Thursday, November 17, 2022

ಕರುಣಾಮಯಿ

ಸಾಗರವು ಕರುಣಾಮಯಿ ತಂದೆಯಂತೆ. ತನ್ನೊಡಲಲ್ಲಿ ನೀರನ್ನಷ್ಟೇ ಅಲ್ಲದೇ ಅಪಾರ ಜೀವ ಜಂತುಗಳಿಗೂ ಜನ್ಮಕೊಟ್ಟು ಸಲಹುತ್ತಾನೆ.  ಆದರೆ ಅಲ್ಲಿ ಒಳಗಿರುವ ನೀರು ಮಾತ್ರ, ಸಾಗರನ  ಬಿಟ್ಟು ಸೂರ್ಯನ ಶಾಖದಿಂದ ಮೇಲೆ ಹಾರುವದು. ಅದನ್ನು ನೋಡಿ, ಆತಂಕಪಟ್ಟು ಪ್ರಯತ್ನಪೂರ್ವಕವಾಗಿ ಸಾಗರವು  ಅಲೆ ಅಲೆಯಾಗಿ ಮೇಲೆದ್ದು, ಮರಳಿ ಬಾ ಎಂದು ಕೈದೋರಿ ಕರೆಯುತ್ತದೆ. ಈ ನೀರಿಗೆ ತಂದೆಯ ಕರೆ, ಭೂತಾಯಿಯ ಮಮತೆಯ ಮೊರೆ, ಗುರುತ್ವದ ಸೆಳೆತ ಎಲ್ಲವೂ ಹಗುರವಾಗಿ ಕಾಣುತ್ತದೆ. ವಿಪರ್ಯಾಸವೆಂದರೆ ನೀರಿನ ಮೇಲೆ ದೂರದ ಸೂರ್ಯ ಮತ್ತು ನಿಲ್ಲದೇ  ಚಲಿಸುವ ಅಲೆಮಾರಿ  ಪವನರ(ಗಾಳಿಯ) ಪ್ರಭಾವವೇ ಅಂತಹುದು. ನೀರು ಮೇಲೆ ಮೇಲೆ ಹೋಗಿ ತೇಲಾಡುವ ಮೇಘವಾಗುವುದು. ಸುತ್ತಿ ಸುಳಿದು, ಮೈಭಾರವಾಗಿ ಮತ್ತೆ ಭೂಮಿಗೆ ವರ್ಷಧಾರೆಯಾಗಿ ಸುರಿವುದು. ಸುರಿವ ನೀರನ್ನು ಭೂಮಿಯು ತವರಿಗೆ ಬಂದ ಮಗಳಂತೆಸಂತೋಷದಿಂದ ಸ್ವಾಗತಿಸುವಳು. ನೀರು ನದಿಯಾಗಿ ಮತ್ತೆ ವೈಯಾರದಿಂದ ನಲಿಯುತ್ತ ಭೂಮಿಯೆಲ್ಲ ಸುತ್ತಾಡಿ ಕೊನೆಗೆ  ಸಾಗರನೆಡೆಗೆ ಬರುವುದು. ಸಾಗರ ಬಂದವರಿಗೆಲ್ಲ ಬಾ ಎನ್ನುವ ಜಾಯಮಾನದವ, ಇನ್ನು ಹೆತ್ತ ಮಗಳಂತೆ ತನ್ನಿಂದ ದೂರಾದ ನೀರಿಗೆ ಬೇಡ ಅಂದಾನೆಯೇ? ಅವನು ಕೂಡ ಎದೆಯುಬ್ಬಿ, ನದಿಯಾಗಿ ಬಂದ ನೀರನ್ನು ಮರಳಿ ಅಪ್ಪುವನು. ಕರುಣಾಮಯಿ ಸಾಗರ. ನೀರೇ ಈ ನಿನ್ನ ನಿರಂತರ ಪಯಣ ಅನುಪಮ. 

Monday, October 17, 2022

आशा

एक चिंगारी थी धारण में 

जिसको थोड़ी सी हवा लगी 

तो मशाल बन के निकली हाथों मे 


तब तम थी और हवा धीमी थी 

आँखों को सिर्फ रोशनी दिखती थी 

और कदमों को राहे खुल जाती थी 


अब जाने कहां से आँधी निकली है 

मशाल ख़ुद डगमगा के रो रही है 

ना जाने कब आग लगे सफ़र को  


अब तो या यहां दिन निकले 

और मशाल के साथ,

मुझ को भी सुरज निगले 


या उम्मीद की बरसात हो जाये 

सारे मैल को फिसला दे धुलने को 

उसी बीज़ को भिगोये उगने को 


फिर निकालूँगा थाट से

उसी अमित रोशनी को जगाते 

एक नयी राह पे कदम उठाते ।

Thursday, September 1, 2022

ಕಟ್ಟೆ

ನದಿಗಳು ಪೃಥ್ವಿಯ ಜೀವನಾಡಿಗಳು.ಇಂತಹ ಜೀವನಾಡಿಯ ಮೇಲೆ ಮಾನವನ ನಿಯಂತ್ರಣ ಎಷ್ಟು ಸರಿ? ಆಧುನಿಕತೆ, ಆರ್ಥಿಕತೆ ಬಗ್ಗೆ ನಾವು ಎಷ್ಟೇ ಲಾಭ ತೋರಿಸಿದರೂ ಪ್ರಕೃತಿಯ ಹಾನಿಯನ್ನು ಕಡೆಗಣಿಸಬಾರದು. ಆಣೆಕಟ್ಟು ಮತ್ತು ಕಾಲುವೆಗಳ ಆರ್ಥಿಕ ಮತ್ತು ಸಾಮಾಜಿಕ ಲಾಭ-ನಷ್ಟ ವಿಷಯಗಳ ಚರ್ಚೆ ಆಚೆಗಿಟ್ಟು ಕೇವಲ ನಿಸರ್ಗದ ಮೇಲೆ ಅವುಗಳಿಂದ ಆಗುವ ಪರಿಣಾಮಗಳನ್ನು ಗಮನಿಸುವ ಕಾಲ ಈಗ ಬಂದಿದೆ.

