲದಿದ್ದರೂ ಅಂದವೊಂದೇ ನನ್ನ ಆಸ್ತಿ, ಅಷ್ಟೇ ಸಾಕು ಮಿಕ್ಕಿದ್ದೆಲ್ಲ ಮಿಥ್ಯ, ಎಲ್ಲರೂ ನನ್ನ ನೋಡಿ ನಾಚಬೇಕು ಎಂದು ನುಲಿಯುತ್ತಿದ್ದಳು. ವೈಯಾರದ ಅವಳ ನಡುವಳಿಕೆ ದಿನೇ ದಿನೇ  ಹೆಚ್ಚುತ್ತಲೇ ಇತ್ತು. ಎಲ್ಲರನ್ನೂ ಮೋಹಿಸುತ್ತಿದ್ದಳು. ಬೆಳಿತಾ ಬೆಳಿತಾ ಅವಳು ಎತ್ತರ ಎತ್ತರವಾಗುತ್ತಾ ಹೋದಳು. ಅವಳು ಸದಾ ಸೂರ್ಯ ದೇವನನ್ನು ಏಕಚಿತ್ತದಿಂದ ಬಿಟ್ಟ ಕಣ್ಣಿನಿಂದ ನೋಡುತ್ತಲೇ ಇರುವುದನ್ನು ಕಂಡ ಜನ, ವಿಸ್ಮಯಗೊಂಡಿದ್ದರು. 'ಬೇರೆ ಹೂವುಗಳಲ್ಲಿ ಇಲ್ಲದ ಛಲ, ಇವಳಲ್ಲಿ ಹೇಗಿದೆ' ಎಂದು ಬೆರಗಾಗಿದ್ದರು. ಇವಳು ನೆಟ್ಟ ನೋಟ ಬಿಡದೇ ಸೂರ್ಯನನ್ನು ನೋಡುವುದನ್ನು ಗಮನಿಸಿದವರು, ಇವಳು ಸೂರ್ಯನನ್ನೇ ಹಿಂಬಾಲಿಸುತ್ತಿದ್ದಾಳೆ ಎಂದು ಊಹಿಸಿದ್ದರು. ಅವಳೋ ಸೂರ್ಯನ್ನೇನು ನೋಡುತ್ತೀರಿ, ನನ್ನ ನೋಡಿ ಎಂದು ಕೊಚ್ಚಿಕೊಲ್ಲುತ್ತಿದ್ದಳು. ಆದರೆ ಸೂರ್ಯ ದಿನಾಲೂ ಮೇಲಿನಿಂದ ಇವಳನ್ನು ನೋಡಿ ನಿರಾತಂಕದಿಂದ ಸುಮ್ಮನೆ ಮುಗುಳ್ನಗುತ್ತಿದ್ದ. ಅವನಿಗೆ ತನ್ನ ಶಕ್ತಿ ಪರಾಕ್ರಮದ ಅರಿವಿದ್ದರೂ ಜಂಭವಿರಲಿಲ್ಲ. ಯಾಕೆಂದರೆ  ಅವನ ಹಿರಿತನಕ್ಕೆ ಅವನಿಗೆ ಜ್ಞಾನ ಕೂಡ ಹಿರಿದಾಗಿತ್ತು. ತನ್ನ ಇತಿಮಿತಿಗಳನ್ನು ಅವನು ಅರಿತಿದ್ದ.  ಅವನಿಗೆ ಮಹತ್ತಾದ ಮೇಘರಾಜನ ಆಟಗಳು ಗೊತ್ತಿದ್ದವು. ನನ್ನ ಕಿರಣಗಳನ್ನು ಅಡ್ಡಗಟ್ಟಿ ನನ್ನನ್ನೇ ಮಂಕುಕವಿಯುವಂತೆ ಮೇಘ ಮಾಡುತ್ತಾನೆ ಅಂತ ತಿಳಿದಿದ್ದ. ಇನ್ನು ಚಂದ್ರ, ತನ್ನಿಂದಾನೇ ಬೆಳಕು ಪಡೆದು ತನಗೆಯೇ ತಿರುಗಿ ಗ್ರಹಣ ಹಿಡಿಸಿ ವಸುಂಧರೆಯ ನೋಡದಂತೆ ಮಾಡುತ್ತಾನೆ ಎಂದು ಅರಿತಿದ್ದ. ಜಗಕ್ಕೆ ಶಕ್ತಿ ಕೊಡುವ ನನಗೆಯೇ ಕೆಲವರು ಅಡ್ಡಗಾಲು ಹಾಕುವಾಗ ನಾನು ನನ್ನ ಮಿತಿಯಲ್ಲಿ ಇರಬೇಕು ಎಂದು ಕಲಿತಿದ್ದ. ವಿನಮ್ರದಿಂದ ಸದಾ ತನ್ನ ಕೆಲಸ ತಾನು ಮಾಡುತ್ತಿದ್ದ.

