Sunday, October 9, 2016

ಕರ್ನಾಟಕದ ಪ್ರಬುದ್ಧ ಪ್ರಜೆ

ಕರ್ನಾಟಕದ ರಾಜಕೀಯದಲ್ಲಿ ಹಲವು ವಿಶಿಷ್ಟಗಳಿವೆ. ರಾಜಕೀಯ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ತಕ್ಷಣಕ್ಕೆ ಅನಿಸುವುದು, ಇದು ಕೇವಲ ರಾಜಕಾರಿಣಿಗಳ ಆಟ ಮಾತ್ರ ಎಂದು. ಆದರೆ, ಅದರಲ್ಲಿ ಪ್ರಜೆಗಳ ಒಲವು ಅಥವಾ ಜನಮತ ಕೂಡ ಒಂದು ದೊಡ್ಡ ಪಾತ್ರವಹಿಸುತ್ತದೆ. ರಾಜಕಾರಿಣಿಗಳು ಯಾವುದೇ ಆಟ ಆಡಿದರೂ ಸಹ ನಂತರದಲ್ಲಿ ಪ್ರಜೆ ಕೊಡುವ ಅಭಿಪ್ರಾಯವೇ ಅಂತಿಮ. ಇದು ಕರ್ನಾಟಕದ ಪಾಲಿಗಂತೂ ಶತ ಪ್ರತಿಶತ ಸತ್ಯ. ಕರ್ನಾಟಕದ ಜನತೆ ಎಷ್ಟು ಪ್ರಬುದ್ಧರು, ವಿಚಾರವಂತರು ಅವರ ಆಯ್ಕೆಗಳು ಎಷ್ಟು ಸರಿಯಾಗಿವೆ ಅನ್ನುವದು ಪ್ರಶಂಸಾರ್ಹ. ಮೊದಲನೆಯದಾಗಿ ಕರ್ನಾಟಕದಲ್ಲಿ ಯಾವುದೇ ಪ್ರಾದೇಶಿಕ ಪಕ್ಷಕ್ಕೆ ಜನ ಮನ್ನಣೆ ಕೊಡಲಿಲ್ಲ ಅನ್ನುವ ಅಂಶ. ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಮತ್ತು ಅವುಗಳ ಕೇಂದ್ರ ಪಕ್ಷಗಳ ಜೊತೆಯಿರುವ ನಿರಂತರ ರಾಜಕೀಯ ಗುದ್ದಾಟ ಬೇರೆಯ ಚರ್ಚೆಯ ವಿಷಯವೇ ಆಗಿದೆ. ಇಲ್ಲಿ ಕರ್ನಾಟಕದ ಪ್ರಜೆಯೂ ಪ್ರಾದೇಶಿಕ ಪಕ್ಷಕ್ಕೆ ನಿರಾಕರಣೆ ಕೊಡುತ್ತ ಬಂದಿರುವುದನ್ನು ಮಾತ್ರ ಗಮನಿಸಬಹುದು. ಬಂಗಾರಪ್ಪನವರ ಕರ್ನಾಟಕ ಕಾಂಗ್ರೆಸ್ ಪಕ್ಷ (೧೯೯೪), ರಾಮಕೃಷ್ಣ ಹೆಗಡೆಯವರ ಲೋಕ ಶಕ್ತಿ(೧೯೯೭), ವಿಜಯ ಸಂಕೇಶ್ವರ ಅವರ ಕನ್ನಡ ನಾಡು(೨೦೦೬) ಇವು ಯಾವವೂ ಯಶಸ್ಸು ಕಾಣಲಿಲ್ಲ. ಇವೆಲ್ಲದರ ಪರಿಸ್ಥಿತಿ ನೋಡಿದ್ದ ಜನರು ಇನ್ನೇನು