Wednesday, December 18, 2013

ದೇವಸ್ಥಾನದ ಸುತ್ತ ನಾಲ್ಕನೇಯ ಪ್ರದಕ್ಷಿಣೆ

ನಾಲ್ಕನೇಯ ಪ್ರದಕ್ಷಿಣೆ ಪ್ರಾರಂಭಿಸುವಾಗ ನನ್ನ ಗಮನಕ್ಕೆ ಬಂದದ್ದು  ದೇವಸ್ಥಾನಗಳ ಮುಖ್ಯದ್ವಾರ ಅಥವಾ ಮಹಾದ್ವಾರ ಅಥವಾ ವಿಮಾನ ಗೋಪುರಗಳ ಎದುರುಗಡೆ, ಅಲ್ಲಿ ಜರಗುವ ವಿಭಿನ್ನ ದೃಶ್ಯಗಳ ಕಡೆಗೆ. ಅಲ್ಲಿಗೆ ನಮ್ಮ ಜನರಿಗೆ ದೇವರ ಮೇಲೆ ಇರುವ ಭಕ್ತಿಯ ಬಗ್ಗೆ ನನಗೆ ಒಂದು ಗೊಂದಲ ಶುರುವಾಯಿತು. ವಿಷಯ ಏನಪ್ಪಾ  ಅಂದರೆ  ಕೆಲವು ಜನ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ನಡೆದುಕೊಂಡೆ ಸಾಗಲಿ ಅಥವಾ ವಾಹನದ ಮೇಲೆ ಸವಾರಿ ಮಾಡಿಕೊಂಡೆ ಹೋಗಲಿ, ದೇವಸ್ಥಾನ  ಕಂಡ  ತಕ್ಷಣ ಭಕ್ತಿ ಪರವಶರಾಗಿ ಬಿಡುತ್ತಾರೆ.  ನಡೆದುಕೊಂಡು ಹೋಗುವವರು ದೇವಸ್ಥಾನದ ಹತ್ತಿರ ಬಂದ ಕೂಡಲೇ ಅದರ ಮುಂದೆ, ಅಂದರೆ ಗರ್ಭ ಗುಡಿಯಲ್ಲಿರುವ ಮುಖ್ಯ ದೇವರ ಮೂರ್ತಿ ಸರಿಯಾಗಿ ಕಾಣುವ ಹಾಗೆ ನಿಂತುಕೊಳ್ಳುತ್ತಾರೆ.  ನಂತರ ತಮ್ಮ ಪಾದಗಳನ್ನು ಇಲ್ಲಿಗೆ ಬರುವವರೆಗೂ ಬಲು ಮುತವರ್ಜಿಯಿಂದ ರಕ್ಷಿಸಿಕೊಂಡು ಬಂದಿರುವ ಪಾದರಕ್ಷೆಗಳನ್ನು ತ್ಯಜಿಸಿ ತಮ್ಮ ಮುಂದೆ ಇಡುತ್ತಾರೆ. ಆಮೇಲೆ ಕಣ್ಣು ಮುಚ್ಚಿ, ಎರಡು ಕೈ ಜೋಡಿಸಿ ನಮಸ್ಕರಿಸಿ ದೇವರಿಗೆ ಏನಾದರೂ ಬೇಡಿಕೊಳ್ಳುವದಿದ್ದರೆ ಬೇಡಿಕೊಂಡು, ತಮ್ಮ ಕಿರು ಪ್ರಾರ್ಥನೆ ಸಲ್ಲಿಸುತ್ತಾರೆ. ಇಷ್ಟೆಲ್ಲಾ ಆಗುವವರೆಗೆ ಆ ದೇವರು ಮತ್ತು ಈ ಭಕ್ತರ ನಡುವೆ ಕೇವಲ ಇವರ ಪಾದರಕ್ಷೆ ಮಾತ್ರ ಇವೆ ಅಂದುಕೊಳ್ಳುವ ಹಾಗಿಲ್ಲ ಅಲ್ಲಿ ಇನ್ನು ಹತ್ತಾರು ಜನ ಸಾಗಿ ಹೋಗಿರುತ್ತಾರೆ. ಈ ಹತ್ತಾರು ಜನರಲ್ಲಿ ಆರ್ಚಕರು, ದೇವಸ್ಥಾನಕ್ಕೆ ಬರುವ ಭಕ್ತರು, ದೇವರ ನಂಬದೇಯಿರುವ ನಾಸ್ತಿಕರು, ಅನ್ಯ ಧರ್ಮೀಯರು ಹೀಗೆ ಯಾರು ಯಾರೋ ಇರುತ್ತಾರೆ. ಅವರೆಲ್ಲ ಇವರ ಪ್ರಾರ್ಥನೆಗೆ ಸ್ವಲ್ಪ ಅಡಚಣೆ ಮಾಡಿದರೂ ಕೂಡ ಇವರು ಬೇಜಾರು ಮಾಡಿಕೊಳ್ಳುವದಿಲ್ಲ. ಯಾಕೆಂದರೆ ಇವರಿಗೆ ಬೇರೆ ಕಡೆ ಎಲ್ಲೋ ಕೆಲಸದ ಪ್ರಯುಕ್ತ ಹೋಗುವ ಅವಸರ. ದೇವಸ್ಥಾನದ ಒಳಗಡೆ ಹೋಗಿ ಘಂಟಾನಾದ ಮೊಳಗಿಸಿ, ಹೂವು-ಹಣ್ಣು ಕೊಟ್ಟು, ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿಸಿ, ದೇವರಿಗೆ ನಮಸ್ಕರಿಸಿ, ತೀರ್ಥ-ಪ್ರಸಾದ ಸ್ವೀಕರಿಸಿ, ಆರತಿ ತಟ್ಟೆಗೆ ದಕ್ಷಿಣೆ ಇಟ್ಟು, ಪ್ರದಕ್ಷಿಣೆ ಹಾಕಿ ಬರುವಷ್ಟು ಪರುಸೊತ್ತಿಲ್ಲ. (ಹೊರಗಡೆನೇ ನಿಂತು ನಮಸ್ಕರಿಸುವದರ ಇನ್ನೊಂದು ಲಾಭವೆಂದರೆ ಮಂಗಳಾರತಿ ತಟ್ಟೆಗೆ ದಕ್ಷಿಣೆ ರೂಪದಲ್ಲಿ ಇಡುವ ಒಂದು ಅಥವಾ ಎರಡು ರೂಪಾಯಿ ನಾಣ್ಯದ ಉಳಿತಾಯ ಕೂಡ ಇರಬಹುದು.) ಇವರು ದಾರಿ ಮಧ್ಯದಲ್ಲಿ ನಿಂತು ಈ ರೀತಿ ಮಾಡುವದರಿಂದ ಬೇರೆಯವರಿಗೆ ಇವರಿಂದ ಒಂದೆರಡು ನಿಮಿಷ ತೊಂದರೆಯಾದರೂ ಕೂಡ  ಅದನ್ನು ಇವರು ತಲೆಗೆ ಹಾಕಿಕೊಳ್ಳುವದಿಲ್ಲ. ಇವರ ಭಕ್ತಿಯನ್ನು ಕಂಡು ದಾರಿಹೋಕ ಜನರೇ  ಇವರಿಗೆ ತೊಂದರೆಯಾಗದಿರಲಿ ಎಂದುಕೊಂಡು ಈ ಹೊರಗಡೆಯ ಭಕ್ತ ಮತ್ತು ಆ ಒಳಗಡೆಯ ದೇವರ ಮಧ್ಯ ಬರದೆ ತಮ್ಮ ಪಥವನ್ನು ಬದಲಿಸಿ ಮುಂದೆ ಸಾಗುತ್ತಾರೆ.