ಹಿನ್ನೆಲೆ 

ಸಾವಿರಾರು ವರ್ಷಗಳಿಂದ ಮನುಷ್ಯ ಪರಿಸರದ ಜೊತೆ ಅನೇಕ ಪ್ರಯೋಗ, ಪ್ರಮಾದಗಳನ್ನು ಮಾಡಿಕೊಂಡು ಬಂದಿದ್ದಾನೆ. ಪ್ರಕೃತಿಯ ವ್ಯವಸ್ಥೆಯನ್ನೇ ತಿರುಚಲು ಪ್ರಯತ್ನಿಸಿದ್ದಾನೆ. ಕೃಷಿಗಾಗಿ ಅರಣ್ಯನಾಶ, ಅಭಿವೃದ್ಧಿ ಹೆಸರಿನಲ್ಲಿ ಕೈಗಾರೀಕರಣ, ಅದರಿಂದ ವಾತಾವರಣಕ್ಕೆ ವಿಷಾನಿಲ ಬಿಡುಗಡೆ, ನೀರು ಕಲುಷಿತಗೊಳಿಸುವುದು, ನೀರಿನ ಹರಿವು ನಿಯಂತ್ರಿಸುವುದು, ಇನ್ನೂ ಹತ್ತು ಹಲವು, ಲೆಕ್ಕವೇಯಿಲ್ಲ. ಇವುಗಳಲ್ಲಿ ನೀರಿನ ಹರಿವು ನಿಯಂತ್ರಣವೆಂದರೆ ಒಡ್ಡು, ಬದು, ಆಣೆಕಟ್ಟು ಕಟ್ಟುವುದು. ಮೇಲ್ನೋಟಕ್ಕೆ ಆಣೆಕಟ್ಟು ಬಹು ಉಪಯೋಗಿ ಎಂದು ಕಂಡರೂ, ಅದರ ಅಸ್ತಿತ್ವದ ಹಿಂದೆ ಪ್ರಕೃತಿಯ ಜೊತೆ ಹಲವು   ಸಮಸ್ಯೆಗಳಿವೆ. ಈ ವಿಚಾರವಾಗಿ ಆಣೆಕಟ್ಟಿನ ಲಾಭ ನಷ್ಟಗಳ ಲೆಕ್ಕಾಚಾರದ ಚರ್ಚೆ ಈಗ ಹೊಸದೇನಲ್ಲ. 

ಆಣೆಕಟ್ಟು ಆಧುನಿಕ ಜಗತ್ತಿನ ಕೊಡುಗೆಯೇನು ಅಲ್ಲ. ಜಾಗತಿಕ ಇತಿಹಾಸದ ಪುಟಗಳನ್ನು ನಾವು ಹುಡುಕಿದರೆ ಮೆಸೊಪಟ್ಯಾಮಿಯಾ ನಾಗರಿಕತೆಯಲ್ಲಿಯೇ ಮೊದಲ ಬಾರಿಗೆ ಹರಿಯುವ ನದಿಗೆ ಮಾನವನು ಕಟ್ಟೆ ಕಟ್ಟಿ, ನೀರಿನ ಹರಿವನ್ನು ನಿಯಂತ್ರಿಸಿದ ಎಂದು ತಿಳಿಯುತ್ತದೆ. ಇದು ಅಂದಾಜು ಕ್ರಿಸ್ತ ಪೂರ್ವ ೪ ನೇಯ ಶತಮಾನದ ಸುತ್ತ ಮುತ್ತ ಜೋರ್ಡಾನ್ ರಾಷ್ಟ್ರದಲ್ಲಿ ನಡೆದ ನಿರ್ಮಾಣ. ಅತೀ ಪುರಾತನ ಆಣೆಕಟ್ಟು ಅಥವಾ ಅಣೆಕಟ್ಟಿನ ಕುರುಹುಗಳು ಸಿಗುವುದು ಅಲ್ಲಿಯೇ, ಅದುವೇ  ಜಾವಾ ಅಣೆಕಟ್ಟು. ಆಗ ಆಣೆಕಟ್ಟಿನ ಉದ್ದೇಶವು ಕೇವಲ ಪ್ರವಾಹ ಪರಿಸ್ಥಿತಿಯ ನಿಯಂತ್ರಣ ಆಗಿತ್ತು. ಆದರೆ ಸಮಯ ಉರುಳಿದಂತೆ ಮನುಷ್ಯನ ಜ್ಞಾನ ವೃದ್ಧಿಸಿದಂತೆ, ಅವನ ಅವಶ್ಯಕತೆಗಳು ಬದಲಾದವು. ಅವನ ಬಯಕೆಗಳು ಹೆಚ್ಚಾದವು. ಆ ಅವಶ್ಯಕತೆ, ಬಯಕೆಗಳಿಗೋಸ್ಕರ ಕಾರ್ಯಸಾಧನೆ, ಕಾರ್ಯಸಿದ್ಧಿಗಳು ಬದಲಾಗುತ್ತಾ ಹೋದವು. ಕಾಲಾಂತರದಲ್ಲಿ ಬಂದ ವಿಜ್ಞಾನಿಗಳು ಹರಿಯುವ ನೀರಿನಲ್ಲಿ ಚಲನ ಶಕ್ತಿ ಇರುತ್ತದೆ, ಅದನ್ನು ನಾವು ಯಾಂತ್ರಿಕ ಬಲದ ರೂಪಕ್ಕೆ ಪರಿವರ್ತಿಸಬಹುದು ಎಂದು ಕಂಡು ಹಿಡಿದರು. ಈ ಯಾಂತ್ರಿಕ ಬಲವನ್ನು ವಿವಿದೊದ್ದೇಶಕ್ಕೆ ಬಳಸಬಹುದು, ಇದು ಮನುಕುಲವನ್ನು ಉದ್ಧಾರ ಮಾಡುತ್ತದೆ, ಎಂಬ ಯೋಚನೆ ಹೆಚ್ಚಾಯಿತು. ಇಂತಹ ಸಂಶೋಧನೆಗಳೇ ಚಿಕ್ಕ ಕಟ್ಟೆಗಳಿಂದ ಆಚೆ ಬಂದು ಬೃಹತ್ ಗಾತ್ರದ ಅಣೆಕಟ್ಟೆಗಳ ನಿರ್ಮಾಣಕ್ಕೆ ಪ್ರೇರಣೆ ಕೊಟ್ಟವು. ಆಗ ಆಣೆಕಟ್ಟಿನ ಎರಡೂ ಮಗ್ಗುಲುಗಳು ಅಂದರೆ ಆರ್ಥಿಕ ಲಾಭದ ಜೊತೆ ನೈಸರ್ಗಿಕ ನಷ್ಟದ ಬಗ್ಗೆ ಎಷ್ಟರಮಟ್ಟಿಗೆ ಯೋಚಿಸಿದರೋ ತಿಳಿಯದು, ಆದರೆ ಬೃಹತ್ ಆಣೆಕಟ್ಟುಗಳನ್ನು ಎಲ್ಲ ದೇಶಗಳು ನಿರ್ಮಿಸಲು ಪ್ರಾರಂಭಿಸಿದವು. ಅಷ್ಟೇ ಅಲ್ಲ ನೀರಿನ ಪ್ರಾಕೃತಿಕ ಅಸಮತೋಲನ ಸಮಸ್ಯೆ ನೀಗಿಸಲು ಹಲವು ತರಹದ ನೀರಾವರಿ ಯೋಜನೆಗಳೂ ಬಂದವು.