ಅಂದಗಾತಿ ಸೂರ್ಯಕಾಂತಿ ಹೂವು ಇನ್ನೂ ಎಳಸು, ಜಗದ ನಿಯಮ ತಿಳಿದಿಲ್ಲ, ಜ್ಞಾನದ ಬಲ ಗೊತ್ತಿಲ್ಲ. ಅದಕ್ಕೆ ಗುರುವಿನ ರೂಪದಲ್ಲಿ ಯಾರೂ ಬಂದು ಇನ್ನು ಜ್ಞಾನ ಮೊಳೆಯುವಂತೆ ಮಾಡಿರಲಿಲ್ಲ. ಆದರೆ ಎಲ್ಲಾ ವಿಧಿ ಲಿಖಿತವೆಂಬಂತೆ ಭ್ರಮರ ಗುರುವಾಗಿ ಹೂವಿನ ಹತ್ತಿರ ಬಂದ. ಭ್ರಮರನು ನಿರ್ಲಿಪ್ತ ಗುಣದ ಅಲೆಮಾರಿ. ಯಾರು ತನ್ನ ಗಾನ ಕೆಳತ್ತಾರೋ ಇಲ್ಲವೋ ಎಂದು ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೇ ಸದಾ ತನ್ನ ನಾದದಲ್ಲಿ ಗುನುಗುತ್ತ ಅಲೆಯುತ್ತಿದ್ದ. ಯಾರ ಪರಿವೆಯೇ ಇಲ್ಲದೆ ಸದಾ ನಿಶ್ಚಿಂತೆಯಿಂದ ತನ್ನಿಷ್ಟದಂತೆ ಹಾರಾಡುತ್ತಿದ್ದ. ಅವನಿಗೆ ಅಂದವಿಲ್ಲ ಆದರೂ, ಜ್ಞಾನ ಮೊಳೆಸುವಂಥ ಕಲೆಯಿದೆ. ಈಗ ಅವನಿಗೆ ತನ್ನ ಧರ್ಮಾಧಾರಿತ ಕೆಲಸದ ಸಮಯ ಬಂದಿತ್ತು. ಗುರುವಾಗಿ ಹೂವಿನ ತಲೆಯ ಮೇಲೆಯೇ ಕುಳಿತು ಪಾಠ ಹೇಳಿಕೊಡಬೇಕಾಗಿತ್ತು. ಅಂದಕ್ಕೆ ಬೆಲೆ ಅಲ್ಪ ಆದರೆ ಶಕ್ತಿಗೆ, ಯುಕ್ತಿಗೆ ಬಲವುಂಟು, ದೀರ್ಘ ಬಾಳಿಕೆಯುಂಟು ಎಂದು ಜ್ಞಾನದ ಬೀಜ ಸೂರ್ಯಕಾಂತಿಯಲ್ಲಿ ಮೂಡುವಂತೆ ಮಾಡಿದ. ಅದೇ ಸಮಯಕ್ಕೆ ಸೂರ್ಯನೂ ಸೂರ್ಯಕಾಂತಿ ಹೂವಿನಲ್ಲಿರುವ ಬೀಜಗಳನ್ನು ಬಲವಾಗುವಂತೆ ಮಾಡಿದ. ಕೀಟಗಳು ಬಾಧಿಸದಂತೆ ತಡೆದು ಹದವಾದ ವಾತಾವರಣ ನಿರ್ಮಿಸಿದ. ಹೂವು ಕೂಡ ಚಿತ್ತಾರವಾಗಿ ಚೊಕ್ಕಟ್ಟಾಗಿ ಬೀಜಗಳನ್ನು ಜೋಡಿಸಿಕೊಳ್ಳುತ್ತ ಅಂದದ ಕಡೆಗೆ ಕಡಿಮೆ ಗಮನ  ಹರಿಸಿದಳು. ಬೀಜಗಳು ಗಟ್ಟಿಯಾದಂತೆ ಹೂವು ಮಾಗಿತು. ಈಗ ಪ್ರೌಢಳಾಗಿ ಸೂರ್ಯನನ್ನು ದಿಟ್ಟಿಸದೇ ನಮಿಸುವಂತೆ  ತಲೆ ತಗ್ಗಿಸಿದಳು. ಮುಂಚೆ ಪಟ್ಟ ಜಂಭಕ್ಕೆ ತಾನೇ ನಾಚಿ ತಲೆ ಬಗ್ಗಿಸಿದಳು. ರೈತನು ಅವಳು ಬಿಟ್ಞ ಜ್ಞಾನದ ಬೀಜಕ್ಕೆ ನಮಿಸಿ, ಪೂಜಿಸಿ ಬೆಲೆಕೊಟ್ಟ.