ಇನ್ನು ಇದೇ ಗುಂಪಿಗೆ ಸೇರಿದ ವಾಹನ ಸವಾರರ ಭಕ್ತಿ ಅಥವಾ ನಮಸ್ಕರಿಸುವ ವಿಧಾನ ಇನ್ನೂ ಒಂದು ಹಂತ ಕೆಳಗಿನದು. ಯಾಕೆಂದರೆ ಇವರು ನಿಂತುಕೊಳ್ಳುವದೂ ಇಲ್ಲ, ಪಾದರಕ್ಷೆಗಳನ್ನು ಬಿಡುವುದೂ ಇಲ್ಲ, ನಮಸ್ಕರಿಸಲು ಎರಡೂ ಕೈಗಳನ್ನು  ಬಳಸುವದೂ ಇಲ್ಲ, ವಾಹನದಿಂದ ಕೆಳಗೆ ಇಳಿಯುವದಂದತೂ ಸಾಧ್ಯವೇ ಇಲ್ಲ. ಯಾಕೆಂದರೆ ಇವರ ಅವಸರ ಕಾಲ್ನಡಿಗೆ ಭಕ್ತರಿಗಿಂತ ಹೆಚ್ಚು. ದ್ವಿಚಕ್ರ ವಾಹನ ಓಡಿಸುವ ಈ ಭಕ್ತರು ತಮ್ಮ ಬಲಗೈಯಲ್ಲಿ ಇರುವ ವೇಗವರ್ಧಕ (accelerator) ಒಂದೆರಡು ಕ್ಷಣ ಬಿಟ್ಟು ಹಣೆ ಮತ್ತು ಎದೆ ಮುಟ್ಟಿಕೊಂಡರೆ ಅದೇ ಧೀರ್ಘ ದಂಡ ನಮಸ್ಕಾರವಾಯಿತು. ಇನ್ನು ಕೆಲವರಂತು ಯಾವುದೇ ಕೈಯನ್ನು ಎತ್ತದೇ ಬರಿ ತಲೆಯನ್ನು ದೇವರ ಕಡೆ ತಿರುಗಿಸಿ ಅರೆಕ್ಷಣ ಸ್ವಲ್ಪ ಬಾಗಿಸಿ ಮತ್ತೆ ತಲೆ ನೆರವಾಗಿ ರಸ್ತೆ ಕಡೆಗೆ ತಿರುಗಿಸುವರು, ಅವರಿಗೆ ಆ ಭಕ್ತಿಯೇ ಸಾಕಷ್ಟು ಆಯಿತು.  

ನಾಲ್ಕನೇಯ  ಪ್ರದಕ್ಷಿಣೆ ಇನ್ನು ಮುಂದೆವರಿದಿದೆ ಸಧ್ಯದಲ್ಲೇ ಮುಗಿಸುವೆ ... 


ದೇವಸ್ಥಾನದ ಸುತ್ತ ಮೊದಲೆರಡು ಪ್ರದಕ್ಷಿಣೆಗಳು

ದೇವಸ್ಥಾನಗಳು ನಮ್ಮ ಸಮಾಜದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದೆ, ಆದರೆ ದೇವಸ್ಥಾನ ಎಂದ ತಕ್ಷಣ ಎಲ್ಲರಿಗೂ, ಎಲ್ಲ ಕಾಲಕ್ಕೂ ಭಕ್ತಿಭಾವವೇ ಬರುವುದು ಅಂತ ಹೆಳಲಿಕ್ಕಾಗಲ್ಲ. ಬೇರೆ ಬೇರೆ ವ್ಯಕ್ತಿಗಳಿಗು, ಬೇರೆ ಬೇರೆ ಸಮಯದಲ್ಲಿ ದೇವಸ್ಥಾನವನ್ನು ಬೇರೆ ಬೇರೆ ದೃಷ್ಟಿಯಿಂದ ಕಾಣುತ್ತಾರೆ. ಬನ್ನಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುತ್ತ ಯಾರ್ಯಾರು ಯಾವ್ಯಾವ ದೃಷ್ಟಿ ಹರಿಸುತ್ತಾರೆ ನೋಡೋಣ. 