ನಮ್ಮ ಪೂರ್ವಜರು ಮಾಡಿದ್ದೆಲ್ಲ ಒಳ್ಳೆಯದೇ ಎಂದು ಸುಖಾ ಸುಮ್ಮನೆ  ಒಪ್ಪಿ ಅಪ್ಪಿಕೊಂಡರೆ, ಅದು ಅಪ್ಪ ನೆಟ್ಟ ಆಲದ ಮರಕ್ಕೆ ನಾವು ನೇಣು ಬಿಗಿದಂತೆ. ಕಾಲ ಕಳೆದಂತೆ ಪೂರ್ವಜರ ಕೆಲಸಗಳ ಜೊತೆ ನಮ್ಮ ಈಗಿನ ಪರಿಸ್ಥಿತಿಯನ್ನು ಅವಲೋಕಿಸಿ ನಾವು ಜಾಣ ಹೆಜ್ಜೆ ಇಡಬೇಕು.     

ಬಹಳ ಕಾಲದವರೆಗೆ ಅಂದರೆ ಇತ್ತೀಚಿನ ಕೆಲವು ವರ್ಷಗಳವರೆಗೂ ಆಣೆಕಟ್ಟುಗಳನ್ನು ಮಾನವನ ಜಾಣ್ಮೆ, ಹಿರಿಮೆ, ದಕ್ಷತೆಯ ಸಂಕೇತಗಳೆಂದೇ ಬಿಂಬಿಸಲಾಗಿತ್ತು. ಆದರೆ ಅನೇಕ ಕಾರಣಗಳಿಂದ ಪರಿಸರದ ಮೇಲೆ ಆಗುವ ಕೆಲವು ಪ್ರತಿಕೂಲ ಪರಿಣಾಮಗಳನ್ನು ಕಂಡ ಮೇಲೆ ಪರಿಸರ ಪ್ರೇಮಿಗಳು ಅಣೆಕಟ್ಟಿನ ಮತ್ತೊಂದು ಮಗ್ಗುಲಿನ ಬಗ್ಗೆ ಯೋಚಿಸತೊಡಗಿದರು. ಅವರು ಪರಿಸರದ ಬಗ್ಗೆ ಕಾಳಜಿ ತೋರಿಸುತ್ತಾ, ಒಂದು ಬೇರೆಯ ವಿಚಾರವನ್ನೇ ಮಂಡಿಸ ತೊಡಗಿದರು. 

೧೮೮೨ರಲ್ಲೇ ಅಮೆರಿಕಾದಲ್ಲಿ ಮೊದಲ ಜಲವಿದ್ಯುತ್ ಶಕ್ತಿಯ ಸ್ಥಾವರ ನಿರ್ಮಿಸಲಾಯಿತು. ಜಲವಿದ್ಯುತ್ ಶಕ್ತಿ ಉತ್ಪಾದನೆ ಒಂದು ನವೀಕರಿಸಬಹುದಾದ ಸಂಪನ್ಮೂಲದ ಬಳಕೆ ಎಂದು ಕೆಲವು ಜನ ವಾದಿಸುತ್ತಾರೆ. ಆದರೆ ಇಂತಹ ಯೋಜನೆಗಳಿಂದ ಆಗುವ  ಲಾಭಕ್ಕಿಂತ ಅದರಿಂದ ಸುತ್ತಲಿನ ಪರಿಸರದ ಮೇಲೆ ಆಗುವ ಅಡ್ಡ ಪರಿಣಾಮಗಳೇ ಹೆಚ್ಚು. ಈ ವಿಷಯದ ಕುರಿತು ಈಗ ಕೆಲವು ಜನರು ವಿಚಾರ, ಚರ್ಚೆ ಮಾಡುತ್ತಿದ್ದಾರೆ.