Monday, July 15, 2019

ಕರ್ಮ ಮತ್ತು ಫಲ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ, ಅವನು ಬ್ರಾಹ್ಮಣರಿಗೆ ಅನ್ನದಾನ ಮಾಡುತ್ತಿದ್ದ. ಹೀಗೆಯೇ ಒಮ್ಮೆ ಸ್ವತಃ ತಾನೇ ನಿಂತು ಅನ್ನದಾನ ಮಾಡುವಾಗ, ಆಕಾಶದಲ್ಲಿ ಒಂದು ಹದ್ದು ತನ್ನ ಕಾಲಲ್ಲಿ ಸತ್ತ ವಿಷಸರ್ಪವನ್ನು ಹಿಡಿದು ಕೊಂಡು ಹಾರಿಕೊಂಡು ಹೋಗುತ್ತಿತ್ತು. ಆ ಘಳಿಗೆಯಲ್ಲಿ ಸರ್ಪದ ಬಾಯಿಯಿಂದ ಒಂದು ತೊಟ್ಟು ವಿಷ ವಸರಿತು, ಅದು ನೇರವಾಗಿ ರಾಜನು ನೀಡುತ್ತಿದ್ದ ಅನ್ನದಲ್ಲಿ ಬಿದ್ದಿತು. ಎಲ್ಲರ ನೋಟ ರಾಜ ಮತ್ತು ಊಟದ ಕಡೆಗೆ ಇದ್ದುದರಿಂದ ಇದನ್ನು ಯಾರೂ ಗಮನಿಸಲಿಲ್ಲ. 
ರಾಜ ಊಟ ಬಡಿಸುವುದನ್ನು ಹಾಗೆಯೇ ಮುಂದುವರಿಸಿದ. ಯಾವ ಬ್ರಾಹ್ಮಣನ ತಟ್ಟೆಯಲ್ಲಿ ಆ ಹಾವಿನ ವಿಷದ ಅನ್ನ ಬಂದಿತ್ತೋ, ಅವನು ವಿಷಪ್ರಾಶನದಿಂದ ತೀರಿಕೊಂಡ.  ರಾಜನಿಗೆ ಈ ವಿಷಯ ತಿಳಿದು ತುಂಬಾ
ಖೇದವಾಯಿತು. ಅವನ  ಮನಸ್ಸು ತುಂಬಾ ನೋಯಿತು. 