ನಮ್ಮ ಜನರಲ್ಲಿ ದೇವಸ್ಥಾನದ ಬಗ್ಗೆ ಎಷ್ಟು ಗೌರವ, ಭಕ್ತಿಯಿದೆಯೋ ಅಷ್ಟೇ ಭಯ ಕಿರಿಕಿರಿ ಕೂಡ ಇದೆ. ಇಲ್ಲೀಗ ನಾನು ಎರಡು ವಿಷಯಗಳ ಪ್ರಸ್ತಾಪ ಮಾಡಲು ಬಯಸುತ್ತೇನೆ. ಮೊದಲನೆಯದಾಗಿ, ನಾನೊಮ್ಮೆ ಬಾಡಿಗೆಗಾಗಿ ಮನೆ ಹುಡುಕುತ್ತಿದ್ದಾಗಗಿನ ನಾನೊಂದು ಮನೆಯನ್ನು ಇಷ್ಟಪಟ್ಟಿದ್ದೆ. ಆ ಮನೆ ದೇವಸ್ಥಾನಕ್ಕೆ ತುಂಬಾ ಹತ್ತಿರ, ಅಂದರೆ ದೇವಸ್ಥಾನದ ಎದುರುಗಡೆಯೇ ಇತ್ತು. ಮನೆ ತುಂಬಾ ಚೆನ್ನಾಗೇ ಇತ್ತು ಅಲ್ಲದೆ ನೆಲ ಮಹಡಿಯಾದ್ದರಿಂದ ಮನೆ ಮುಂದೆನೆ ವಾಹನ ನಿಲ್ಲಿಸಲು ಸಾಕಷ್ಟು ಜಾಗ ಕೂಡ ಇತ್ತು. ಮನೆ ಮಾಲೀಕರು ಪೋಲಿಸ್ ಅಧಿಕಾರಿಯಾದರೂ ಕೂಡ ತುಂಬಾ ಸಭ್ಯ ವ್ಯಕ್ತಿ. ಬಾಡಿಗೆ ಕೂಡ ನನ್ನ ಬಜೆಟ್ ನಲ್ಲಿ ಕೂರುವಂಥದ್ದು. ದೇವಸ್ಥಾನ ಹತ್ತಿರವಿದ್ದರೆ ಒಳ್ಳೆಯದು ಮತ್ತು ಶುಭ ಅಂದುಕೊಂಡು ನಾನು ಸಾವಿರ ರೂಪಾಯಿ ಟೋಕನ್ ಅಡ್ವಾನ್ಸ್ ಕೊಟ್ಟು  ಶೀಘ್ರದಲ್ಲೇ ಮಿಕ್ಕ ಠೆವಣಿ ಹಣ ಕೊಡುತ್ತೇನೆ ಎಂದು ಹೇಳಿದೆ.  ಮನೆ ಹುಡುಕುವ ಕೆಲಸ ಇಲ್ಲಿಗೆ ಮುಗಿಯಿತು ಅಂತ ಸಂತೋಷ ಮತ್ತು ನೆಮ್ಮದಿಯಿಂದ ಅಲ್ಲಿಂದ ಹೊರಟೆ. ನಮ್ಮ ತಾಯಿಗೆ ಈ ವಿಷಯ ತಿಳಿಸೋಣ ಅಂತ ಯೋಚಿಸಿ ಅವರ ದೂರವಾಣಿಗೆ ಕರೆಮಾಡಿದೆ, ಆಗ ನಮ್ಮಮ್ಮ ಎಲ್ಲ ವಿವರ ಕೇಳಿದ ಮೇಲೆ ತಿರ್ಮಾನ ಹೇಳಿದರು, ಆ ಮನೆ ಬೇಡ ಅಂತ. ಯಾಕೆಂದರೆ ದೇವಸ್ಥಾನದ ಎದುರುಗಡೆ ಮನೆಯಿರಬಾರದು ಅಂತ. ಅದು ಶಕುನವೋ, ಅಪಶಕುನೋ, ಮೂಢನಂಬಿಕೆಯೂ, ಅಪನಂಬಿಕೆಯೋ ಗೊತ್ತಿಲ್ಲ, ಅಮ್ಮನ ನಿರ್ಧಾರ ಮಾತ್ರ ಅಚಲ, ಮತ್ತೆ ನಾನೂ ಕೂಡ ಅಮ್ಮನ ಮಾತು ಮೀರಿ ಹೋಗುವದಿಲ್ಲ. ಇಷ್ಟಕ್ಕೆ ನನ್ನ ಸಾವಿರ ರೂಪಾಯಿ ನೀರಲ್ಲಿ ಹೋಯಿತು ಅಲ್ಲದೆ ನನ್ನ ಮನೆ ಹುಡುಕುವ ಗೋಳು ಮತ್ತೆ ಶುರುವಾಯಿತು.