ಆಣೆಕಟ್ಟು ನಿರ್ಮಿಸಿದರೆ ಅಣೆಕಟ್ಟಿನ ಕೆಳಮಟ್ಟದಲ್ಲಿ ನೀರಿನ ಹರಿವು ಕಡಿಮೆಯಾಗಿ, ಆ ಪ್ರದೇಶದಲ್ಲಿ ಇರುವ  ಜೀವ ವೈವಿಧ್ಯತೆಗೆ ಧಕ್ಕೆಯಾಗುವುದು ಎಂಬ ವಾದ ಶುರುವಾಯಿತು. ಆಣೆಕಟ್ಟು ನಿರ್ಮಾಣ ಒಂದು ರೀತಿಯಿಂದ ನದಿಯ ವಿಘಟನೆಯ ಕೆಲಸ. ಈ ವಿಘಟನೆ ನದಿಯ ಪಾತ್ರದಲ್ಲಿರುವ ಪರಿಸರ ವ್ಯವಸ್ಥೆಯ ಅಂಗಗಳಾದ ಜನವಸತಿ ಅಲ್ಲದೇ ಪ್ರಾಣಿಸಂಕುಲಕ್ಕೂ ಆತಂಕಕಾರಿ. ಸರಳವಾಗಿ ಹರಿಯುವ ನದಿಗಳು ಸಾವಿರಾರು, ಲಕ್ಷಾಂತರ ಜನರಿಗೆ ಆಹಾರ ಒದಗಿಸುವುದಲ್ಲದೇ ಇನ್ನೂ ಹತ್ತಾರು ಉಪಯೋಗಗಳನ್ನು ಮಾಡಿಕೊಡುತ್ತಿತ್ತು. ಆದರೆ ಆಣೆಕಟ್ಟಿನಿಂದ ಅದೆಲ್ಲ ಏರುಪೇರಾಯಿತು. ಆಣೆಕಟ್ಟಿನ ಹಿನ್ನಿರಿನ ಪಾತ್ರದಲ್ಲಿ  ನದಿಯ ಎಡ ಮತ್ತು ಬಲಗಡೆ ಭಾಗಗಳಲ್ಲಿ ಕಾಲುವೆಗಳನ್ನು ನಿರ್ಮಿಸಿದರು. ಇದರಿಂದ ನೀರಾವರಿ ಪ್ರದೇಶ ಹೆಚ್ಚುಗೊಳಿಸಿದೆವು ಎಂಬುದು ವಾದ. ಈ ರೀತಿ ಮಾಡುವದರಿಂದ ಒಣ ಪ್ರದೇಶಗಳಲ್ಲಿ ಕೂಡ ನದಿಯ ಹರಿದಂತೆ ಅಲ್ಲವೇ? ಕಾಲುವೆ ಕೂಡ ಭಾಗಶಃ ನದಿಯ ಕೆಲಸವನ್ನೇ ಮಾಡುತ್ತವೆ ಅಲ್ಲವೇ? ಎಂದು ಕೇಳುವವರ ಒಂದು ಗುಂಪು ಇದೆ. ಆದರೆ ಮೂಲ ನದಿ ಹರಿಯುವ ದಿಕ್ಕನ್ನು ಬದಲಿಸಿ, ಅನೈಸರ್ಗಿಕವಾಗಿ ನೀರಿನ ಹರಿವನ್ನು ಬೇರೆಯದೇ ದಿಕ್ಕಿಗೆ ಹರಿಸಿದರೇ ಅದು ಮತ್ತೊಂದು ಸಮಸ್ಯೆಯನ್ನು ಬಿಡಿಸಿಡುತ್ತವೆ. ಇದರಿಂದ ರೈತರಿಗೆ ಬಲು ಲಾಭವಿದೆ ಎಂದು ತುಂಬಾ ಜನ ಅಂದುಕೊಂಡಿದ್ದಾರೆ. ಕಾಲುವೆಗಳ ಲಾಭ ಬಹುಶಃ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಅದರ ಅಡ್ಡ ಪರಿಣಾಮಗಳು ಗೌಣವಾಗಿವೆ.        

