Saturday, October 8, 2016

ಮೂತ್ರ ಪ್ರಸಂಗ

ಒಂದು ದಿನ ನಮ್ಮಮ್ಮ ಹೇಳಿದಳು "ನಮ್ಮ ಬಾಗಿಲ ಮುಂದೆ ಒಮ್ಮೊಮ್ಮೆ ನೀರು ಎಲ್ಲಿಂದ ಬಂದು ಬೀಳುತ್ತೆ ಅಂತ ಗೊತ್ತಾಯಿತು, ಪಕ್ಕದ ಮನೆಯವರ ಮಗು ಬಂದು ಮೂತ್ರಿಸಿ ಹೋಗತಾ ಇದೆ, ನಾನು ಇವತ್ತು ಕಿಟಕಿಯಿಂದ ನೋಡಿದೆ" ಅಂತ. ಆ ಮಗುವಿಗೆ ೫ ವರ್ಷ, ಒಳ್ಳೆಯ ಆಂಗ್ಲ ಮಾಧ್ಯಮದ ಶಾಲೆಗೇ ಹೋಗತಾಯಿದ್ದಾನೆ, ಅವನೇನು ಸಂಸ್ಕಾರವಿಲ್ಲದ ವಾತಾವರಣದಿಂದ ಬಂದವನಲ್ಲ. ಅವನ ಈ ವಿಚಿತ್ರ  ವಿಷಯವನ್ನು ಆ ಮಗುವಿನ ಪಾಲಕರಿಗೆ ಹೇಳಿದೆವು. ಅವರು ನಮ್ಮಲ್ಲಿ  ಕ್ಷಮೆ ಕೇಳಿ, ಬೇಜಾರು ಮಾಡಿಕೊಳ್ಳುತ್ತಾ, ತಮ್ಮ  ಮಗು ಈ ರೀತಿ ತಮ್ಮ ಮನೆಯಲ್ಲೂ ಮಾಡುತ್ತದೆ, ಎಷ್ಟು ತಿಳಿ ಹೇಳಿದರೂ ಏನೂ ಪ್ರಯೋಜನ ವಾಗುತ್ತಿಲ್ಲ ಅಂದರು. ನನ್ನ ೨.೫ ವರ್ಷದ ಮಗ ಕೂಡ ಒಮ್ಮೊಮ್ಮೆ, ಇದ್ದಲ್ಲಿಯೇ ಈ ರೀತಿ ಮೂತ್ರಿಸಿ ತನ್ನ ತೀಟೆ ತೀರಿಸಿಕೊಳ್ಳುತ್ತಿದ್ದ. ಅವನಿಗೆ ಮೂತ್ರ ಬಂದರೆ ಬಚ್ಚಲ ಮನಗೆ ಹೋಗಿ ಮೂತ್ರಿಸಿ ನೀರು ಹಾಕುವ ಒಳ್ಳೆಯ ಅಭ್ಯಾಸ ಇದೆ. ಆದರೆ ಅವನಿಗೆ ಕೋಪ ಬಂದಾಗ ಅಥವಾ ನಾವು ಯಾವುದಾದರೂ ನಿರ್ಬಂಧ ಹೇರಿದಾಗ ಅವನು ತನ್ನ ಆಕ್ರೋಶ ಹೊರ ಹಾಕಲು ಮಾತ್ರ ಈ ರೀತಿ ಮಾಡುತ್ತಾನೆ ಅಂತ ನಮಗೆ ಗೊತ್ತಿತ್ತು. ಆದರೆ ಈ ಪಕ್ಕದ ಮನೆಯವರ ಹುಡುಗ ವಿನಾ ಕಾರಣ ಎಲ್ಲೆಂದರಲ್ಲಿ ಮೂತ್ರಿಸುತ್ತಾನೆ, ಅವನಿಗೆ ಕೋಪ, ಬೇಜಾರು, ಯಾವೂದು ಇರದೇ, ತಮ್ಮ ಮನೆಯೋ, ಬೇರೆಯವರ ಮನೆಯೋ, ಸೋಫಾ ಇದೆಯೋ, ಹಾಸಿಗೆ ಇದೆಯೋ  ಅಂತ ಏನೂ ಯೋಚಿಸದೆ ಎಲ್ಲಾಕಡೆಯೂ ಮೂತ್ರ ಹರಿಸುತ್ತಿದ್ದ. ಇದೆ ಗುಂಗಲ್ಲಿದ್ದ ನಾನು ಸ್ವಲ್ಪ ಇದರ ಬಗ್ಗೆ  ವಿಚಾರಮಾಡಲು ಶುರುವಿಟ್ಟುಕೊಂಡೆ.  ಸದಾ ಕಂಪ್ಯೂಟರ್ ಮುಂದೆ ಕುಳಿತಿರುವ ನನಗೆ ಸ್ವಲ್ಪ ಗೂಗಲ್ ಗೀಳು ಇರುವುದು ನಿಜ. ಅದಕ್ಕೆ ಈ ವಿಷಯವಾಗಿ ನಾನು ಗೂಗಲ್ ಅಂಕಲ್ ಗೆ ಕೇಳೋಣ ಅಂತ ಯೋಚಿಸಿ ಒಂದೆರಡು ಸಂಭಂದಿತ ಶಬ್ದಗಳನ್ನು ಹಾಕಿ ಹುಡುಕಿದೆ. ಅಬ್ಬಾ, ಈ ಪಾಶ್ಚಾತ್ಯರು ಆಗಲೇ ಇದರ ಬಗ್ಗೆ ತುಂಬಾ ಗಹನವಾಗಿ ಚರ್ಚಿಸುತ್ತಿದ್ದಾರೆ. ಅದಕ್ಕೆ ಸ್ಟ್ರೆಸ್, ಅಟ್ಯಾಚ್ಮೆಂಟ್ ಡಿಸ್ಆರ್ಡರ್, ಎಯಸ್ ಡಿ, ಇನ್ನೂ ಏನೇನೋ ಕಾರಣಗಳು ಅಂತ ಹೇಳತಿದ್ದಾರೆ. ಅದಕ್ಕೆ ಸಾಕಷ್ಟು ಪರಿಹಾರಗಳನನ್ನೂ ಕೂಡ ಪಟ್ಟಿಮಾಡಿ ವಿವರವಾಗಿ ಲೇಖನಗಳನ್ನು ಬರೆದಿದ್ದಾರೆ. ಒಂದೆರಡು ಲೇಖನ ಓದಿದ ಮೇಲೆ ನನಗನಿಸಿತು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಗೂಗಲ್ ಅಂಕಲ್ ಹತ್ರ ಹೋಗಿದ್ದು ನನ್ನ ಮೊದಲ ತಪ್ಪು ಅಂತ. ತಕ್ಷಣ ಅದನ್ನ ಅಲ್ಲಿಗೆ ಬಿಟ್ಟು, ನಾನು ಮೂತ್ರಿಸಲು ಓಡಿದೆ(ಮೂತ್ರಾಲಯಕ್ಕೆ).


1 comment:

  1. ಅಬ್ಬಾ ಎಂಥ ಹೋರಾಟದ ಮನೋಭಾವ , ಪ್ರಾಣೇಶ ಅವರ ಶಿದ್ಲಂಗಾ ನೆನಪಾದವು ☺☺

    ReplyDelete