ಇನ್ನು ಎರಡನೇಯದಾಗಿ ಹೇಳಬೇಕೆಂದರೆ, ನನ್ನ ಸಹೋದ್ಯೋಗಿ ಒಬ್ಬರು ಬಾಡಿಗೆ ಮನೆಯಲ್ಲಿದ್ದು ಬೇಸತ್ತು ಒಂದು ಮನೆ ಅಥವಾ ನಿವೇಶನ ಖರೀದಿಸಬೇಕು, ಅಲ್ಲದೆ ಕೂಡಿಟ್ಟ ಹಣ ನಿಯೋಗಿಸಲು ಇದು ಉತ್ತಮ ಹೂಡಿಕೆ ಅಂತ ತುಂಬಾ ದಿನಗಳಿಂದ ಅಲೆದಾಡತಾಯಿದ್ದರು. ಅವರಿಗೆ ಯಾರೋ ಒಬ್ಬರು ಒಂದು ಒಳ್ಳೆಯ ದರದ ಮನೆಯ ಮಾರಾಟದ ವಿಷಯ ತಿಳಿಸಿ ಅಲ್ಲಿಗೆ ಇವರನ್ನು ಕರೆದುಕೊಂಡು ಹೋಗಿ ತೋರಿಸಿಕೊಂಡೂ ಬಂದರು. ಅಲ್ಲಿಂದ ಬಂದ ಮೇಲೆ ಇವರು ಆ ಮನೆಯ ವಿಚಾರ ಅಲ್ಲಿಗೆ ಬಿಟ್ಟು ಬಿಟ್ಟರು. ಯಾಕೆ ಅಂತ ಕೇಳಿದರೆ ಇವರ ಉತ್ತರ, "ಮನೆ ದೇವಸ್ಥಾನದ ಪಕ್ಕದಲ್ಲಿದೆ". ಇಲ್ಲಿಯವರೆಗೆ ನಾನು ದೇವಸ್ಥಾನದ ಎದುರುಗಡೆ ಮನೆಯಿರಬಾರದು ಅಂತ ಮಾತ್ರ ಅಂದುಕೊಂಡ್ಡಿದ್ದೆ ಆದರೆ ಈಗ ಗೊತ್ತಾಯಿತು ಮನೆ ಪಕ್ಕದಲ್ಲಿಯೂ ಕೂಡ ದೇವಸ್ಥಾನವಿರಬಾರದು. ನಮ್ಮ ಸಹೋದ್ಯೋಗಿ ಆ ಮನೆ ತಿರಸ್ಕರಿಸುವದಕ್ಕೆ ಯಾವ ಶಕುನ ಅಥವಾ ನಂಬಿಕೆಯ ಕಾರಣಗಳಿರಲಿಲ್ಲ, ಆದರೆ ಒಂದು ಬಲವಾದ ಮತ್ತು ವಾಸ್ತವಿಕ ಕಾರಣವಿತ್ತು. ಅದೇನೆಂದರೆ ದೇವಸ್ಥಾನ ಹತ್ತಿರವಿದ್ದರೆ ಹಬ್ಬ ಹರಿದಿನಗಳಲ್ಲಿ ತುಂಬಾ ಗದ್ದಲವಿರುತ್ತದೆ, ಶಬ್ದವಾಗುತ್ತದೆ ಮತ್ತು ಗಲೀಜು ಕೂಡ ಆಗುತ್ತದೆ.


ಅಲ್ಲಿಗೆ ನನ್ನ ಮನಸ್ಸು ಮಂಥನ ಮಾಡೋಕ್ಕೆ ಶುರುವಿಟ್ಟುಕೊಂಡಿತು, ಪ್ರಶ್ನೆಗಳು ಉದ್ಭವಿಸತೊಡಗಿದವು. ಜನರಿಗೆ ದೇವಸ್ಥಾನ ಬೇಕು ಆದರೆ ಅದು ಮನೆ ಅಕ್ಕ-ಪಕ್ಕ ಅಥವಾ ಎದುರುಗಡೆ ಇರಬಾರದು ಅಷ್ಟೇಯೇಕೆ ಹತ್ತಿರವೇ ಇರಬಾರದು. ಇನ್ನು ತುಂಬಾ ದೂರ ಕೂಡ ಇರಬಾರದು ಯಾಕೆಂದರೆ ಹೋಗಿ ಬರುವದಕ್ಕೆ ಕಷ್ಟವಾಗುತ್ತದೆ. ದೇವಸ್ಥಾನದಲ್ಲಿ ವಿಗ್ರಹಗಳಿರಬೇಕು ಆದರೆ ಮನೆಯಲ್ಲಿ ದೇವರ ಶಿಲಾ ಪ್ರಥಿಮೆಗಳಿರಬಾರದು. ದೇವರು ಎಲ್ಲೆಡೆ ಇರುವನು ಆದರೆ ನಾವು ಅವನಿಗೆ ಒಂದು ದೇವಸ್ಥಾನ ಕಟ್ಟಿಸಿ ಅವನನ್ನು ಸ್ತಿಮಿತಗೊಳಿಸುತ್ತೇವೆ ಮತ್ತೆ ನಾವೇ ಕಟ್ಟಿಸಿದ ಆ ದೇವಸ್ಥಾನದ ಹತ್ತಿರ ನಮ್ಮ ಮನೆ ಮಾಡುವದಿಲ್ಲ. ದೇವಸ್ಥಾನದಲ್ಲಿ ಶಬ್ದ ಮಾಡುವವರು ನಾವೇ, ಮತ್ತೆ ಶಬ್ದ  ಜಾಸ್ತಿಯಾಗುತ್ತದೆ ಅನ್ನುವವರು ನಾವೇ. ಯಾಕೆ? ಯಾಕೆ ಹೀಗೆ? 