ಕಾಲುವೆಗಳ ಪರಿಣಾಮ
  • ಮಾನವನ ಹಸ್ತಕ್ಷೆಪವಿಲ್ಲದೇ ಇದ್ದರೇ ನೈಸರ್ಗಿಕವಾಗಿ ಹರಿಯುತ್ತಿದ್ದ ನೀರು ತನ್ನದೇ ಆದ ನೆಲ-ಜಲದ ಸಮತೋಲನ ಸಂಬಂಧ ಹೊಂದಿರುತ್ತದೆ. ಇದನ್ನು ಒಂದು ರೀತಿಯ ನೀರಿನ ಸ್ವಾಭಾವಿಕ ಸರಿಯಾದ ಹಂಚಿಕೆ ಅನ್ನಬಹುದು. ಆಣೆಕಟ್ಟು ಮತ್ತು ಕಾಲುವೆಗಳ ನಿರ್ಮಾಣದಿಂದ ನೀರಿನ ಪ್ರಾಕೃತಿಕ ಹಂಚಿಕೆ ಏರುಪೇರಾಗಿ ಕಾಲುವೆಯಿದ್ದ ಪ್ರದೇಶದಲ್ಲಿ ಅಧಿಕ ನೀರು ಮತ್ತು ನದಿಯ ತಳಮಟ್ಟದಲ್ಲಿ ನೀರಿನ ಅಭಾವವನ್ನು ಸೃಷ್ಟಿಸುತ್ತದೆ. ಇದರಿಂದ ಭೂಮಿಯ ಅಂರ್ತಜಲದ ಹರಿವು ಅದಲು ಬದಲಾಗಿ,  ಭೂಮೆಲ್ಪದರದಲ್ಲಿ ಲವಣಾಂಶ/ಕ್ಷಾರದ ಅಂಶ ಸರಿದೂಗದೆ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಈ ಪರಿಣಾಮ ಕಾಣಲು ಬಹಳ ವರ್ಷಗಳವರೆಗೆ ಕಾಯುವ ಅವಶ್ಯಕತೆಯೇನಿಲ್ಲ. ಬಲು ಬೇಗನೆ ಇದರ ನಷ್ಟಗಳು ಗೋಚರವಾಗುತ್ತವೆ. ಇಂತಹ ಪಕ್ಷದಲ್ಲಿ ಭೂಮಿಯು ಫಲವತ್ತತೆಯನ್ನು ಕಳೆದುಕೊಂಡರೆ, ಇಳುವರಿಯಿಲ್ಲದೆ ಕೃಷಿಗೆ ಪೆಟ್ಟು ಬೀಳಬಹುದು. ಇದು ಪ್ರತಿ ರೈತನ ವೈಯಕ್ತಿಕ ಜಮೀನಿಗೆ ಸಂಬಂಧಿಸಿದ ನಷ್ಟ. ಸರಳವಾಗಿ ಹೇಳಬೇಕೆಂದರೆ  ಕಾಲುವೆಗಳಿಂದ ಅವುಗಳ ಆಸುಪಾಸಿನ ಭೂಮಿಯು ಜವುಗುಗಟ್ಟಿ, ಅಪ್ರಯೋಜಕವಾಗಬಹುದು. ಇದು ರೈತರಿಗೆ ಇನ್ನೊಂದು ರೀತಿಯ ಆರ್ಥಿಕ ನಷ್ಟ ತಂದುಕೊಡಬಹುದು.
  • ನೀರು ಸದಾ ಹರಿಯುತ್ತ ಇರಬೇಕು, ಅದು ನೀರಿನ ಗುಣ. ಹರಿವ ನೀರು ತನ್ನಷ್ಟಕ್ಕೆ ತಾನೇ ಶುದ್ಧಿಕರಿಸಿಕೊಂಡು ಹರಿಯುತ್ತದೆ. ಆದರೆ ಆಣೆಕಟ್ಟು ಮತ್ತು ಕಾಲುವೆಗಳಲ್ಲಿ ನೀರನ್ನು ತಡೆಹಿಡಿದರೇ, ಅಲ್ಲಿ ನೀರಿನಿಂದ ಕ್ರಿಮಿ, ಜಲಕೀಟ, ಸೊಳ್ಳೆಗಳ ಬಾಧೆ ಅಧಿಕವಾಗುತ್ತದೆ. ಇದು ಸುತ್ತಮುತ್ತಲಿನ ಜಾಗಗಳಲ್ಲಿ ಹಲವು ಬಗೆಯ ರೋಗಗಳ ಬೆಳವಣಿಗೆಗೆ ತಳಹದಿಯಾಗಬಹುದು.
  • ಅಣೆಕಟ್ಟೆಯ ಹಿಂದಿನ ಮತ್ತು ಕಾಲುವೆಗಳ ಹತ್ತಿರ ಹೇರಳ ನೀರಿನ ಲಭ್ಯತೆಯಿರುವದರಿಂದ ರೈತರು ಅಧಿಕ ಲಾಭದ ಬೆಳೆ ಮತ್ತು ಹೆಚ್ಚು ಇಳುವರಿಯ ಆಸೆಗೆ ಬಲಿಯಾಗುತ್ತಾರೆ. ಇದು ಸ್ಥಳೀಯ ಬೆಳೆಗಳನ್ನು ನಿರ್ಲಕ್ಷಿಸುವ ಮೊದಲ ಹೆಜ್ಜೆ.  ಇಂತಹ ಬೆಳೆಗಳಿಂದ ಮತ್ತೊಂದು ಪ್ರಾಕೃತಿಕ ಆಹಾರದ ಅಸಮತೊಲನ ತಲೆದೋರಬಹುದು. ಆದಾಗಲೇ ನಾವು ನೋಡುತ್ತಿದ್ದಂತೆ ಕಡಿಮೆ ಮಳೆ ಅಥವಾ ಬರಗಾಲದ ಬೆಳೆಗಳಾದ ಸಿರಿಧಾನ್ಯಗಳ ಅಭಾವ. ನಮ್ಮ ಹಿಂದಿನ ಜನಾಂಗ ಎಷ್ಟು ಸಿರಿಧಾನ್ಯಗಳನ್ನು ಬೆಳೆದು ಬಳಸುತ್ತಿದ್ದರು, ಅಷ್ಟು ಪ್ರಮಾಣದಲ್ಲಿ ನಾವು ಈಗ ಬೆಲೆಯುತ್ತಿಲ್ಲ. ಇದು ಮಾನವನ ಆರೋಗ್ಯದ ಮೇಲೆಬೀರುವ ಪರಿಣಾಮ.  ಇದು ಒಂದು ಚಿಕ್ಕ ಉದಾಹರಣೆ.
  • ಕಾಲುವೆಗಳು ಮಾನವ ನಿರ್ಮಿತವಾದ್ದರಿಂದ, ಅಲ್ಲಿ ಮಾನವನ ನಿರ್ವಹಣೆ ಅವಶ್ಯಕ, ಒಂದು ವೇಳೆ ಕಾಲುವೆಗಳ ನಿರ್ವಹಣೆ ಸರಿಯಾಗಿ ಆಗದಿದ್ದರೆ, ಅವುಗಳಲ್ಲಿ ಕೆಸರು/ಹೂಳು ತುಂಬಿಕೊಳ್ಳುವ ಸಾಧ್ಯತೆ ಹೆಚ್ಚು. ಇದು ಕಾಲುವೆಗಳ ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಆಗ ಅಂದುಕೊಂಡಷ್ಟು ನೀರಿನ ಹಂಚಿಕೆ ಆಗದೇಯಿರಬಹುದು.
  • ರೈತರು ಹಲವು ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬಂದ  ಸಾಗುವಳಿಯಿದ್ದ ಭೂಭಾಗವನ್ನು ಕಾಲುವೆಗಳು ಕಬಳಿಸುತ್ತವೆ. ಇದನ್ನು ತಾತ್ಕಾಲಿಕ ಸಮಸ್ಯೆಯೆಂದು ಕದೆಗಾಣಿಸಲಿಕ್ಕೆ ಆಗಲ್ಲ.
  • ಆಣೆಕಟ್ಟಿನಲ್ಲಿ ಸಾಕಷ್ಟು ನೀರಿನ ಒಳಹರಿವು ಇದ್ದಾಗ ಮಾತ್ರ ಕಾಲುವೆಗಳಲ್ಲಿ ನೀರು ಬಿಡಲಾಗುವುದು, ಇದು ಮಳೆ ಆಧಾರಿತ. ಆದ್ದರಿಂದ ಇದು ಅನಿಶ್ಚಿತತೆಗೆ ಎಡೆ ಮಾಡಿಕೊಡುತ್ತದೆ. ಮಳೆ ಚೆನ್ನಾಗಿ ಆದರೆ ಕಾಲುವೆಗಳಲ್ಲಿ ನೀರು. ರೈತರು ಯಾವಾಗಲೂ ಕಾಲುವೆ ಮೇಲೆ ಅವಲಂಭಿಸಿ ಇರಲಾಗದು. ಹಾಗಾದರೆ ಎಲ್ಲ ಕಡೆಗೂ ಮಳೆ ಹೆಚ್ಚು ಆಗಲು ಏನು ಮಾಡಬೇಕು? ಕಾಡು ಬೆಳೆಸಬೇಕು, ಅದು ಬೇರೆಯ ಚರ್ಚೆ.
ಕಾಲುವೆಗಳ ನಿರ್ಮಾಣದಿಂದ ತಾತ್ಕಾಲಿಕ ಲಾಭ ಕಂಡರೂ, ದೀರ್ಘಕಾಲದಲ್ಲಿ ಅವುಗಳ ನಷ್ಟಗಳೇ ಹೆಚ್ಚು.