ಪಾಪ -ಪುಣ್ಯ, ಕರ್ಮಗಳ ಲೆಕ್ಕಯಿಡುವ ಯಮಲೋಕದ ಚಿತ್ರಗುಪ್ತನಿಗೆ ಈಗ ದಿಗಿಲು ಹಿಡಿಯಿತು. ಇಲ್ಲಿ ಘಟಿಸಿದ ಪಾಪ ಕರ್ಮದ ಫಲವು ಯಾರಿಗೆ ಸೇರಿದ್ದು ಅನ್ನುವದು ಅವನಿಗೆ ಗೊತ್ತಾಗಲಿಲ್ಲ. ಯಾಕೆಂದರೆ,  ರಾಜ ಗೊತ್ತಾಗದೆ ವಿಷದ ಅನ್ನವನ್ನು ಬಡಿಸಿದ್ದ. ಹಾವಂತೂ ಸತ್ತು ಹೋಗಿತ್ತು, ಅದೂ ಕೂಡ ಬೇಕು ಬೇಕಂತಲೇ ವಿಷವನ್ನು ಕಾರಲಿಲ್ಲ. ಇನ್ನು ಹದ್ದು ತನ್ನ ಆಹಾರವನ್ನು ಎತ್ತಿಕೊಂಡು ಹಾರುತ್ತ ತನ್ನ ನಿತ್ಯದ ಕೆಲಸದಲ್ಲಿ ತೊಡಗಿತ್ತು, ಅದಕ್ಕೂ ಕೂಡ ಪಾಪದ ಹೊರೆಹೊರಿಸಲಾಗದು. ತನ್ನ ತೊಂದರೆಯನ್ನು ಹೇಳಿಕೊಳ್ಳಲು ಅವನು ಯಮರಾಜನ ಹತ್ತಿರ ಹೋದ. ಯಮರಾಜನು ಚಿತ್ರಗುಪ್ತನಿಗೆ "ಸ್ವಲ್ಪ ಸಮಯ ಕಾಯಿರಿ, ಯಾವುದಾದರೂ ಒಂದು ಪರಿಹಾರ ಸಿಕ್ಕೇ ಸಿಗುತ್ತದೆ."  ಎಂದು ಸಮಾಧಾನ ಹೇಳಿದ.
ಸ್ವಲ್ಪ ದಿನಗಳ ನಂತರ ಬೇರೆ ಊರಿನ ಕೆಲವು ಬ್ರಾಹ್ಮಣರು ಈ ಊರಿಗೆ ರಾಜನ ಭೆಟ್ಟಿಯಾಗಲು ಬಂದರು. ದಾರಿಯಲ್ಲಿ ಒಬ್ಬ ಮಹಿಳೆ ಮಡಕೆಗಳನ್ನು ಮಾರುತ್ತ ಕುಳಿತ್ತಿದ್ದಳು. ಅವಳ ಬಳಿಗೆ ಬಂದು ಬ್ರಾಹ್ಮಣರು ಕೇಳಿದರು, "ರಾಜರ ಅರಮನೆಗೆ ದಾರಿ ಯಾವುದು? ನಾವು ಅವರನ್ನು ಹೇಗೆ ಭೆಟ್ಟಿಯಾಗ ಬಹುದು?"
"ಹೀಗೆ ಹೋಗಿ" ಎಂದು ಕೈ ಚಾಚಿ ಅವಳು ದಾರಿ ತೋರಿಸಿ ಬ್ರಾಹ್ಮಣರಿಗೆ ಹೇಳಿದಳು "ಆದರೆ ಎಚ್ಚರದಿಂದಿರಿ, ರಾಜ ಬ್ರಾಹ್ಮಣರನ್ನು ಕೊಲ್ಲಿಸುತ್ತಾನೆ".
ಯಾವಾಗ ಆ ಮಹಿಳೆ ತಪ್ಪಾಗಿ ರಾಜನನ್ನು ನಿಂದಿಸಿದಳೋ ಆ ಘಳಿಗೆಯಲ್ಲಿ ಚಿತ್ರಗುಪ್ತನಿಗೆ ಯಮರಾಜ ಹೇಳಿದ, "ಆ ಪಾಪದ ಫಲವನ್ನು ಈ ಮಹಿಳೆಗೆ ಕೊಡಿ, ಬ್ರಾಹ್ಮಣನ ಸಾವಿನ ಕರ್ಮದ ಫಲ ಇವಳಿಗೆ ಸಿಗಲಿ".