ದೇವಸ್ಥಾನದಿಂದ ದೂರ ದೂರಯಿರುತ್ತ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ನನ್ನ ಮೊದಲ ಪ್ರದಕ್ಷಿಣೆ ಮುಗಿಸಿದೆ. ಬನ್ನಿ ಈಗ ಎರಡನೇಯ ಪ್ರದಕ್ಷಿಣೆಯೊಂದಿಗೆ ಎರಡನೆಯ ವಿಷಯ ಎತ್ತಿಕೊಳ್ಳೋಣ.


ಬೆಂಗಳೂರಿನ BEL ವಲಯದಿಂದ ಸ್ವಲ್ಪ  ಮುಂದೆ ಹೋದರೆ, ಅಲ್ಲಿ ಗಂಗಮ್ಮ ವೃತ್ತ ಅಂತ ಒಂದು ಪ್ರದೇಶವಿದೆ. ಈ ವೃತ್ತಕ್ಕೆ ಗಂಗಮ್ಮನ ನಾಮಕರಣ ಯಾಕಾಗಿರಬೇಕು ಅಂತ ಯೋಚಿಸಿದಾಗ ನನ್ನ ತಲೆಗೆ ಹೊಳೆದಿದ್ದೆನೆಂದರೆ,  ಯಾರೋ ಒಬ್ಬ ಸಮಾಜ ಸೇವೆ ಮಾಡಿರುವ ಮಹಿಳೆಯ ಹೆಸರು ಈ ವೃತ್ತಕ್ಕೆ ಇಟ್ಟಿರಬೇಕು ಎಂದು. ಹೀಗೆಯೇ ವಿಚಾರಮಾಡಲು ನನ್ನ ಹತ್ತಿರ ಒಂದು ಬಲವಾದ ಕಾರಣವಿದೆ. ನಮ್ಮ ಮನೆಯ ಹತ್ತಿರ ಗಂಗಮ್ಮ-ತಿಮ್ಮಯನವರ ಮನೆ ಮತ್ತು ಕಲ್ಯಾಣ ಮಂಟಪವಿದೆ. ಅದರ ಬದಿಯ ರಸ್ತೆಗೆ ತಿಮ್ಮಯ್ಯ ರಸ್ತೆ ಅಂತ ಹೆಸರಿಡಲಾಗಿದೆ. ಹೇಗೆ ತಿಮ್ಮಯ್ಯನವರ ಸೇವೆ ಮೆಚ್ಚಿ ಇಲ್ಲಿಯ ಜನರು ಈ ರಸ್ತೆಗೆ ಅವರ ಹೆಸರಿಟ್ಟರಬಹುದೋ ಹಾಗೆಯೇ ಗಂಗಮ್ಮನವರ ಸೇವೆ ಮೆಚ್ಚಿ ಅಲ್ಲಿಯ ಜನ ಆ ಹೆಸರಿಟ್ಟರಬಹುದು  ಎಂದು ಅಂದುಕೊಂಡೆ. ಆದರೆ ಆ ವೃತ್ತದ ಪಕ್ಕದಲ್ಲಿ ಒಂದು ಫಲಕದ ಮೇಲೆ ಈ ರೀತಿ ಬರೆದಿತ್ತು "ಗಂಗಮ್ಮ ವೃತ್ತ, ಗಂಗಮ್ಮನ ಗುಡಿಗೆ ದಾರಿ" ಜೊತೆಗೆ ಮಾರ್ಗದರ್ಶನಕ್ಕಾಗಿ ಒಂದು ಬಾಣದ ಗುರುತುಯಿತ್ತು. ಅಲ್ಲಿಗೆ ನನಗೆ ಸ್ಥಳದ ಕೊಂಚ ಪರಿಚಯವಾದಂತಾಯಿತು ಮತ್ತೆ ನನ್ನ ಊಹೆಯೂ ತಪ್ಪು ಎಂದು ಗೊತ್ತಾಯಿತು.