ಚಿಕ್ಕ ಚೆಕ್ ಡ್ಯಾಮ್, ಬದುಗಳು, ನಾಲಬಂದುಗಳಿಂದ ಅಷ್ಟೇನೂ ಹಾನಿಯಾಗದು. ಆದರೆ ದೊಡ್ಡ ಆಣೆಕಟ್ಟುಗಳ ಬಗ್ಗೆ ನೋಡುವುದಾದರೆ, ಅದರ ಅಡ್ಡ ಪರಿಣಾಮಗಳು ಹೆಚ್ಚು ಮತ್ತು ಅವು ಕಾಲುವೆಗಳ ಸಮಸ್ಯೆಗಿಂತ ಸ್ವಲ್ಪ ಭಿನ್ನ. ಆಣೆಕಟ್ಟು ನಿರ್ಮಾಣದಿಂದ ಪ್ರಕೃತಿಯ ಮೇಲೆ  ಹಲವು ಅಡ್ಡ ಅಥವಾ ದುಷ್ಪರಿಣಾಮಗಳು ಇವೆ. 
ಅಣೆಕಟ್ಟಿನ ಹಿಂದಿನ ಭಾಗದಲ್ಲಿ ತಡೆಹಿಡಿದ ನೀರಿನಿಂದ ಅನೇಕೆ ಪ್ರದೇಶಗಳು ನೀರಿಗೆ ಆಪೋಶನವಾಗುತ್ತವೆ. ಈ ಹಿನ್ನೀರಿನಲ್ಲಿ  ಸಸ್ಯಕುಲ ಮುಳುಗಿ ನಾಶವಾಗುವವು. ನೀರಿನಲ್ಲಿರುವ ಬ್ಯಾಕ್ಟೆರಿಯಾಗಳು ಇಂತಹ ಸತ್ತು ಕೊಳೆತ ಸಸ್ಯರಾಶಿಯ ಜೊತೆ ರಾಸಾಯನಿಕ ಕ್ರಿಯೆ ಹೊಂದಿ ಹಸಿರುಮನೆ ಅನಿಲ(Green House Gas)ಗಳಾದ ಇಂಗಾಲದ ಡೈಆಕ್ಸೈಡ್ ಮತ್ತು ಮಿಥೆನ್ ಗಳನ್ನು ತಯಾರಿಸುತ್ತವೆ. ಈ ಅನಿಲಗಳು ಇಂಗಾಲದ ಡೈಆಕ್ಸೈಡ್ ಮತ್ತು ಇತರ ಗುಳ್ಳೆಗಳಾಗಿ ಆಣೆಕಟ್ಟಿನ ತಡೆಹಿಡಿದ ನೀರನ ಮೇಲೆ ಬಂದು ವಾತಾವರಣಕ್ಕೆ ಸೇರಿಕೊಳ್ಳುತ್ತವೆ. ಅಷ್ಟೇ ಅಲ್ಲದೇ ವ್ಯವಸಾಯದ ಜಮೀನಿನಲ್ಲಿ ಬಳಸಿದ ರಾಸಾಯನಿಕ ಗೊಬ್ಬರಗಳಲ್ಲಿರುವ ಸಾರಜನಕ ಅಥವಾ ರಂಜಕ (Nitrogen or Phosporus) ಮಳೆ ನೀರಿನಿಂದ ಹರಿದು ಬಂದು ಆಣೆಕಟ್ಟೆಗೆ ಸೇರಿಕೊಳ್ಳುತ್ತವೆ. ಈ ಅನಿಲಗಳು ಕೂಡ ಮೇಲೆ ಹೇಳಿದ ರೀತಿಯಲ್ಲಿ ಮತ್ತಷ್ಟು ವಿಷಾನಿಲ ವಾತಾವರಣಕ್ಕೆ ಸೇರುವ ಹಾಗೆ ಮಾಡುತ್ತವೆ. ಇದೆಲ್ಲ ಸೇರಿ ಜಾಗತಿಕ ತಾಪಮಾನ (Global Warming) ಏರಿಕೆಗೆ ಕೊಡುಗೆ ನೀಡುತ್ತವೆ. ಇದು ನಿಧಾನವಾಗಿ ಆದರೂ ನಿರಂತರವಾಗಿ ನಡೆಯುವ ಪ್ರಕ್ರಿಯೆ.  

