Monday, August 12, 2013

ದೇವಸ್ಥಾನದ ಸುತ್ತ ಮೂರನೆಯ ಪ್ರದಕ್ಷಿಣೆ

ಮೂರನೆಯ ಪ್ರದಕ್ಷಿಣೆಯಲ್ಲಿ ಹೇಳುವದೆನೆಂದರೆ ನಾನು ದೇವಸ್ಥಾನಕ್ಕೆ ಹೋಗುವುದು ಸ್ವಲ್ಪ ಕಡಿಮೆಯೆ. ನಾನ್ಯಾಕೆ ದೇವಸ್ಥಾನಕ್ಕೆ ಹೆಚ್ಚು ಹೋಗುವದಿಲ್ಲ ಅನ್ನುವುದೇ ನನ್ನ ಮೂರನೆಯ ವಿಷಯ. ನಾವು ದೇವಸ್ಥಾನಕ್ಕೆ ಹೋಗದೆಯಿರುವದು ಹಿಂದೂ ಧರ್ಮದ ದೌರ್ಬಲ್ಯವೋ ಅಥವಾ ವಿಶೇಷತೆಯೋ ನನಗೆ ತಿಳಿದಿಲ್ಲ. ತಿಳಿದವರು ನನಗೆ ಸ್ವಲ್ಪ ತಿಳಿಸಿ ಹೇಳಬೇಕು. 

ನನ್ನ ವಿಚಾರದಲ್ಲಿ ಈ ಅಂಶವನ್ನು ನಮ್ಮ ಹಿಂದು ಧರ್ಮದ ವಿಶೇಷತೆಯೆಂದು ಹೇಳಬಹುದು. ನಮ್ಮ ಪೂರ್ವಿಕರು ಮತ್ತು ಹಿರಿಯರು ಹೇಳುವದೆನೆಂದರೆ ದೇವಸ್ಥಾನವಿಲ್ಲದಿದ್ದರೂ ತೊಂದರೆಯಿಲ್ಲ, ಪೂಜಿಸುವ ಮೂರ್ತಿಯಿಲ್ಲದಿದ್ದರೂ ಪರವಾಗಿಲ್ಲ,  ನಾವು ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ಬೆಳವಣಿಗೆ ಹೋ೦ದಬಹುದು ಎಂದು. ಇಷ್ಟಲಿಂಗ ಧರಿಸಿ ಕರಸ್ಥಲದಲ್ಲೇ ದೇವನನ್ನು ಪೂಜಿಸಬಹುದು ಎಂದು ಹೇಳಿದ್ದಾರೆ. ದೇವರು ಬೇಡ ಅವನ ಹಂಗೂ ಬೇಡ ಅವನ ನಾಮದ ಬಲವೊಂದಿದಿದ್ದರೆ ಸಾಕು ಎಂದಿದ್ದಾರೆ. ಬಾಲ ಪ್ರಹ್ಲಾದನ ಮೂಲಕ ದೇವರು ಎಲ್ಲೆಡೆಯೂ ಇರುವನು ಎಂದು ತೋರಿಸಿಕೊಟ್ಟಿದ್ದಾರೆ. ಇಷ್ಟಕ್ಕೂ ಇದೆಲ್ಲದರ ಅರ್ಥ, ದೇವರನ್ನು ನೀನು ಎಲ್ಲಿಯಾದರೂ ಕಾಣಬಹುದು ಮತ್ತು ನೀನೆಲ್ಲಿಯಿರುವೆಯೋ ಅಲ್ಲಿಯೇ ಅವನನ್ನು ಪೂಜಿಸು, ಭಜಿಸು ಎಂದು. ಅಂದರೆ ದೇವಸ್ಥಾನಕ್ಕೆ ಹೋಗಲೇಬೇಕು ಎನ್ನುವ ಅವಶ್ಯಕತೆಯೇನೂ ಇಲ್ಲ. ಇದು ನಮಗೆ ಕೊಟ್ಟ ಒಂದು ಸ್ವಾತಂತ್ರವಲ್ಲವೇ? ಇದು ನಮ್ಮ ಧರ್ಮದ ವಿಶೇಷತೆಯಲ್ಲವೇ? 