ಗಂಗಮ್ಮನ ದೇವಸ್ಥಾನವನ್ನು ನೋಡೇ ಬಿಡೋಣವೆಂದು ಬಾಣದ ಚಿನ್ಹೆಯ ಕಡೆಗೆ ನಾನು ಹೆಜ್ಜೆ ಹಾಕಿದೆ. ನಾನು ಹತ್ತಿಪ್ಪತ್ತು ಅಡಿ ಮುಂದೆ ಹೋದ ಮೇಲೆ ನನಗೆ ಒಂದು ಆಶ್ಚರ್ಯಕಾದಿತ್ತು, ಅಲ್ಲಿ ರಸ್ತೆಯ ಕೊನೆಯಲ್ಲಿ ಒಂದು ಎಕರೆಯಷ್ಟು ಆಗುವ ದೊಡ್ಡ ಜಾಗದಲ್ಲಿ  ಒಂದು ಇಗರ್ಜಿಯಿದೆ. ಇದೇನಿದು ಗಂಗಮ್ಮನ ದೇವಸ್ಥಾನ ಅಂತ ದಿಕ್ಕು ತೋರಿಸಿ ಆ ನಾಮಫಲಕ ನನಗೆ ದಿಕ್ಕು ತಪ್ಪಿಸಿತೆ ಅಂತ ಯೋಚಿಸ ತೊಡಗಿದೆ. ಆಚೆ ಇಚೆ ತಲೆಯೆತ್ತಿ ನೋಡಿದರೆ ಎಲ್ಲೂ ದೇವಸ್ಥಾನವಿರುವ ಗೋಪುರವೇ ಕಾಣುತ್ತಿಲ್ಲ. ಘಂಟಾನಾದ ಎಲ್ಲಾದರೂ ಕೆಳುವದೋ ಎಂದು ಕಿವಿ ಅಗಲಿಸಿ ಕೇಳಿದರೂ ಏನೂ ಕೇಳುತ್ತಿಲ್ಲ. ಇಗರ್ಜಿಯನ್ನು ಒಮ್ಮೆ ಗಮನವಿಟ್ಟು ನೋಡಿದೆ, ಅದರ  ಮುಂಭಾಗದಲ್ಲಿ ದೇವಸ್ಥಾನದ ಮುಂದೆಯಿರುವಂತೆ ಎರಡು ಹಿಂದು ಶೈಲಿಯ ದೀಪಸ್ತಂಭಗಳಿವೆ. ನನಗೆ ಒಂದು ತರಹದ ಗೊಂದಲವಾಯಿತು, ದೀಪ ಸ್ತಂಭದ ಹಿಂದೆ ಏನಾದರೂ ಗಂಗಮ್ಮನ ಗುಡಿಯಿದ್ದೀತಾ ಎಂದು ಗಮನಿಸಿದೆ, ಇಲ್ಲ ಅದು ಕ್ರೈಸ್ತ ಇಗರ್ಜಿಯೇ ಆಗಿತ್ತು ಹೊರತು ದೇವಸ್ಥಾನವಿರಲಿಲ್ಲ. ಆ ಕ್ಷಣಕ್ಕೆ ನನಗೆ ಕೇರಳದ ಇಗರ್ಜಿಗಳ ನೆನಪಾಯಿತು. ಅಲ್ಲಿಯೂ  ಕೂಡ ಇಗರ್ಜಿಯ ಮುಂದೆ ದೀಪಸ್ತಂಭಗಳಿರುವ ಪದ್ಧತಿಯಿದೆ. ಈಗ ನನಗೆ ಸ್ಪಷ್ಟವಾಯಿತು ಗಂಗಮ್ಮನ ನೋಡಲಿಕ್ಕೆ ನನಗೆ ಇನ್ನೂ ಸ್ವಲ್ಪ ದೂರ ನಡೆಯಬೇಕಾಗಿದೆ ಎಂದು, ಆದರೆ ಯಾವ ದಿಕ್ಕಿನಲ್ಲಿ ಸಾಗಬೇಕು ಗೊತ್ತಾಗುತ್ತಿಲ್ಲ ಎಲ್ಲೂ ಮಾರ್ಗದರ್ಶಕ ಫಲಕಗಳೇ ಇಲ್ಲ. ಅಲ್ಲೇ ಹೋಗುತ್ತಿದ್ದ ಒಬ್ಬ ದಾರಿಹೋಕರನ್ನು ವಿಚಾರಿಸಿದೆ. ಆಗ ಅವರು ಇಗರ್ಜಿಯ ಪಕ್ಕದಲ್ಲಿರುವ ಒಂದು ಚಿಕ್ಕದಾದ ದಾರಿಯನ್ನು ತೋರಿಸಿ ಅಲ್ಲಿ ಮುಂದೆ ಹೋಗಿ ನಿಮ್ಮ ಎಡಗಡೆಗೆ ದೇವಸ್ಥಾನ ಸಿಗುವದು ಎಂದು ಹೇಳಿದರು.