ಜಲಚರಗಳ ಮೇಲೆ ಪರಿಣಾಮ - ಅಣೆಕಟ್ಟುಗಳ ನಿರ್ಮಾಣದಿಂದ ಜಲಚರಗಳ ಮೇಲೆ ಅಧಿಕ ದುಷ್ಪರಿಣಾಮ ಬೀರುತ್ತದೆ. ಹರಿವ ನೀರಿನಲ್ಲಿ ಇರುವ ಪ್ರಾಣಿಗಳ ಗುಣಧರ್ಮ ಆಣೆಕಟ್ಟಿನಿಂದ ಬದಲಾಗುತ್ತದೆ. ನಿಂತ ನೀರಿನಲ್ಲಿ ಅವು ಅಭಿವೃದ್ಧಿಹೊಂದದೆ ಇರಬಹುದು, ಅಷ್ಟೇ ಏಕೆ, ಕೆಲವು ಸಂತತಿಗಳು ನಶಿಸಿ ಕೂಡ ಹೋಗಬಹುದು. ಆಣೆಕಟ್ಟಿನ ಹಿಂಭಾಗ ಸಹಜವಾಗಿ ಹೂಳು ತುಂಬುತ್ತದೆ. ಇದು ಯಾರ ಕಣ್ಣಿಗೂ ಕಾಣದೆಯಿರುವದರಿಂದ ಯಾರೂ ಹೂಳು ಎತ್ತುವ ಕೆಲಸಕ್ಕೆ ಕೈಹಾಕುವುದಿಲ್ಲ. ಅಲ್ಲದೇ ಇದು ಸ್ವಲ್ಪ ಕಷ್ಟದ ಕೆಲಸ.  ಹರಿವ ನೀರಿನಲ್ಲಿ ಸ್ವಚ್ಚಂದವಾಗಿ ಇದ್ದ ಜಲಚರಗಳು ಹೂಳು ತುಂಬಿದ ನೀರಿನಲ್ಲಿ ಸ್ವಚ್ಚಂದವಾಗಿ ವಿಹರಿಸಿ ಜೀವಿಸಲಾರವು. ಇದು ಜೀವವೈವಿಧ್ಯತೆಗೆ ಧಕ್ಕೆ ತರುತ್ತದೆ. ಉದಾಹರಣೆಗೆ ಹರಿವ ನದಿ ನೀರಿನಲ್ಲಿ ವಲಸೆ ಹೋಗುವ ಮೀನುಗಳು, ಸಾಮಾನ್ಯವಾಗಿ ತಾವು ಇರುವ ಜಾಗದಿಂದ ಮತ್ತೊಂದು ಕಡೆ ವಲಸೆ ಹೋಗಿ ಸಂತಾನೋತ್ಪತ್ತಿ ಮಾಡುತ್ತಿರುತ್ತವೆ. ಆದರೆ ತಡೆಹಿಡಿದ ನೀರಿನಿಂದ ಈ ಮೀನುಗಳಿಗೆ ವಲಸೆಹೋಗಲು ಅವಕಾಶಯಿರುವುದಿಲ್ಲ. ಆಗ ಅವುಗಳ ಸಂತಾನ ಅಭಿವೃದ್ಧಿ ಹೊಂದದೆಯಿರಬಹುದು. ಸಂತಾನ ಉತ್ಪತ್ತಿಯಿಲ್ಲದಿದ್ದರೆ ಕಾಲಾಂತರದಲ್ಲಿ ಇಂತಹ ತಳಿಗಳು ನಶಿಸಿಹೋಗಬಹುದು.   

