Sunday, April 9, 2017

ತಾಯಿ

ಅಮ್ಮನ ಬಗ್ಗೆ ಎಷ್ಟೋ ಜನ ಕಥೆ, ಕಾದಂಬರಿ, ಕವನ, ಲೇಖನಗಳನ್ನು ಬರೆದಿದ್ದಾರೆ, ಆದರೆ ಅಮ್ಮನ ಸುತ್ತ ಏನೇ ಏಷ್ಟೇ ಬರೆದರೂ ಅದು ನಿತ್ಯ ನೂತನ. ಪ್ರತಿ ಮಗುವಿಗೂ ತನ್ನ ತಾಯಿ ವಿಶಿಷ್ಟ, ವಿಶೇಷ. ತಾಯಿಯು ನಮಗಾಗಿ ಮಾಡಿದ ಒಂದು ಚಿಕ್ಕ ತ್ಯಾಗವನ್ನು ಕೂಡ ನಾವು ಕಡೆಗಾಣಿಸಬಾರದು. ತಾಯಿಯ ಋಣ ತೀರಿಸಲಿಕ್ಕಾಗದಿದ್ದರೂ ಅವಳ ತ್ಯಾಗ, ಮಮತೆಗಳನ್ನು ಗುರುತಿಸಿ ಗೌರವಿಸೋಣ. ಅಂತಹ ನನ್ನ ಒಂದು ಪ್ರಸಂಗ ನಿಮ್ಮ ಜೊತೆ ಹಂಚಿಕೊಳ್ಳುವೆ.

ನಾನು ಬಹುಶಃ ಪ್ರೌಢಶಾಲೆ ಮುಗಿಸಿ ಕಾಲೇಜು ಮೆಟ್ಟಿಲೇರಿದ ಸಮಯವಿರಬಹುದು. ಸ್ವಲ್ಪ ವೈಚಾರಿಕತೆ ಬೆಳೆಯೋ ಸಮಯ ಅನ್ನಿ. ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ಏನಾದರೂ ವಿಶೇಷ ತಿಂಡಿ ಮಾಡಿದಾಗ ಅಥವಾ ಆಚೆಯಿಂದ ಯಾವುದಾದರೂ ವಿಶಿಷ್ಟ ತಿನ್ನುವ ಪದಾರ್ಥ ಮನೆಗೆ ಬಂದಾಗ ನಾನು ತಿನ್ನಷ್ಟು ತಿಂದು ಇನ್ನು ಬೇಕು ಅನಿಸಿದಾಗ ಅಮ್ಮನ ತಟ್ಟೆಯಿಂದ ತೆಗೆದುಕೊಂಡು ತಿನ್ನುತ್ತಿದ್ದೆ. ಆಗ ನಾನು ನಮ್ಮಮ್ಮನಿಗೆ ಕೇಳಿದೆ "ಮಮ್ಮಿ, ನೀ ಏನಾದರೂ ತಿನ್ನುವಾಗ 'ನನಗ ಅದು ಬೇಕು ಕೊಡು' ಅಂತ ನಾ ಅಂದಾಗ ನೀ ಥಟ್ಟನೇ ನನಗ ತಿನ್ನೋಕ್ಕೆ ಕೊಡತಿಯಲ್ಲ, ನಿನಗ ಅದನ್ನ ತಿನ್ನಬೇಕು ಅಂತ ಅನಿಸುದಿಲ್ಲಾ" ಅಂತ. ಅದಕ್ಕೆ ನಮ್ಮಮ್ಮ ಒಂದೇ ಸಾಲಿನ ಉತ್ತರ ಕೊಟ್ಟಳು "ಯಾಕ್ ಅನಿಸುದ್ದಿಲ್ಲ, ನನಗೂ ತಿನ್ನಬೇಕು ಅನಿಸತೈತಿ" ಅಮ್ಮ ಉತ್ಪ್ರೇಕ್ಷೆಯಿಲ್ಲದೆ ವಾಸ್ತವ ನುಡಿದಿದ್ದಳು. ನಾನು ಮತ್ತೆ ಮರುಪ್ರಶ್ನೆ ಹಾಕಲಿಲ್ಲ ಹಾಗೆಯೇ ಅದರ ನಂತರ ಅಮ್ಮನ ತಟ್ಟೆಯಿಂದ ತೆಗೆದುಕೊಂಡು ತಿನ್ನುವದು ಬಿಟ್ಟುಬಿಟ್ಟೆ. ತನಗೆ ತಿನ್ನುವ ಮನಸ್ಸಿದ್ದರೂ ನಮ್ಮಮ್ಮ ನಾ ಬೇಡಿದಾಕ್ಷಣ ನನಗೆ ಕೊಡತಾಳಲ್ಲ ಅಂತ ನೋವಾಗಿತ್ತು. ಆಗ ಅಮ್ಮನ ಆ ಮಾತು ಸ್ವಲ್ಪ ಅರ್ಥ ಮಾಡಿಕೊಂಡಿದ್ದೆ. ಆದರೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಅನುಭವಿಸಿದ್ದು ಈಗ ಸುಮಾರು ವರ್ಷಗಳ ನಂತರ. ಈಗ ನಾನು ಮಗನಿಗೆ ಅಪ್ಪನಾಗಿ, ಅವನಲ್ಲಿ ನನ್ನನ್ನು ನಾ ಕಂಡು, ನಾನು ಚಿಕ್ಕವನಿದ್ದಾಗ ನನ್ನ ತಾಯಿಗೆ ಹೀಗೆಯೇ ಕೆಳಿರಬಹುದಲ್ಲ, ಹೀಗೆಯೇ ಮಾಡಿರಬಹುದಲ್ಲವೇ ಅಂತಲ್ಲಾ ಯೋಚಿಸುತ್ತೇನೆ.