ಇದೆ ಅಂಶವನ್ನು ದೌರ್ಬಲ್ಯವೆಂದು ಯಾಕೆ ಹೇಳಬೇಕೆಂದರೆ ನಮ್ಮ ಧರ್ಮದಲ್ಲಿ ದೇವಸ್ಥಾನಕ್ಕೆ ಹೋಗಲೇಬೇಕು ಎಂದು ಯಾವುದೇ ಧಾರ್ಮಿಕ ಗುರು ಅಥವಾ ಸ್ವಾಮೀಜಿ ಅಥವಾ ಹಿರಿಯರು ಒತ್ತಾಯಿಸುವದಿಲ್ಲ. ಪ್ರಾರ್ಥನೆ ಕಡ್ಡಾಯವೆಂದು ನಿಯಮ ಹೇರುವದಿಲ್ಲ. ಶನಿವಾರ ಹನುಮನ ಗುಡಿಗೆ ಹೋಗಬೇಕು, ಸೋಮವಾರ ಶಿವಾಲಯಕ್ಕೆ ಹೋಗಲೇಬೇಕು ಎಂದು ಯಾರೂ ಕಟ್ಟಪ್ಪಣೆ ಹಾಕುವದಿಲ್ಲ. ಇದನ್ನೇ ಬಳಸಿಕೊಂಡು ನಮ್ಮ ಜನ ದೇವಸ್ಥಾನಕ್ಕೆ ಹೆಚ್ಚಾಗಿ ಹೋಗುವದಿಲ್ಲ. ಆದರೆ ನಾವು ದೇವಸ್ಥಾನಕ್ಕೆ ಹೋಗದೆಯಿದ್ದರೆ, ದೇವಸ್ಥಾನದ ಅಭಿವೃದ್ಧಿಯಾಗುವದಾದರು ಹೇಗೆ? ದೇವಸ್ಥಾನಗಳನ್ನು ಹಿಂದೆ ಯಾರೋ ಪುಣ್ಯಾತ್ಮರು ಕಟ್ಟಿಸಿರಬಹುದು ಆದರೆ ಅವುಗಳ ಇಂದಿನ ನಿರ್ವಹಣೆ ಮತ್ತು ಅಭಿವೃದ್ಧಿ ಸಾಗುವದು ಭಕ್ತಾದಿಗಳಿಂದ. ಭಕ್ತರು ದೇವಸ್ಥಾನಗಳಿಗೆ ಹೋಗಿ ಪೂಜೆ ಪುನಸ್ಕಾರಗಳ ಜೊತೆ ಕಾಣಿಕೆ ಮತ್ತು ಸೇವೆಗಳನ್ನು ಸಲ್ಲಿಸುವದರಿಂದ. ಕಾಣಿಕೆಯು ನಗ ನಾಣ್ಯಗಳಾಗಿರಬಹುದು ಅಥವಾ ದೇವಕಾರ್ಯಕ್ಕೆ ಉಪಯೋಗಿಸುವ ವಸ್ತುಗಳಾಗಿರಲೂಬಹುದು. ಇದೆಲ್ಲ ಇಲ್ಲದಿದ್ದರೆ ದೇವಸ್ಥಾನ ಬೆಳೆಯುವದಾದರೂ ಹೇಗೆ ಬೆಳೆಯುವದು ಬಿಡಿ ದಿನ ನಿತ್ಯದ ವಿಧಿ ವಿಧಾನಗಳನ್ನು ನಿರ್ವಹಿಸುವದು ಕಷ್ಟ. ಈ ರೀತಿಯಾಗಿ ವಿವೇಚಿಸಿದಾಗ ಇದು ಹಿಂದು ಧರ್ಮದ ದೌರ್ಬಲ್ಯವೆಂದು ಕಾಣಬಹುದಲ್ಲವೇ?


ಇಷ್ಟಕ್ಕೂ ನಾವು ದೇವಸ್ಥಾನಗಳನ್ನು ಯಾಕೆ ಬೆಳೆಸಬೇಕೆಂದರೆ, ಧರ್ಮವನ್ನು ರಕ್ಷಿಸುವಲ್ಲಿ ದೇವಸ್ಥಾನಗಳೇ ಮುಖ್ಯ ಪಾತ್ರವಹಿಸುತ್ತವೆ. ಇನ್ನು ಧರ್ಮ ರಕ್ಷಣೆಯಾಕಾಗಬೇಕು ಅಂದರೆ ಅದು ನಮ್ಮ ಸ್ವಂತ ರಕ್ಷಣೆಗೋಸ್ಕರವೇ ಹೊರತು ಬೇರೆಯೇನೂ ಅಲ್ಲ. ಯಾಕೆಂದರೆ "ಧರ್ಮೋ ರಕ್ಷತಿ ರಕ್ಷಿತ:" ಎಂದು ಸನಾತನಿಗಳು ಹೇಳಿದ್ದಾರೆ. ಅದಕ್ಕಾಗಿ ನಾನು ದೇವಸ್ಥಾನಕ್ಕೆ ಹೋಗುವದು ಕಡಿಮೆಯಾದರೂ ಕೂಡ, ಹೋದಾಗೊಮ್ಮೆ ಹುಂಡಿಗೆ ನನ್ನ ಕೈಲಾದಷ್ಟು ಕಾಣಿಕೆಯನ್ನು ಹಾಕಿಬರುತ್ತೇನೆ. ನಮ್ಮ ದೇವಸ್ಥಾನಗಳಿಗೆ ನಾವಲ್ಲದೇ ಬೇರಾರು ಸಹಾಯ ಮಾಡಿಯಾರು? ನೀವು ಕೂಡ ಕಾಣಿಕೆ ಹುಂಡಿಗೆ ನಿಮ್ಮ ಕೈಲಾದಷ್ಟು ಹಣವನ್ನು ಹಾಕಿರಿ. ಹುಂಡಿಯವರೆಗೆ ಬರುವಷ್ಟರಲ್ಲಿ ನನ್ನ ಮೂರನೆಯ ಪ್ರದಕ್ಷಿಣೆ ಮುಗಿಯಿತು.