ಸಿದ್ದರಾಮಯ್ಯನವರು ಅಹಿಂದ ಪಕ್ಷ ಸ್ಥಾಪಿಸಿಯೇಬಿಟ್ಟರು ಎಂದು ಅಂದುಕೊಳ್ಳುವಷ್ಟರಲ್ಲಿ ಅದರ ಕೈಬಿಟ್ಟ ಅವರು ಕಾಂಗ್ರೆಸ್ ಪಕ್ಷ ಸೇರಿಕೊಂಡರು. ಅಹಿಂದ ಪಕ್ಷ ನಿರ್ಮಾಣ ಕೂಡ ಆಗಲಿಲ್ಲ. ಇನ್ನು ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷ, ಶ್ರೀರಾಮುಲು ಅವರ ಬಿಎಸ್ ಆರ್ ಕಾಂಗ್ರೆಸ್ ಕೂಡ ಧೀರ್ಘ ಕಾಲ ಉಳಿಯದೇ ಭಾಜಪದಲ್ಲಿ ಮರಳಿ ವಿಲಿನವಾದವು. ಕರ್ನಾಟಕ ಮಕ್ಕಳ ಪಕ್ಷ ಮತ್ತು ಸರ್ವೋದಯ ಕರ್ನಾಟಕ ಪಕ್ಷಗಳು ಖಾತೆ ತೆರೆದರೂ ಅವು ಬಹುಪಾಲು ಜನರಿಗೆ ಇನ್ನೂ ಅಪರಿಚಿತ ಪಕ್ಷಗಳೇ. ಇನ್ನೂ ಜಾತ್ಯಾತೀತ ಜನತಾ ದಳ ಸದ್ಯಕ್ಕೆ ತಾವು ಪ್ರಾದೇಶಿಕ ಪಕ್ಷ ಅಂತ ಬಿಮ್ಬಿಸಿಕೊಲ್ಲುತ್ತಿದೆ ಆದರೆ ಅಸಲಿಗೆ ಅದು ಒಂದು ಕೇಂದ್ರದ ಪಕ್ಷ ಒಡೆದು ಹಲವು ಭಾಗಗಳಾಗಿ ಕರ್ನಾಟಕದ ರಾಜಕೀಯಕ್ಕೆ ಸೀಮಿತವಾದ ಪಕ್ಷವೇ ಹೊರತು ಪ್ರಾದೇಶಿಕ ದೃಷ್ಟಿಯಿಂದ ಬೆಳೆದುಬಂದ ಪಕ್ಷವಲ್ಲ. ಒಟ್ಟಾರೆ ಹೇಳಬೇಕೆಂದರೆ ಪ್ರಾದೇಶಿಕ ಸಮಸ್ಯೆಗಳ ಪರಿಹಾರಕ್ಕೆ ಹೊಸ ರಾಜಕೀಯ ಪಕ್ಷದ ಅವಶ್ಯಕತೆಯಿಲ್ಲ ಎಂಬುದು ನಮ್ಮ ಜನರ ಬಲವಾದ ನಂಬಿಕೆ. ಇನ್ನೊಂದು ಹೊಸ ರಾಜಕೀಯ ಪಕ್ಷವೆಂದರೆ ಇನ್ನೊಂದು ಗೊಂದಲಕ್ಕೆ ಸಮ ಅಂದಂತೆ. ಇನ್ನು ಕರ್ನಾಟಕದಲ್ಲಿ ಆಚೆಯ ಪಕ್ಷಗಳಾದ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಎಐಎಡಿಎಂಕೆ, ಸಿಪಿಐ, ಶಿವಸೇನೆ ಹೀಗೆ ಹಲವು ಪಕ್ಷಗಳು ಅಸ್ತಿತ್ವ ತೋರಿಸಲು ಹೆಣಗಾಡಿದರೂ ಅವು ಯಾವವು ಇನ್ನೂವರೆಗೂ ಕಾಲುರಲೂ ಆಗಿಲ್ಲ.

ಎರಡನೇಯದಾಗಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳು ತಮ್ಮ ತಮ್ಮ ಭಾಷೆ, ಸಂಸ್ಕೃತಿಯಿಂದ ಸ್ವಲ್ಪ ಸಾಮ್ಯತೆ ಹೊಂದಿದ್ದರೂ, ರಾಜಕಾರಣದಲ್ಲಿ ಭಿನ್ನಗಾಗಿಯೇ ನಿಲ್ಲುತ್ತವೆ. ಅವಿಭಜಿತ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಬೆಳ್ಳಿತೆರೆಯ ತಾರೆಯರನ್ನು ರಾಜಕೀಯದಲ್ಲಿ ಅತಿಶಯೋಕ್ತಿಯಿಂದ ಅಟ್ಟಕ್ಕೆ ಏರಿಸಿದರೆ, ಕರ್ನಾಟಕದ ಜನ ತುಂಬಾ ಪ್ರಬುದ್ಧತೆಯಿಂದ  ನಮ್ಮ ಸಿನೆಮಾ ತಾರೆಯರನ್ನು ಆರಕ್ಕೆ ಏರಿಸದೆ, ಮೂರಕ್ಕೆ ಇಳಿಸದೆ ಅವರವರಿಗೆ ಸಲ್ಲುವ ಯೋಗ್ಯವಾದ ಗೌರವವನ್ನೇ ಕೊಟ್ಟಿದ್ದಾರೆ. ಸಿನೆಮಾದಲ್ಲಿ, ನಟನೆಯಲ್ಲಿ ಯಾರು ಎಷ್ಟೇ ಮೇಲೇರಿದರೂ ಕೂಡ ರಾಜಕೀಯದಲ್ಲಿ ಅವರು ತಮ್ಮ ಸಾಮರ್ಥ್ಯ, ಕೆಲಸಗಳನ್ನು ತೋರಿಸದಿದ್ದರೆ ಅವರನ್ನು ನಾವು ಬೆಳೆಸುವದಿಲ್ಲ ಅನ್ನುವದೇ ಕನ್ನಡ ಜನರ ಜನಾಭಿಪ್ರಾಯ. ಕೆಲಸ ಮಾಡಿದವರು ಸ್ವಲ್ಪ ಮಟ್ಟಿಗೆ ಬೆಳೆದಿದ್ದಾರೆ. ಅನಂತ್ ನಾಗ್, ಅಂಬರೀಷ್, ಉಮಾಶ್ರೀಯವರು ವಿಧಾನ ಸಭೆ ಪ್ರವೇಶಿಸಿ ಮಂತ್ರಿ ಪದವಿಯಿಂದ ಗೌರವಿಸಲ್ಪಟ್ಟರು, ಇನ್ನು ಪರಿಷತ್ ಮುಖಾಂತರ ಬಂದವರ ಲೆಕ್ಕವೇ ಬೇರೆ ಬಿಡಿ, ಅವರನ್ನು ಜನ ನೇರವಾಗಿ ಚುನಾಯಿಸುವದಿಲ್ಲವಲ್ಲ. ಹಿರಿಯ ನಟಿ ಜಯಂತಿ, ಜಗ್ಗೇಶ್, ರಮ್ಯಾ ಅಲ್ಪ ಸ್ವಲ್ಪ ಪ್ರಯತ್ನ ಮಾಡಿದರೂ ಕೂಡ ಅವರೂ ಅಷ್ಟಾಗಿ ರಾಜಕೀಯದಲ್ಲಿ ಮುಂದುವರೆಯಲಿಲ್ಲ. ಒಟ್ಟಾರೆ ಹೇಳಬೇಕೆಂದರೆ ಯಾವುದೇ ಸಿನೆಮಾ ತಾರೆಗೆ ಅಂಧಾಭಿಮಾನದಿಂದ ಕರೆದು ಕುರ್ಚಿ ಕೊಟ್ಟಿಲ್ಲ. ಸಿನೆಮಾ ಮಾತು ಬಂದಾಗ ಯಾರೇ ಎಂತಹದೇ  ಆರಾಧ್ಯ ದೇವರಾದರೂ ಕೂಡ ರಾಜಕೀಯದಲ್ಲಿ ಅವರು ತಮ್ಮ  ಯೋಗ್ಯತೆಯನ್ನು  ತೋರಿಸಲೇಬೇಕು ಅನ್ನುವದು ಜನಾಭಿಪ್ರಾಯ. ಬಣ್ಣದ ಬದುಕಿನ ಹೊಳಪಿನ ವರ್ಚಸ್ಸನ್ನು ರಾಜಕೀಯದಲ್ಲಿ ಅನಾಯಾಸವಾಗಿ ಬಳಸಿಕೊಳ್ಳಲು ಬಿಡುವರಲ್ಲ ನಮ್ಮವರು. ಪಕ್ಕದ ಆಂಧ್ರ, ತಮಿಳುನಾಡಿನಂತೆ, ಚಿತ್ರತಾರೆಯರ ಅನಾವಶ್ಯಕ ವೈಭವೀಕರಣ ಇಲ್ಲಿ ನಡೆಯುವದಿಲ್ಲ ಎನ್ನುವದನ್ನು ನಮ್ಮ ಕನ್ನಡದ ಜನ ಮತ್ತೆ ಮತ್ತೆ ಒತ್ತಿ ಒತ್ತಿ ಹೇಳುತ್ತಿದ್ದಾರೆ.

