Sunday, April 9, 2017

ರಾಜಯೋಗಿ - ಪುಸ್ತಕ ಪರಿಚಯ

ಪುಸ್ತಕ -

ಇದು ಆನಂದಕಂದ ಎಂಬ ಅಂಕಿತನಾಮದಿಂದ ಪ್ರಸಿದ್ಧರಾದ ಡಾ|| ಬೆಟಗೇರಿ ಕೃಷ್ಣಶರ್ಮ ಅವರ ಕನ್ನಡದ ಒಂದು ಕಿರು ಕಾದಂಬರಿ. ಕೇವಲ ೧೫೦ ಪುಟಗಳ ಈ ಪುಸ್ತಕಕ್ಕೆ  ೧೯೯೩ರಲ್ಲಿ ಹುಬ್ಬಳ್ಳಿಯ ಸಾಹಿತ್ಯ ಭಂಡಾರ ಪ್ರಕಾಶಕರಾಗಿದ್ದರು. ಇದೊಂದು ಐತಿಹಾಸಿಕ ಕಾದಂಬರಿಯಾದುದರಿಂದ ಕೆಲವು ವಿಶ್ವವಿದ್ಯಾಲಯಗಳು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡು ಆನಂದಕಂದರಿಗೆ ಗೌರವ ಸಲ್ಲಿಸಿದ್ದಾವೆ.

ಕಾಲಘಟ್ಟ -

ವಿಜಯನಗರದ ಮೊದಲ ರಾಜವಂಶವಾದ ಸಂಗಮ ವಂಶದ ಸಂಧ್ಯಾಕಾಲದ ಸುತ್ತ ಹೆಣೆದ ಕಥೆ ಇದಾಗಿದೆ. ಎರಡೆನೇಯ ವಿರುಪಾಕ್ಷರಾಯನ  ದುರಾಡಳಿತದಿಂದ ಸಂಗಮ ವಂಶದ ಅವನತಿಯಾಗಿ ಸಾಳುವ ವಂಶದ ಉದಯ ಆಗುವ ಪರಿಯ ಬಗ್ಗೆ ಬರೆದ ಕಾದಂಬರಿಯಿದಾಗಿದೆ. ಕೆಲವು ಐತಿಹಾಸಿಕ ನೈಜ ವ್ಯಕ್ತಿಗಳ ಜೊತೆಗೆ ಹಲವು ಕಾಲ್ಪನಿಕ ಪಾತ್ರಗಳೊಂದಿಗೆ ಕಥೆಯು ತುಂಬಾ ಸೊಗಸಾಗಿ ಮೂಡಿಬಂದಿದೆ. ಅದಕ್ಷ ದೊರೆ ಹಾಗೂ ಕಪಟ ಮುಸ್ಲಿಂ ವೈರಿಗಳಿಂದ ವಿಜಯನಗರವು ಬಸವಳಿಯುತ್ತಿರುವಾಗ ಅಲ್ಲಿನ ಆಗುಹೋಗುಗಳನ್ನು ತುಂಬಾ ನಿಜ ಎನಿಸುವ ರೀತಿಯಲ್ಲಿ ಆನಂದಕಂದ ಅವರು ಬರೆದಿದ್ದಾರೆ. ಪೋರ್ತುಗೀಸರ ಉಪಸ್ಥಿತಿ ಅದೇ ಕಾಲದಲ್ಲಿ ಇದ್ದರೂ ಕೂಡ  ಅದನ್ನು ಕಾದಂಬರಿ ರಚಿಸುವಾಗ ಪರಿಗಣಿಸಿಲ್ಲ. ರಾಜಕೀಯದ ತಂತ್ರ-ಕುತಂತ್ರ, ರಾಜನಿಷ್ಠೆ, ನಾಡಭಕ್ತಿ ಎಲ್ಲವೂ ಸಮಸಮವಾಗಿ ಹೊಂದಿಸಿ ಯಾವುದೂ ಉತ್ಪ್ರೆಕ್ಷೆಯೇನಿಸದಂತೆ ಅಚ್ಚುಕಟ್ಟಾಗಿ ಬರೆಯಲಾಗಿದೆ. ಕೊನೆಯಲ್ಲಿ ವಿರುಪಾಕ್ಷರಾಯನ ಹತ್ಯೆಯಾದಾಗ ರಾಣಿಯರೆಲ್ಲ ಸತಿ ಸಹಗಮನಕ್ಕೆ ಆಹುತಿಯಾಗುವದು ಕೇವಲ ಕಾಲ್ಪನಿಕವೋ ಅಥವಾ ಅದೂ ಕೂಡ ಐತಿಹಾಸಿಕ ನೈಜಘಟನೆಯೋ  ಸ್ಪಷ್ಟವಾಗಿಲ್ಲ. 