ನದಿಪಾತ್ರಗಳ ಮೇಲೆ ಪರಿಣಾಮ - ನದಿಗಳು ಎತ್ತರ ಪ್ರದೇಶದಿಂದ ತಗ್ಗು ಪ್ರದೇಶಗಳಿಗೆ ಹರಿಯುವಾಗ ಫಲವತ್ತಾದ ಮಣ್ಣನ್ನು ಹೊತ್ತುತರುತ್ತವೆ. ಒಂದು ವೇಳೆ ಅವುಗಳಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿದರೆ ಈ ರೀತಿ ಬರುವ ಮಣ್ಣು ತಡೆಹಿಡಿದು ತಗ್ಗು ಪ್ರದೇಶ ತಲುಪದಂತೆ ಮಾಡಿದಂತಾಗುತ್ತದೆ. ಇದು ಮುಂದೆಯಿರುವ ತಗ್ಗು ಪ್ರದೇಶಗಳಿಗೆ ಫಲವತ್ತಾದ ಮಣ್ಣು ಬರದಂತೆ ತಡೆಯುತ್ತದೆ.ಸಾಕಷ್ಟು ಪ್ರಮಾಣದ  ಮಣ್ಣು ಆಣೆಕಟ್ಟಿನಿಂದ ಈಗ ವ್ಯರ್ಥವಾಗಿ ಹೂಳಾಗಿ ಹೋಗುವುದು.  

ಅಷ್ಟೇ ಅಲ್ಲ ನೀರಿನ ಪ್ರಾಕೃತಿಕ ಅಸಮತೋಲನ ಸಮಸ್ಯೆ ನೀಗಿಸಲು ಹಲವು ತರಹದ ನೀರಾವರಿ ಯೋಜನೆಗಳು ಬಂದವು. (ಇದು ಪ್ರಾಕೃತಿಕ ನೀರಿನ ಅಸಮತೊಲನವೋ ಅಥವಾ ಪ್ರಕೃತಿಯ ನಿಯಮವೋ ಬೇರೆಯದೇ ಚರ್ಚೆ.) ತದನಂತರ ಕೈಗಾರಿಕಾ ಕ್ರಾಂತಿಯಲ್ಲಿ, ನೀರಾವರಿ ಅಥವಾ ದೊಡ್ಡ ಆಣೆಕಟ್ಟುಗಳ ಯೋಜನೆಗಳು ಇನ್ನಷ್ಟು ಮುಂಚೂಣಿಗೆ ಬಂದವು.

ಕಟ್ಟೆ ಒಡೆಯುವಿಕೆ

ಮುಂದುವರೆದ ದೇಶಗಳೆಂದು ಯಾವವುಗಳನ್ನು ನಾವು ಕಣ್ಣು ಮುಚ್ಚಿ ಹಿಂಬಾಲಿಸುತ್ತೇವೋ ಆ ದೇಶಗಳು ಈಗ ಆಣೆಕಟ್ಟಿನ ಬಗ್ಗೆ ಏನು ಅಭಿಪ್ರಾಯ ಹೊಂದಿವೆ ಎಂದು ನೋಡೋಣ ಬನ್ನಿ. 

ಎಲ್ಲಾ ಅಣೆಕಟ್ಟುಗಳು ಜಲ ಪರಿಸರವನ್ನು ಹದಗೆಡಿಸುತ್ತವೆ, ಆದರೆ ಆ ಕೆಟ್ಟ ಪರಿಣಾಮಗಳನ್ನು ಜಲ ವಿದ್ಯುತ್ ಸ್ಥಾವರ ನಿರ್ಮಾಣ, ನೀರಾವರಿ ಪ್ರದೇಶ ಹೆಚ್ಚಿಸುವಿಕೆ, ಪ್ರವಾಹ ನಿಯಂತ್ರಣ ಎಂಬ ನಾನಾ ಸೋಗಿನಡಿಯಲ್ಲಿ ಮುಚ್ಚಿಹಾಕಲಾಗುತ್ತದೆ. ಕೆಲವು ದೇಶಗಳು ಪರಿಸರದ ಮೇಲೆ ಆಗುವ ನಿಜವಾದ ಪರಿಣಾಮಗಳನ್ನು ಅರಿತಾಗ ತಾವೇ ಕಟ್ಟಿದ ಅಣೆಕಟ್ಟುಗಳನ್ನು ಸ್ವತಃ ತಾವೇ ಒಡೆಯಲು ಮುಂದಾದರು.

ಎಲ್ವಾ
ಅಮೆರಿಕೆಯ ಎಲ್ವಾ ನದಿಯಲ್ಲಿ  ಆದ ಅಸಮತೋಲನ ಮನಗಂಡು


ಕಾವೇರಿ
ಅಷ್ಟೆಲ್ಲಾ ದೂರ ಏಕೆ? ಇಲ್ಲೇ ನಮ್ಮ ಪಕ್ಕದ ತಮಿಳುನಾಡು ಕೂಡ ಇಂತಹ  ಸಮಸ್ಯೆಯಿಂದ ಹೊರತಾಗಿಲ್ಲ . 
ತಮಿಳು ನಾಡಿನ ತಮಿರಬರನಿ  ನದಿಯಲ್ಲಿ ಲವಣಯುಕ್ತ ನೀರು ಪ್ರವೇಶವಾಗಿದೆ.

~ ಮುಂದುವರೆಯುವುದು (ಇನ್ನೂ ತುಂಬಾ  ಹೇಳಲಿಕ್ಕೆ ಇದೆ, ಮುಂದೆ ಬರೆಯುವೆ)