ಮೂರನೇಯ ಅಂಶವಾಗಿ ಹೇಳಬೇಕೆಂದರೆ, ಹೇಗೆ ಕರ್ನಾಟಕದಲ್ಲಿ ಯಾವುದೇ ಪ್ರಾದೇಶಿಕ ಪಕ್ಷಕ್ಕೆ ಜನ ಮನ್ನಣೆ ಕೊಡಲಿಲ್ಲವೋ ಹಾಗೆಯೇ ಮುಖ್ಯಮಂತ್ರಿಯ ಮಕ್ಕಳಿಗೆ ಆ ಸ್ಥಾನದ ವಾರಸುದಾರಿಕೆಯನ್ನು ಜನ ಕೊಟ್ಟಿಲ್ಲ. ಕೇವಲ ಕುಮಾರಸ್ವಾಮಿಯವರು ಮಾತ್ರ ಮುಖ್ಯಮಂತ್ರಿಯ ಮಗನಾಗಿ ಮತ್ತೆ ಮುಖ್ಯಮಂತ್ರಿಯಾದರು, ಆದರೆ ಅವರು ಜನಮನ್ನಣೆಯಿಂದ ಜನಾಭಿಪ್ರಾಯದಿಂದ ಮುಖ್ಯಮಂತ್ರಿಯಾದವರಲ್ಲ. ಅವರು ಮುಖ್ಯಮಂತ್ರಿಯಾಗುವ ಮುಂಚಿನ ಚುನಾವಣೆಯಲ್ಲಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಅಂತ ಅವರನ್ನು ಬಿಂಬಿಸಿರಲಿಲ್ಲ. ರಾಜಕೀಯದ ವಿಭಿನ್ನ ಸನ್ನಿವೇಶದಲ್ಲಿ ಅವರು ಮುಖ್ಯಮಂತ್ರಿಯಾದವರು. ಕುಮಾರಸ್ವಾಮಿಯವರಿಗಿಂತ ಮುಂಚಿನಿಂದಲೂ, ಬೊಮ್ಮಾಯಿ, ಬಂಗಾರಪ್ಪ, ಜೆ ಹೆಚ್ ಪಟೇಲ, ಗುಂಡುರಾವ್, ಅವರ ಮಕ್ಕಳು ಮತ್ತು ಕೆಂಗಲ್ ಹನುಮಂತಯ್ಯನವರ ಮೊಮ್ಮಗ ಎಲ್ಲರೂ ಕರ್ನಾಟಕ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ ಆದರೆ ಇವರಲ್ಲಿ ಯಾರೂ ಮುಖ್ಯಮಂತ್ರಿ ಗಾದಿ ಏರಲಿಲ್ಲ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಓಡಿಷಾ ರಾಜ್ಯಗಳಲ್ಲಿ ನಡೆದಂತೆ ವಂಶ ಪಾರಂಪರ್ಯ ರಾಜಕೀಯ ವಾರಸುದಾರಿಕೆ ಇಲ್ಲ ಸಲ್ಲ ಅನ್ನುವದು ನಮ್ಮ ಜನರ ಅಭಿಪ್ರಾಯ.