Wednesday, August 7, 2013

ಮನಸು

ನನ್ನ ಮನಸ್ಸು ಹೇಗಿದೆ ಅಂದರೆ, ಅದೊಂಥರಾ ವಿಚಿತ್ರ. ಈಗ ಸಮಯ ಇದೆ, ಏನೂ ಕೆಲಸವಿಲ್ಲ,  ಏನಾದರು ಬರೆಯೋಣ ಅಂತ ಕುಳಿತರೆ, ತಲೆಗೆ ಏನು ಬರೆಯಬೇಕು ಅಂತ ಹೊಳೆಯೋದೆಯಿಲ್ಲ. ಬ್ಲಾಗ್ ನಲ್ಲಿ  ಕನ್ನಡ ಬರಹ ಲಿಪಿ ತೆರೆದಿಟ್ಟು ವಿಚಾರ ಮಾಡ್ತಾ ಶೂನ್ಯದೆಡೆಗೆ ನೋಡುತ್ತಾ ಕುಳಿತುಕೊಳ್ಳೋದೇ ಆಗುತ್ತದೆ. ಇನ್ನು ಕೆಲವೊಂದು ಸಾರಿ ಪ್ರಯಾಣ ಮಾಡುವಾಗ ಅಥವಾ ಯಾವುದೊ ಔತಣ ಕೂಟದಲ್ಲಿ(ಪಾರ್ಟಿಯಲ್ಲಿ) ಇದ್ದಾಗ ಅಥವಾ ಇನ್ನ್ಯಾರ ಜೊತೆಗೋ ಏನೋ ಸಂಭಾಷಣೆ ನಡೆಸುವಾಗ ಕೆಲವೊಂದು ವಿಷಯಗಳು ತುಂಬಾ ಸ್ವಾರಸ್ಯಕರಯೆನಿಸಿ ಅದರ ಬಗ್ಗೆ ಬರೆಯಬೇಕು ಅನಿಸುತ್ತದೆ ಆದರೆ ಆಗ ಲೇಖನಿ-ಪೇಪರ್ರೂ ಇರಲ್ಲ, ಬ್ಲಾಗ್ ನಲ್ಲಿ ಇಳಿಸೋಣವೆಂದರೆ ಲ್ಯಾಪ್ ಟಾಪ್ ಕೂಡ ಇರಲ್ಲ. ಎಲ್ಲೋ ಕಂಡ ಸನ್ನಿವೇಶ ಅಥವಾ ಘಟನೆಗಳನ್ನು ಬರಹಕ್ಕಿಳಿಸೋಣವೆಂದರೆ ನಂತರ ಆ ವಿಷಯ ಕೂಡ ಮರೆತು ಹೋಗುತ್ತದೆ. ಮತ್ತೆ ಅದೇ ರಾಗ, ಅದೇ ಹಾಡು.

ಕಥೆ ಕಾದಂಬರಿ ಓದುವಾಗ ಮನಸ್ಸು ಕಥಾನಕದ ಪಾತ್ರಧಾರಿಯಾಗಿ ಒಮ್ಮೆ ನಲಿದರೆ ಇನ್ನೊಮ್ಮೆ ತಾನೇ ಸ್ವತ: ಕಥೆಗಾರನಾಗಿ ಲೇಖಕನ ಬರಹದ ಶೈಲಿಯನ್ನು ಗಮನಿಸಿ ವಿಶ್ಲೇಷಿಸತೊಡಗುತ್ತದೆ. ಈ ಶೈಲಿ ಚೆನ್ನಾಗಿದೆ ನಾನು ಇದನ್ನೇ ಅಳವಡಿಸಿಕೊಳ್ಳಬೇಕು ಅಥವಾ ಲೇಖಕ ಈ ರೀತಿ ಬರೆಯೋದಕ್ಕಿಂತ ಹಾಗೆ ಬರೆದರೆ ಚೆನ್ನಾಗಿತ್ತು ಎಂದು ಅನಿಸುತ್ತದೆ. ಈ ಮನಸ್ಸೇ ವಿಚಿತ್ರ, ಅದ್ಯಾಕೆ ಹೀಗಿದೆಯೊ? ನನ್ನ ಮನಸ್ಸಷ್ಟೇ ಹೀಗೋ ಅಥವಾ ನಿಮ್ಮದೂ ಕೂಡ ಹೀಗೆನಾ? ನಿಮಗೂ ಹೀಗೆ ಆಗಿದೆಯಾ?