ಒಬ್ಬರ ಪಾಪ ಕೃತ್ಯದ ಬಗ್ಗೆ ಗೊತ್ತಿದ್ದೂ, ನಿಂದಿಸಿದರೆ ಅವರ ಪಾಪ ಕರ್ಮದ ಅರ್ಧ ಫಲ ನಿಂದಿಸಿದವರಿಗೆ ಸಲ್ಲುತ್ತದೆ. ಆದರೆ ಒಬ್ಬರ ಕೃತ್ಯದ ಬಗ್ಗೆ ಸರಿಯಾಗಿ ಗೊತ್ತಿರದೆ, ವೃಥಾ ನಿಂದಿಸಿದರೇ ಅದರ ಪಾಪದ ಫಲ ಸಂಪೂರ್ಣವಾಗಿ ನಿಂದಿಸಿದವರಿಗೆ ಸಲ್ಲುತ್ತದೆ.

Karma and Retribution

The Brahmin who accidentally got the poisoned food from king died, and the king was feeling very sad about it.
Chitragupta, the assistant of Yamaraj who had the job of assigning retribution for karmas to the living beings had a problem now.
When this incident happened with the king, he did not know whom to give the karma to.
After all, it was not the eagle's fault that it had carried the dead snake in its claws (since this was its food), nor was it the dead's snake fault, nor was it the king's fault because he did not know that the poison fell into the food.
So Chitragupta went to Yamaraj for a solution. Yamaraj told him to wait patiently. Soon a solution would present itself, the lord of death assured him.
One day, few other brahmanas entered the kingdom in order to meet the king.
A woman was sitting next to the road, selling wares and they asked her: "Do you know where the king's palace is and how we can get there?"
She said: "Yes," and pointed at the right direction. "But, be very careful," she said, "the king is known to kill brahmanas!"
The moment she said that and criticized the king unrightfully, Chitragupta got his answer.
He decided to give HER the karma for the death of the brahmana!
ನೀತಿ :
If you criticize anyone and you are right about their deeds, you will get half of their bad karma.
But, if you criticize someone and you are not right about their deeds, then you will get 100% of their karma.
So be careful about what you think or say about other people.
- ಶ್ರೀಮದ್ ಭಾಗವತ (5.10.17)

Tuesday, June 19, 2018

As I Grew Older - ನಾ ಬೆಳೆದಂತೆ

Poem - As I Grew Older

It was a long time ago.
I have almost forgotten my dream.
But it was there then,
In front of me,
Bright like a sun—
My dream.
And then the wall rose,
Rose slowly,
Slowly,
Between me and my dream.
Rose until it touched the sky—
The wall.
Shadow.
I am black.
I lie down in the shadow.
No longer the light of my dream before me,
Above me.
Only the thick wall.
Only the shadow.
My hands!
My dark hands!
Break through the wall!
Find my dream!
Help me to shatter this darkness,
To smash this night,
To break this shadow
Into a thousand lights of sun,
Into a thousand whirling dreams
Of sun!

by Langston Hughes

ನಾ ಬೆಳೆದಂತೆ

ಬಲು ದಿನಗಳ ಹಿಂದೆ ನಾ ಕಂಡ ಕನಸು,
ಪ್ರಾಯಶಃ ಈಗ ಮರೆತಂತೆಯೇ ಆಗಿದೆ.
ಆದರೆ ಆಗ ಕಣ್ಣ ಮುಂದೆಯೇ ನಡೆದಂತೆ ಇತ್ತು.
ಸೂರ್ಯನಷ್ಟೇ ಸ್ಪಷ್ಟ ಸತ್ಯ- ನನ್ನ ಕನಸು.

ನಂತರ ಗೋಡೆಯೊಂದ್ದೆದಿತು .
ಮೆಲ್ಲ ಮೆಲ್ಲನೆ ಮೇಲೆರಿತು,
ಆಗಸದೆತ್ತರಕ್ಕೆ ಬೆಳೆಯಿತು
ನನ್ನ ಮತ್ತು ನನ್ನ ಕನಸಿನ ಮಧ್ಯೆ;
ಅಡ್ಡ ನಿಂತಿತು - ಆ ಗೋಡೆ.