ನನಗೆ ಚಿಕ್ಕಂದಿನಿಂದ ಶೇಂಗಾ ಅಂದರೆ ತುಂಬಾ ಇಷ್ಟ. ಹಗಲು ರಾತಿಯೇನ್ನದೆ ಮನೆಯಲ್ಲಿ ಎಲ್ಲಿಯೇ ಬಚ್ಚಿಟ್ಟರೂ ಅದನ್ನು ಬೇಕಾದಾಗ ಹುಡುಕಿ ತಿನ್ನುತ್ತಿದ್ದೆ. ಈಗ ನನ್ನ ಮಗ, ನಾ ತಿನ್ನುವ ಅವಲಕ್ಕಿ, ಉಪ್ಪಿಟ್ಟು, ಚೂಡಾಗಳಲ್ಲಿಯ ಒಂದು ಶೇಂಗಾ ನನಗೆ ತಿನ್ನಲ್ಲಿಕ್ಕೆ ಬಿಡುವದಿಲ್ಲ, ಎಲ್ಲವನ್ನೂ ಹೆಕ್ಕಿ ಹೆಕ್ಕಿ ತಾನೇ ತಿಂದು ಬಿಡುತ್ತಾನೆ. ನಾನು ಇಷ್ಟು ದೊಡ್ಡವನಾದರೂ ನನಗೆ ಶೇಂಗಾ ಮೇಲಿನ ವ್ಯಾಮೋಹವೇನೂ ಕಡಿಮೆಯಾಗಿಲ್ಲ. ನನ್ನಿಷ್ಟದ ಪದಾರ್ಥ ನನ್ನ ಮಗ ತೆಗೆದುಕೊಂಡು ತಿಂದರೆ, ಬೇರೆ ಏನೂ ಅನಿಸುವದಿಲ್ಲ ಮಗನ ಆಸೆಯೀಡೆರಲಿ ಅನ್ನುವದು ಮಾತ್ರ ಮುಖ್ಯ ಅನಿಸುತ್ತೆ. ನಾವು ತಂದೆ-ತಾಯಿಯಾದಾಗಲೇ ಗೊತ್ತಾಗೋದು, ನಮ್ಮ ತಂದೆ-ತಾಯಿಗೆ ನಾವು ಎಷ್ಟೆಲ್ಲಾ ಗೊಳಿಟ್ಟಿದ್ದಿವಿ ಅಂತ. ಈಗ ಅನಿಸುತ್ತೆ ಮಗು ಒಂದು ತುತ್ತು ತಿಂದರೂ ಕೂಡ ಅಪ್ಪ-ಅಮ್ಮನಿಗೆ ಎಷ್ಟೋ ಸಂತೋಷ ಆಗುತ್ತದೆಯಲ್ಲಾ ಅಂತ. ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ನಮ್ಮ ತಾಯಿ ನನ್ನನ್ನು ಹೇಗೆ ಬೆಳೆಸಿದಳು ಅನ್ನುವದು ನನಗೆ ಗೊತ್ತಿಲ್ಲ, ನೆನಪೂ ಇಲ್ಲ. ಈ ಸಣ್ಣ ಸಣ್ಣ ವಿಷಯಗಳನ್ನು ನಮಗೆ ಅಮ್ಮನೂ ಹೇಳಲ್ಲ, ಬೇರೆ ಯಾರೂ ತಿಳಿಸೋಲ್ಲ. ಆದರೆ ಈಗ ನನ್ನ ಮಗ ನನಗೆ ಅದನ್ನೆಲ್ಲ ತನ್ನಿಂದ ನನಗೆ ತೋರಿಸಿಕೊಡುತ್ತಿದ್ದಾನೆ.

ಪ್ರತಿ ತಾಯಿಯೂ ಬರಿ ಮಮತೆಯ ಮೂರ್ತಿ ಅಷ್ಟೇ ಅಲ್ಲ ಅವಳು ತ್ಯಾಗದ ಸಂಕೇತ ಕೂಡ. ಮಗುವಿಗಾಗಿ ತಾನು ತಿನ್ನುವದನ್ನು ಬಿಟ್ಟು ಅವನಿಗೆ ತಿನಿಸುವಳು. ಮಗುವಿನ ನಿದ್ದೆಗಾಗಿ ತಾನು ನಿದ್ದೆಗೆಡುವಳು. ಮಗುವಿಗಾಗಿ ತಾಯಿ ಮಾಡಿದ ತ್ಯಾಗ, ಅನುಭವಿಸಿದ ಕಷ್ಟ ಅವಳಿಗೆ ಮಾತ್ರ ಗೊತ್ತು ಆದರೆ ಆಕೆ ಅದನ್ನು ಹೇಳುವದಿಲ್ಲ, ತೋರಿಸಿಕೊಡುವುದೂ ಇಲ್ಲ. ನಾವು ಅರ್ಥ ಮಾಡಿಕೊಳ್ಳಬೇಕು. ನಮಗೆ ಅರ್ಥವಾಗುವದು ಕೂಡ ಸ್ವಲ್ಪ ತಡವಾಗಿಯೇ.

No comments:

Post a Comment