ಪ್ರಧಾನ ಪಾತ್ರಗಳು -

ಸಾಳುವ ವಂಶದ ನರಸಿಂಹನಾಯಕ ವಿರುಪಾಕ್ಷರಾಯನ ಆಡಳಿತದಲ್ಲಿ  ಒಬ್ಬ ದಕ್ಷ ಅಧಿಕಾರಿಯಾಗಿದ್ದು ವಿಜಯನಗರದ ಸಾರ್ವಭೌಮತ್ವಕ್ಕೆ ಶ್ರಮಿಸುವ ದಂಡನಾಯಕನಂತೆ ಬಿಂಬಿಸಲಾಗಿದೆ. ನರಸಿಂಹ ನಾಯಕನಿಗೆ ತಾನೇ ಸ್ವತಃ ಮುಂದಿನ ರಾಜನಾಗಬೇಕೆಂಬ  ಮಹತ್ವಾಕಾಂಕ್ಷೆಯಿತ್ತು ಅನ್ನುವದನ್ನು ಎಲ್ಲಿಯೂ ಸಂಶಯ ಮೂಡುವ ಹಾಗೇ ಬರೆದಿಲ್ಲ. ಬದಲಿಗೆ ಸಂಗಮ ವಂಶಸ್ತನಾದ ರಾಜಶೇಖರನಿಗೆಯೇ ರಾಜಪಟ್ಟ ನೀಡುವ ರಾಜಧರ್ಮ ನರಸಿಂಹನಾಯಕನಿಗೆ ಇತ್ತು ಅಂತ ತೋರಿಸಲಾಗಿದೆ. ಆದರೆ ಇತಿಹಾಸ ನೋಡಿದರೆ ಗೊತಾಗುತ್ತದೆ ನರಸಿಂಹನಾಯಕನು, ವಿರುಪಾಕ್ಷರಾಯನ ನಂತರ ತಾನೇ ಗದ್ದುಗೆ ಏರಿದನೆಂದು.

ಕಥಾನಾಯಕ ರಾಜಕುಮಾರನಾದರೂ ಯೋಗಿಯಂತೆ ಜೀವಿಸುವದರಿಂದ ಬಹುಶಃ ಕಾದಂಬರಿಗೆ ರಾಜಯೋಗಿ ಅಂತ ಹೆಸರಿಟ್ಟಿರಬಹುದು ಅಥವಾ ಅವನು ವಿರುಪಾಕ್ಷರಾಯನ ನಂತರ ರಾಜನಾಗಲಿಲ್ಲ ಅನ್ನುವ ಕಾರಣಕ್ಕೆ ಪುಷ್ಟಿಕೊಡಲು ಅವನ ವ್ಯಕ್ತಿತ್ವವನ್ನು ಯೋಗಿಯಂತೆ ಕಥೆಯಲ್ಲ್ಲಿ ಬೆಳೆಸಿರಬಹುದು. ರಾಜಶೇಖರನ ತಮ್ಮ ಪೆದ್ದರಾಯ ರಾಜನಾಗಲಿ ಅಂತ ರಾಜಶೇಖರನ ಇಚ್ಛೆಯಿತ್ತೆಂದು ಕೊನೆಯಲ್ಲಿ ಹೇಳಿದರೂ ಪೆದ್ದರಾಯ ಅತೀ ಕಡಿಮೆ ಸಮಯ ರಾಜನಾಗಿದ್ದ ಅಂತ ಇತಿಹಾಸದಿಂದ ಗೊತ್ತಾಗುತ್ತದೆ. ಬಹುಶಃ ಅದಕ್ಕೆಯೇ ರಾಜಶೇಖರ ಮತ್ತು ನರಸಿಂಹನಾಯಕನಿಗೆ ಕಾದಂಬರಿಯಲ್ಲಿ  ಸಿಕ್ಕಷ್ಟು ಪ್ರಾಶಸ್ತ್ಯ ಪೆದ್ದರಾಯನಿಗೆ ಸಿಕ್ಕಿಲ್ಲ. ಒಂದೇ ವರುಷದಲ್ಲಿ ನರಸಿಂಹನಾಯಕ ರಾಜನಾಗಿ ಸಾಳುವ ವಂಶದ ಅಧಿಪತ್ಯ ಸ್ಥಾಪಿಸಿದುದು ನಿಜ ಸಂಗತಿ.

ಪುಷ್ಟಿ ಕೊಡುವ ಪಾತ್ರಗಳು - 

ಪ್ರೇಮಾನುರಾಗಿಗಳಾಗಿ ರಾಜಶೇಖರ-ಹೇಮಾಂಬಿಕೆ ಮತ್ತು ದಿಲಾವರ್ ಖಾನ್-ರೋಷನಾ, ಕಾಮುಕ-ವ್ಯಸನಿಯಾಗಿ ವಿರುಪಾಕ್ಷರಾಯ, ಮುಂಗೋಪಿಯಾಗಿ ಪೆದ್ದರಾಯ, ಮಮತೆಯ ಮೂರ್ತಿಯಾಗಿ ಗೌರಾಂಬಿಕೆ, ಸಮಚಿತ್ತ ಬುದ್ಧಿಕುಶಲನಾಗಿ ನರಸಿಂಹನಾಯಕ ಹೀಗೆ ವಿವಿಧ ಸ್ವಭಾವ ಹೊಂದಿರುವ ವಿವಿಧ ಪಾತ್ರಗಳೊಂದಿಗೆ ಕಥೆ ರಸವತ್ತಾಗಿದೆ.

No comments:

Post a Comment