ಕರಿ ನೆರಳು. ನಾನೂ ಕರಿಯ.
ಆ ಕರಿ ನೆರಳಿನಲ್ಲೇ ನಾ ಮಲಗಿದೆ.
ನನ್ನ ಕನಸಿನ ಬೆಳಕು ನನ್ನ ಮುಂದಿಲ್ಲ,
ನನ್ನ ಕನಸಿನ ಹೊಳಪು ನನ್ನ ಮೇಲಿಲ್ಲ.
ಬರೀ ದಪ್ಪ ಗೋಡೆ. ಬರೀ ದಟ್ಟ ಕತ್ತಲೆ.

ನನ್ನ ಕೈಗಳೇ! ಓ ನನ್ನ ಕಪ್ಪು ಕೈಗಳೇ!
ಈ ಗೋಡೆಯನ್ನು ಒಡೆದುಹಾಕಿ!
ಆ ನನ್ನ ಕನಸನ್ನು ಹುಡುಕಿತನ್ನಿ!
ಈ ಕಗ್ಗತ್ತಲೆಯನ್ನು ಕಿತ್ತೆಸೆಯಲು ಕೈಹಾಕಿ!
ಈ ಕಾಳ ರಾತ್ರಿಯನು ಹೊಸಕಿಹಾಕಿ!
ಈ ಕರಿ ನೆರಳನ್ನು ಸೂರ್ಯನ ಸಾವಿರ ಬೆಳಕಾಗಿಸಿ,
ಪ್ರಜ್ವಲಿಸಿ ಬೆಳೆವ ಸಾವಿರ ಕನಸಾಗಿಸಿ!

~ಅನುವಾದ ಅಮಿತ ಬಿರಾದಾರ

Wednesday, May 30, 2018

सर्वेषु भूतेषु दया हि धर्मः|

To show kindness in all living beings is Dharma.

ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.

ಎಲ್ಲ ಕಾಲಕ್ಕೂ ಎಲ್ಲ ಕಡೆಯೂ ದಯಾಮಯಿಯಾಗಿರಲು ನಮಗೆ ಕಷ್ಟವಾಗಬಹುದು, ಆದರೆ, ಸದಾ ಶಾಕಾಹಾರಿಯಾಗಿ ಇರಲು ಪ್ರಯತ್ನಿಸಬಹುದಲ್ಲ. ನನ್ನ ಆಹಾರ ನನ್ನ ಇಚ್ಛೆ ಅಂತ ಮೊಂಡುತನ ತೋರಿಸುವುದರಲ್ಲಿ ಏನು ಜಾಣತನಯಿದೆ?