ಅವರು ಹೇಳಿದಂತೆ ನಾನು ಮಣ್ಣು ದಾರಿಯಲ್ಲಿ ನಡೆದುಕೊಂಡು ಮುಂದೆ ಸಾಗಿದೆ. ಆಗ ನನಗೆ ಕಂಡಿತು ಗಂಗಮ್ಮನ ಗುಡಿ. ಈ  ದೇವಸ್ಥಾನ ಆ ಇಗರ್ಜಿಯಷ್ಟು ದೊಡ್ದದಿರಲಿಲ್ಲ ಮತ್ತು ಇದರ ಸುತ್ತಮುತ್ತ  ಇಗರ್ಜಿಗಿರುವಷ್ಟು ವಿಶಾಲವಾದ ಪ್ರಾಂಗಣವೂ ಇಲ್ಲ. ಇಗರ್ಜಿಯು  ಸಂಪೂರ್ಣವಾಗಿ ನಿರ್ಮಾಣವಾಗಿ  ಸುಸಜ್ಜಿತವಾಗಿತ್ತು ಆದರೆ ಗಂಗಮ್ಮನ ಗುಡಿ ತುಂಬಾ ಪುರಾತನದ್ದಾದರೂ ಇನ್ನೂ ನವೀಕರಣದ ಹಾದಿಯಲ್ಲಿದೆ. ದೇವಸ್ಥಾನದ ಸುತ್ತ ದುರ್ಗೆ, ಪರಮೇಶ್ವರಿ, ಅಷ್ಟ ಲಕ್ಷ್ಮಿಯರ ವಿಗ್ರಹಗಳಿವೆ. ಆದರೆ ಪ್ರಾಂಗಣವಿನ್ನೂ ಸ್ವಚ್ಚಗೊಳಿಸಿಲ್ಲ, ಯಾಕೆಂದರೆ ನವೀಕರಣದ ಕೆಲಸ ಇನ್ನು ಸಾಗುತ್ತಿರುವದರಿಂದ ಅಲ್ಲಲ್ಲಿ ಕಲ್ಲು ಮಣ್ಣು ಬಿದ್ದಿವೆ. ಇಗರ್ಜಿಯ ಸ್ವಚ್ಛತೆ, ವಿಶಾಲತೆ, ಸುಸಜ್ಜಿತ ಕಟ್ಟಡ ಯಾವುದೂ ದೇವಸ್ಥಾನದಲ್ಲಿಲ್ಲ. ಸುತ್ತ ಮುತ್ತಲ ಪ್ರದೇಶವೆಲ್ಲ ಗಂಗಮ್ಮನ ಹೆಸರಿನಿಂದಲೇ ಗುರುತಿಸಲ್ಪಟ್ಟರೂ ಗಂಗಮ್ಮನ ದೇವಸ್ಥಾನದಲ್ಲಿ  ಇನ್ನೂ  ಸುಮಾರು ಕೆಲಸಗಳಾಗಬೇಕಿದೆ. ಒಂದೊಮ್ಮೆ ಎಲ್ಲ ನಿರ್ಮಾಣ ಕೆಲಸಗಳು ಮುಗಿದರೆ ಕೆತ್ತಿದ ಕಲ್ಲಿನ ಕಂಬಗಳಿಂದ ಅಲಂಕೃತಗೊಂಡು ದೇವಸ್ಥಾನ ತುಂಬಾ ಚೆನ್ನಾಗಿ ಕಾಣುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ನಮ್ಮ ದೇವಸ್ಥಾನಕ್ಕೆ ಮತ್ತು ಇಗರ್ಜಿಗೆ ಇರುವ ವ್ಯತ್ಯಾಸ. ಗಂಗಮ್ಮ ಯಾವಾಗ ಅಶಿರ್ವದಿಸುತ್ತಾಳೋ ಗೊತ್ತಿಲ್ಲ, ಅವಳ ಕೃಪೆ ಎಲ್ಲರ ಮೇಲೆಯಿರಲಿ, ದೇವಸ್ಥಾನದ ನವೀಕರಣದ ಕೆಲಸ ಆದಷ್ಟು ಬೇಗನೆ ಮುಗಿಯಲಿ ಎಂದು ಬೇಡಿಕೊಳ್ಳುತ್ತಾ ಅವಳ ಪಾದಕ್ಕೆ ನ್ನನದೊಂದು ನಮಸ್ಕಾರ ಸಲ್ಲಿಸುತ್ತಾ ಎರಡನೇಯ ಪ್ರದಕ್ಷಿಣೆ ಮುಗಿಸುವೆ.