ಕೊನೆಯ ಅಂಶವೆಂದರೆ, ಸಾಮಾನ್ಯವಾಗಿ ಎಲ್ಲರೂ ಹೇಳುವಂತೆ ನಮ್ಮ ರಾಜ್ಯದಲ್ಲಿ ಯಾವ ಪಕ್ಷ  ಆಡಳಿತದ ಚುಕ್ಕಾಣಿ ಹಿಡಿಯುತ್ತದೆಯೋ ಅದರ ವಿರೋಧಿ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿ ಬರುತ್ತದೆ ಅನ್ನುವದು ಒಂದು ನಂಬಿಕೆ. ಅದು ಇತ್ತೀಚಿನ ನಾಲ್ಕು ಚುನಾವಣೆಯ ಫಲಿತಾಂಶದಿಂದ ಬರುವ ಅಭಿಪ್ರಾಯ ಮಾತ್ರ. ಕೇಂದ್ರದ ನಾಯಕರ ಮುಖ ನೋಡಿ, ಅವರನ್ನೇ ನಂಬಿ  ರಾಜ್ಯ ಸರಕಾರದ ಗದ್ದುಗೆಯನ್ನು ಆ ಪಕ್ಷಕ್ಕೆ ಕೊಡುವ ಹುಂಬುತನವನ್ನು ನಮ್ಮ ರಾಜ್ಯ ಮಾಡಿಲ್ಲ. ಇಲ್ಲಿ ಯಾರು ಸಲ್ಲುವರೋ ಅವರನ್ನು ಇಲ್ಲಿ ಆರಿಸಿ, ಅಲ್ಲಿ ಯಾರು ಸಲ್ಲುವರೋ ಅಲ್ಲಿ ಅವರನ್ನು ಅರಿಸುವದು ನಮ್ಮವರ ವಾಡಿಕೆಯಿದ್ದಂತೆ ಕಾಣುತ್ತದೆ. ಅದಕ್ಕೆ ಉದಾಹರಣೆ, ಇಡೀ ರಾಷ್ಟ್ರದಲ್ಲಿ ವಾಜಪೇಯಿ ಗಾಳಿ ಬೀಸುತ್ತಿದ್ದ ಕಾಲದಲ್ಲಿ ಕರ್ನಾಟಕದಲ್ಲಿ ಭಾಜಪ ಅಧಿಕಾರಕ್ಕೆ ಬರಲಿಲ್ಲ, ಕೇಂದ್ರದ ನಾಯಕರ ಹೆಸರು ನೋಡಿ ಲೋಕಸಭೆ ಅಭ್ಯರ್ಥಿಗೆ ಮತ ಹಾಕಿದರೂ, ವಿಧಾನಸಭೆ ಅಭ್ಯರ್ಥಿಗಳಿಗೆ ಇಲ್ಲಿಯ ನಾಯಕರ ಮುಖ ನೋಡಿಯೇ ಮತ ಹಾಕುವರು.

ಕರ್ನಾಟಕದ ಇತಿಹಾಸದಲ್ಲಿ ಜನಮತ ಯಾವಾಗಲೂ ಸರಿಯಾದ ಆಯ್ಕೆಯನ್ನೇ ಮಾಡಿದೆ. ಜನಮತ ಯಾವಾಗಲೂ ಜಯಸಾಧಿಸಿದೆ. ಇನ್ನು ಅಧಿಕಾರಕ್ಕೆ ಬಂದ ಯಾವ ಪಕ್ಷ  ಜನರ ಆಶೋತ್ತರಗಳನ್ನು ಎಷ್ಟು ಈಡೆರಿಸಿದೆ ಅನ್ನುವದು ಬೇರೆಯ ವಿಷಯ, ಬೇರೆಯ ಲೆಕ್ಕಾಚಾರ.

4 comments:

  1. ಚೆನ್ನಾಗಿದೆ ಮುಂದುವರೆಸಿ.....

    ReplyDelete
  2. Excellent political analysis, suits to editorial page

    ReplyDelete
  3. ಅದ್ಭುತವಾದ ರಾಜಕೀಯ ವಿಮರ್ಶೆ, keep writing

    ReplyDelete