ಇನ್ನು ಶಾಕಾಹಾರಿಗಳಿಗೆ ಕೆಲವು ಜನ ಪ್ರಶ್ನೆ ಕೇಳುತ್ತಾರೆ, ನೀನು ತಿನ್ನುವ ಅಲೂಗಡ್ಡೆಯ ಚಿಪ್ಸ್, ಐಸ್ಕ್ರೀಮ್, ಚಾಕೊಲೆಟ್, ಕೇಕ್ ಗಳಲ್ಲಿ ಪ್ರಾಣಿಯ ಒಂದಲ್ಲ ಒಂದು ದೇಹದ ಅಂಶವಿದೆ, ನೀನು ಕೂಡ ಶುದ್ಧ ಶಾಕಾಹಾರಿಯಲ್ಲ. ನಿಜ ಈಗಿನ ಕಾಲದಲ್ಲಿ ಕಲಬೆರಕೆ ಅತೀ ಹೆಚ್ಚು. ನಾವು ಹೋಟೆಲ್, ಅಂಗಡಿಗಳಲ್ಲಿ ಖರೀದಿಸುವ ಯಾವುದೇ ಆಹಾರಕ್ಕೆ ರುಚಿ ಬರುವ ಸಲುವಾಗಿಯೋ, ಇಲ್ಲಾ ಮೃದುತ್ವ ಹೆಚ್ಚಾಗಲೋ, ಗಟ್ಟಿಯಾಗಿರಲೋ, ಇಲ್ಲಾ ಹೆಚ್ಚು ಕಾಲ ಬಾಳಿಕೆಬರಲೋ ಅಥವಾ ಗರಿಗರಿಯಾಗಿ ಇರುವಂತೆ ಮಾಡಲೋ ಇನ್ನೂ ಯಾವ್ಯಾವುದೋ ಕಾರಣಕ್ಕೆ ಕೆಲವು ಪದಾರ್ಥಗಳನ್ನು ಸೇರಿಸಿರುತ್ತಾರೆ. ಆ ಪದಾರ್ಥಗಳು ಹೇಗೆ ತಾಯಾರದವು ಅನ್ನುವದನ್ನು ಹುಡುಕುತ್ತ ಹೋಗಲು ನಮಗೆ ಯಾರಿಗೂ ಸಮಯವಿಲ್ಲ. ಎಲ್ಲರೂ ಅಂತರ್ಜಾಲದಲ್ಲಿ ಸಿಗುವ ಮಾಹಿತಿಯನ್ನೇ ಅವಲಂಭಿಸಬೇಕು. ಆದರೂ ಕೆಲವು ಜನ ನಿಖರವಾಗಿ ಹೇಳುತ್ತಾರೆ ಅವುಗಳಲ್ಲಿ ಯಾವುದೋ ರೂಪದಲ್ಲಿ ಪ್ರಾಣಿಯ ದೇಹದ ಒಂದು  ಅಂಶವನ್ನು ಬೆರೆಸಿರುತ್ತಾರೆ ಅಂತ. ಅವರ ಮಾತು ಎಷ್ಟು ಸತ್ಯ ಎಷ್ಟು ಸುಳ್ಳು ಅಂತ ಪರಾಮರ್ಶಿಸಿ ವಾದ ಮಾಡುವದಕ್ಕಿಂತ ಅಂಥಹ ಆಹಾರಗಳನ್ನು ತ್ಯಜಿಸಿಬಿಡುವುದು ಸರಿಯಲ್ಲವೇ. ನಾವು ಕಾಣದ್ದು ಹೇಗೆ ಇದೆ ಅಂತ ನಾವು ಹೇಳಲು ಹೇಗೆ ಸಾಧ್ಯ? ನಮಗೆ ಗೊತ್ತಿರುವ ಅಥವಾ ಮನೆಯಲ್ಲಿ ಮಾಡಿದ ಆಹಾರ ಮಾತ್ರ ಸೇವಿಸಿ ಸಾಧ್ಯವಾದಷ್ಟು ಶಾಕಾಹಾರಿಯಾಗಿ ಇರಬಹುದಲ್ಲ. 

ನಮ್ಮ ಶಾಕಾಹಾರಿತನವನ್ನು ಜಂಭದಿಂದ ತೋರಿಸಿಕೊಳ್ಳುವ ಅಗತ್ಯತೆ ಯಾರಿಗೂ ಬೇಡ. ನಮ್ಮ ಮನಸಾಕ್ಷಿಗೆ ನಾವು ಶಾಕಾಹಾರಿಯಾದರೆ ಸಾಕು. 

ಕೊನೆಯ ಗುಳಿಗೆ -  ಕೆಲವು ಜನ ಈ ಯಪ್ಪ ಶಾಖಾಹಾರವನ್ನು ಪದೇ ಪದೇ  ಶಾಕಾಹಾರ ಅಂತ ತಪ್ಪಾಗಿ ಬರೆದಿದ್ದಾನಲ್ಲ ಅಂತ ಅಂದುಕೊಳ್ಳಬಹುದು. ಆದರೆ ನನಗಸಿನಿದ ಹಾಗೆ ಶಾಕಾಹಾರವೇ ಸರಿಯಾದ ಪದ. ಶಾಕ ಅಂದರೆ ಪಲ್ಲೆ, ತರಕಾರಿ. ಶಾಖ ಅಂದರೆ ಕಾವು. ಶಾಖಾಹಾರ ಪದ  ಅಪಭ್ರಂಶವಾಗಿ ಬಂತೋ ಇಲ್ಲಾ ಶಾಖ ಕೊಟ್ಟು ಬೇಯಿಸಿದ ಶಾಕಾಹಾರ ಶಾಖಾಹಾರವಾಯಿತೋ ಗೊತ್ತಿಲ್ಲ.