ನನ್ನ ಮನಸ್ಸು ಹೇಗಿದೆ ಅಂದರೆ, ಅದೊಂಥರಾ ವಿಚಿತ್ರ. ಈಗ ಸಮಯ ಇದೆ, ಏನೂ ಕೆಲಸವಿಲ್ಲ, ಏನಾದರು ಬರೆಯೋಣ ಅಂತ ಕುಳಿತರೆ, ತಲೆಗೆ ಏನು ಬರೆಯಬೇಕು ಅಂತ ಹೊಳೆಯೋದೆಯಿಲ್ಲ. ಬ್ಲಾಗ್ ನಲ್ಲಿ ಕನ್ನಡ ಬರಹ ಲಿಪಿ ತೆರೆದಿಟ್ಟು ವಿಚಾರ ಮಾಡ್ತಾ ಶೂನ್ಯದೆಡೆಗೆ ನೋಡುತ್ತಾ ಕುಳಿತುಕೊಳ್ಳೋದೇ ಆಗುತ್ತದೆ. ಇನ್ನು ಕೆಲವೊಂದು ಸಾರಿ ಪ್ರಯಾಣ ಮಾಡುವಾಗ ಅಥವಾ ಯಾವುದೊ ಔತಣ ಕೂಟದಲ್ಲಿ(ಪಾರ್ಟಿಯಲ್ಲಿ) ಇದ್ದಾಗ ಅಥವಾ ಇನ್ನ್ಯಾರ ಜೊತೆಗೋ ಏನೋ ಸಂಭಾಷಣೆ ನಡೆಸುವಾಗ ಕೆಲವೊಂದು ವಿಷಯಗಳು ತುಂಬಾ ಸ್ವಾರಸ್ಯಕರಯೆನಿಸಿ ಅದರ ಬಗ್ಗೆ ಬರೆಯಬೇಕು ಅನಿಸುತ್ತದೆ ಆದರೆ ಆಗ ಲೇಖನಿ-ಪೇಪರ್ರೂ ಇರಲ್ಲ, ಬ್ಲಾಗ್ ನಲ್ಲಿ ಇಳಿಸೋಣವೆಂದರೆ ಲ್ಯಾಪ್ ಟಾಪ್ ಕೂಡ ಇರಲ್ಲ. ಎಲ್ಲೋ ಕಂಡ ಸನ್ನಿವೇಶ ಅಥವಾ ಘಟನೆಗಳನ್ನು ಬರಹಕ್ಕಿಳಿಸೋಣವೆಂದರೆ ನಂತರ ಆ ವಿಷಯ ಕೂಡ ಮರೆತು ಹೋಗುತ್ತದೆ. ಮತ್ತೆ ಅದೇ ರಾಗ, ಅದೇ ಹಾಡು.
ಕಥೆ ಕಾದಂಬರಿ ಓದುವಾಗ ಮನಸ್ಸು ಕಥಾನಕದ ಪಾತ್ರಧಾರಿಯಾಗಿ ಒಮ್ಮೆ ನಲಿದರೆ ಇನ್ನೊಮ್ಮೆ ತಾನೇ ಸ್ವತ: ಕಥೆಗಾರನಾಗಿ ಲೇಖಕನ ಬರಹದ ಶೈಲಿಯನ್ನು ಗಮನಿಸಿ ವಿಶ್ಲೇಷಿಸತೊಡಗುತ್ತದೆ. ಈ ಶೈಲಿ ಚೆನ್ನಾಗಿದೆ ನಾನು ಇದನ್ನೇ ಅಳವಡಿಸಿಕೊಳ್ಳಬೇಕು ಅಥವಾ ಲೇಖಕ ಈ ರೀತಿ ಬರೆಯೋದಕ್ಕಿಂತ ಹಾಗೆ ಬರೆದರೆ ಚೆನ್ನಾಗಿತ್ತು ಎಂದು ಅನಿಸುತ್ತದೆ. ಈ ಮನಸ್ಸೇ ವಿಚಿತ್ರ, ಅದ್ಯಾಕೆ ಹೀಗಿದೆಯೊ? ನನ್ನ ಮನಸ್ಸಷ್ಟೇ ಹೀಗೋ ಅಥವಾ ನಿಮ್ಮದೂ ಕೂಡ ಹೀಗೆನಾ? ನಿಮಗೂ ಹೀಗೆ ಆಗಿದೆಯಾ?